ADVERTISEMENT

ಉಳ್ಳಾಗಡ್ಡಿ ಯಥಾಸ್ಥಿತಿ, ಶುಂಠಿ ಕುಸಿತ

ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ದುಬಾರಿ ಬೆಲೆಯ ಟರ್ಕಿ ಈರುಳ್ಳಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 26 ಡಿಸೆಂಬರ್ 2019, 19:30 IST
Last Updated 26 ಡಿಸೆಂಬರ್ 2019, 19:30 IST
ಹೊಸಪೇಟೆಯ ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿಸುತ್ತಿರುವ ಮಹಿಳೆ
ಹೊಸಪೇಟೆಯ ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿಸುತ್ತಿರುವ ಮಹಿಳೆ   

ಹೊಸಪೇಟೆ: ಮೂರ್ನಾಲ್ಕು ವಾರಗಳಾದರೂ ಉಳ್ಳಾಗಡ್ಡಿ ದರದಲ್ಲಿ ಯಾವುದೇ ವ್ಯತ್ಯಾಸ ಉಂಟಾಗಿಲ್ಲ. ಆದರೆ, ಇತರೆ ತರಕಾರಿಗಳ ದರದಲ್ಲಿ ಏರುಪೇರು ಉಂಟಾಗಿದೆ.

ಈಗಲೂ ಚಿಕ್ಕ ಗಾತ್ರದ ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ ₹80 ಇದೆ. ಮಧ್ಯಮ ಹಾಗೂ ದೊಡ್ಡ ಗಾತ್ರದ್ದು ₹100ರಿಂದ 120ಕ್ಕೆ ಮಾರಾಟ ಮಾಡಲಾಗುತ್ತಿದೆ. ಇದೇ ವೇಳೆ ಟರ್ಕಿ ಈರುಳ್ಳಿಯೂ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಪ್ರತಿ ಕೆ.ಜಿ.ಗೆ ₹150ರಿಂದ 180 ದರ ಇದೆ. ದೊಡ್ಡ ಗಾತ್ರದಿಂದ ಕೂಡಿರುವ ಒಂದು ಈರುಳ್ಳಿಯೇ ಅರ್ಧ ಕೆ.ಜಿ.ಯಷ್ಟು ಆಗುತ್ತದೆ. ಹೀಗಾಗಿ ಗ್ರಾಹಕರು ಅದರ ಮೊರೆ ಹೋಗದೇ ಸ್ಥಳೀಯ ಉಳ್ಳಾಗಡ್ಡಿಯತ್ತ ಮುಖ ಮಾಡಿದ್ದಾರೆ.

ಇದೇ ವೇಳೆ ಗಗನಕ್ಕೆ ಏರಿದ್ದ ಶುಂಠಿ, ಮೆಣಸಿನಕಾಯಿ, ಸೌತೆಕಾಯಿ ದರದಲ್ಲಿ ಭಾರಿ ಕುಸಿತ ಉಂಟಾಗಿದೆ. ಹಿಂದಿನ ವಾರ ಪ್ರತಿ ಕೆ.ಜಿ. ಶುಂಠಿ ₹180ರಿಂದ ₹200 ಇತ್ತು. ಈ ವಾರ ಅದು ₹80ರಿಂದ ₹100ಕ್ಕೆ ತಗ್ಗಿದೆ. ಪ್ರತಿ ಕೆ.ಜಿ. ಸೌತೆಕಾಯಿ ಬೆಲೆ ಸದ್ಯ ₹20ರಿಂದ ₹25 ಇದ್ದರೆ, ಮೆಣಸಿನಕಾಯಿ ದರ ಪ್ರತಿ ಕೆ.ಜಿ. ₹20ಕ್ಕೆ ತಗ್ಗಿದೆ. ಹೋದ ವಾರ ಸೌತೆಕಾಯಿ ಪ್ರತಿ ಕೆ.ಜಿ. ಬೆಲೆ ₹50ರಿಂದ ₹60, ಮೆಣಸಿನಕಾಯಿ ₹30ರಿಂದ ₹40 ಇತ್ತು.

ADVERTISEMENT

ಆಲೂಗಡ್ಡೆ ದರದಲ್ಲಿ ಸ್ವಲ್ಪ ಏರಿಕೆ ಉಂಟಾಗಿದೆ. ಹೋದ ವಾರ ಪ್ರತಿ ಕೆ.ಜಿ. ಆಲೂ ₹20 ಇತ್ತು. ಈ ವಾರ ಅದು ₹30ಕ್ಕೆ ಹೆಚ್ಚಾಗಿದೆ. ಕ್ಯಾರೆಟ್‌ ₹70ರಿಂದ ₹80ಕ್ಕೆ ಏರಿದೆ. ಬೆಂಡೆಕಾಯಿ, ಚವಳಿಕಾಯಿ, ಎಲೆಕೋಸು, ಹೂಕೋಸು, ಬೀನ್ಸ್‌ ದರ ಯಥಾಸ್ಥಿತಿಯಲ್ಲಿದೆ.

ಮಧ್ಯಮ ಗಾತ್ರದ ಕೊತ್ತಂಬರಿ, ಮೆಂತೆ ತಲಾ ಒಂದು ಕಟ್ಟಿನ ಬೆಲೆ ₹5 ಇದೆ. ಮಧ್ಯಮ ಗಾತ್ರದ ನಿಂಬೆಕಾಯಿ ₹10ಕ್ಕೆ ಐದು ಇದೆ. ಮಧ್ಯಮ ಗಾತ್ರದ ಒಂದು ತೆಂಗಿನ ಬೆಲೆ ₹20 ಇದೆ. ಹೋದ ವಾರವೂ ಇದೇ ದರ ಇತ್ತು.

ಪೇರಲ ಹಣ್ಣು ಮಾರುಕಟ್ಟೆಗೆ ಅಧಿಕವಾಗಿ ಬರುತ್ತಿರುವುದರಿಂದ ಅದರ ಬೆಲೆ ತಗ್ಗಿದೆ. ಸದ್ಯ ₹40ರಿಂದ ₹50ಕ್ಕೆ ಪ್ರತಿ ಕೆ.ಜಿ. ಪೇರಲ ಮಾರಾಟ ಮಾಡಲಾಗುತ್ತಿದೆ. ದೇಶಿ ಸೇಬು ಪ್ರತಿ ಕೆ.ಜಿ. ಗೆ ₹100, ರಾಯಲ್‌ ಸೇಬು ₹160ರಿಂದ ₹180, ದಾಳಿಂಬೆ ₹70ರಿಂದ ₹80, ನಾಗಪುರ ಕಿತ್ತಳೆ ₹50ರಿಂದ ₹60 ಪ್ರತಿ ಕೆ.ಜಿ.ಗೆ ಮಾರಾಟ ಮಾಡಲಾಗುತ್ತಿದೆ. ಪೇರಲ ಹಣ್ಣು ಹೊರತುಪಡಿಸಿದರೆಉಳಿದೆಲ್ಲ ಹಣ್ಣಿನ ಬೆಲೆ ಯಥಾಸ್ಥಿತಿಯಲ್ಲಿದೆ. ಹಿಂದಿನ ವಾರ ಪೇರಲ ಹಣ್ಣು ಪ್ರತಿ ಕೆ.ಜಿ.ಗೆ ₹60ರಿಂದ ₹70 ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.