ADVERTISEMENT

ಸಿರುಗುಪ್ಪ: ಭತ್ತದ ಗದ್ದೆಗಳು ಖಾಲಿ ಖಾಲಿ

ನೀರಿನ ಕೊರತೆ: ಸೋನಾ ಮಸೂರಿ ಭತ್ತ ನಾಟಿ ಇಲ್ಲ

ಎಂ.ಬಸವರಾಜಯ್ಯ
Published 2 ಆಗಸ್ಟ್ 2019, 19:30 IST
Last Updated 2 ಆಗಸ್ಟ್ 2019, 19:30 IST
ಸಿರುಗುಪ್ಪ ತಾಲ್ಲೂಕಿನಲ್ಲಿ ಭತ್ತ ಗದ್ದೆಗಳು ಬಿಕೋ ಎನ್ನುತ್ತಿವೆ
ಸಿರುಗುಪ್ಪ ತಾಲ್ಲೂಕಿನಲ್ಲಿ ಭತ್ತ ಗದ್ದೆಗಳು ಬಿಕೋ ಎನ್ನುತ್ತಿವೆ   

ಸಿರುಗುಪ್ಪ: ಭತ್ತದ ಕಣಜವೆಂದೇ ಹೆಸರಾದ ತಾಲ್ಲೂಕಿನಲ್ಲಿ ಮಳೆ ಮತ್ತು ನೀರಿನ ಕೊರತೆಯಿಂದ ಭತ್ತದ ಕೃಷಿ ಚಟುವಟಿಕೆ ಇಲ್ಲದೇ ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಮುಂಗಾರು ಮಳೆಯ ವೈಫಲ್ಯ ಮತ್ತು ನದಿ, ಹಳ್ಳಗಳಲ್ಲಿ ಜಲ ಸಂಪನ್ಮೂಲ ಕ್ಷೀಣಿಸಿ ಈ ವರ್ಷದ ಮಳೆಗಾಲದ ಸುಗ್ಗಿ ಸೋನಾ ಮಸೂರಿ ಭತ್ತದ ಕೃಷಿಗೆ ತೀವ್ರ ಹಿನ್ನಡೆಯಾಗಿದೆ.

ಪ್ರತಿ ವರ್ಷ ಸಾಮಾನ್ಯವಾಗಿ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಜೂನ್‍ ಹಾಗೂ ಜುಲೈನಲ್ಲಿ ಸೋನಾಮಸೂರಿ ಭತ್ತದ ನಾಟಿ ಪ್ರಕ್ರಿಯೆ ನಡೆಯುತ್ತಿತ್ತು. ಮಿಕ್ಕುಳಿದವರು ಆಗಸ್ಟ್ ಮೂರನೇ ವಾರದ ವರೆಗೂ ಅಲ್ಪಾವಧಿ ತಳಿಯ ಭತ್ತವನ್ನು ನಾಟಿ ಮಾಡುತ್ತಿದ್ದರು.

ADVERTISEMENT

ಆದರೆ, ಈ ವರ್ಷ ಮಳೆಯ ಕೊರತೆಯಿಂದ ತುಂಗಭದ್ರಾ ಜಲಾಶಯದಲ್ಲಿ ಸಾಕಷ್ಟು ನೀರು ಹರಿದು ಬಂದಿಲ್ಲ. ಹೀಗಾಗಿ ಕಾಲುವೆ ಮತ್ತು ನದಿಗೆ ನೀರಿನ ಭಾಗ್ಯವಿಲ್ಲದೇ ಭತ್ತದ ಗದ್ದೆಗಳು ಬಿಕೋ ಎನ್ನುತ್ತಿವೆ. ಜುಲೈ ಮುಗಿದರೂ ಭತ್ತದ ನಾಟಿ ಬಿಡಿ, ಸಸಿ ಮಡಿಗಳೂ ಕಾಣುತ್ತಿಲ್ಲ.

ಭತ್ತ ಬೆಳೆಗಾರರಿಗೆ ಮುಂದೇನು ಎಂಬ ಚಿಂತೆ ಕಾಡತೊಡಗಿದೆ. ಭತ್ತ ಬೆಳೆಯಲು ಭೂಮಿಯನ್ನು ಸಮತಟ್ಟು ಮಾಡಿರುವುದರಿಂದ ಪರ್ಯಾಯ ಬೆಳೆಗಳನ್ನು ಬೆಳೆಯಲು ಅಸಾಧ್ಯ ಎನ್ನುತ್ತಾರೆ ಭತ್ತ ಬೆಳೆಗಾರರು.

‘ನಾವು ಇದುವರೆಗೆ ಭತ್ತ ಬಿಟ್ಟರೆ ಬೇರೇನು ಬೆಳೆದಿಲ್ಲ. ಐದಾರು ವರ್ಷಗಳಿಂದ ವರ್ಷಕ್ಕೆ ಒಂದೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿದೆ. ಈ ಬಾರಿ ಭತ್ತ ಬೆಳೆಯುತ್ತೇವೆ ಎಂಬ ಭರವಸೆಯೇ ಇಲ್ಲದಂತಾಗಿದೆ. ಅವಧಿ ಮೀರಿ ಭತ್ತ ನಾಟಿ ಮಾಡಿದರೆ ನಷ್ಟ ಖಚಿತ’ ಎಂದು ಭತ್ತ ಬೆಳೆಗಾರ ಇಬ್ರಾಂಪುರ ಗ್ರಾಮದ ಬೇವೂರು ಬಸವರಾಜಗೌಡ ಹತಾಶೆ ವ್ಯಕ್ತಪಡಿಸಿದರು.

‘ಆಗಸ್ಟ್‌ನಲ್ಲಿ ಮಳೆಯಾದರೆ, ಜಲಾಶಯಕ್ಕೆ ನೀರು ಹರಿದು ಬಂದು ಕಾಲುವೆ ಮತ್ತು ನದಿಗೆ ನೀರು ಹರಿಸಿದರೆ ಮಾತ್ರ ಅಲ್ಪಾವಧಿ ಭತ್ತ ಬೆಳೆಯಬಹುದು. ವರುಣನ ಕೃಪೆ ಮೇಲೆ ಭತ್ತ ಬೆಳೆಗಾರರ ಭವಿಷ್ಯ ನಿಂತಿದೆ’ ಎನ್ನುತ್ತಾರೆ ದೇವಿನಗರದ ರೈತ ಪ್ರತಾಪಚೌದ್ರಿ.

ಗುರಿ ಸಾಧನೆ ಶೂನ್ಯ:‘ತಾಲ್ಲೂಕಿನ ಒಟ್ಟು ಮುಂಗಾರು ಹಂಗಾಮಿನಲ್ಲಿ 28,100 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಜೋಳ 1,650 ಹೆಕ್ಟೇರ್, ಮೆಕ್ಕೆಜೋಳ 300 ಹೆಕ್ಟೇರ್‌ನಲ್ಲಿ ಬೆಳೆಯುವ ಗುರಿ ಇತ್ತು. ಆದರೆ, ಗುರಿ ಸಾಧನೆಯಲ್ಲಿ ಶೂನ್ಯದಲ್ಲಿದ್ದೇವೆ’ ಎಂದು ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹ್ಮದ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.