ADVERTISEMENT

‘ಚಿತ್ರಕಲೆ ಅಭಿವ್ಯಕ್ತಿಯ ಪ್ರಮುಖ ಸಾಧನ’

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 11:08 IST
Last Updated 12 ಆಗಸ್ಟ್ 2021, 11:08 IST
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಸ.ಚಿ. ರಮೇಶ ಮಾತನಾಡಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಸ.ಚಿ. ರಮೇಶ ಮಾತನಾಡಿದರು   

ಹೊಸಪೇಟೆ (ವಿಜಯನಗರ): ‘ಮನುಷ್ಯನ ಅಭಿವ್ಯಕ್ತಿಯಲ್ಲಿ ಹಲವು ಪ್ರಕಾರಗಳಿವೆ. ಅದರಲ್ಲಿ ಚಿತ್ರಕಲೆ ಅಭಿವ್ಯಕ್ತಿಯ ಪ್ರಮುಖ ಸಾಧನವಾಗಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ. ರಮೇಶ ತಿಳಿಸಿದರು.

ಸ್ವಾತಂತ್ರ್ಯ ಉತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಹಂಪಿ ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗ ಮತ್ತು ನಾಗಪುರದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸಹಭಾಗಿತ್ವದಲ್ಲಿ ಗುರುವಾರ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಶಿಲ್ಪಕಲಾ ಹಾಗೂ ಚಿತ್ರಕಲಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಮನುಷ್ಯ ಬರವಣಿಗೆ, ಚಿಂತನೆಗಳ ಮೂಲಕ ಸತ್ಪ್ರಜೆಯಾಗುತ್ತಾನೆ. ಬರವಣಿಗೆ ವಿದ್ಯಾವಂತರಿಗೆ ಅರ್ಥವಾಗುತ್ತದೆ. ಆದರೆ, ಜನಸಾಮಾನ್ಯರು ಚಿತ್ರಕಲೆ ಹಾಗೂ ಶಿಲ್ಪಕಲೆಗಳನ್ನು ನೋಡಿ ಅನೇಕ ವಿಚಾರಗಳನ್ನು ಅರಿತುಕೊಳ್ಳುತ್ತಾರೆ. ಕಲಾವಿದರು ತಮ್ಮ ಭಾವನೆಗಳನ್ನು ಕಲೆಯ ಮೂಲಕ ವ್ಯಕ್ತಪಡಿಸುತ್ತಾರೆ’ ಎಂದು ಹೇಳಿದರು.

ADVERTISEMENT

‘ಶಾಂತಿ, ನೆಮ್ಮದಿ, ಸಂತೋಷ ಹಾಗೂ ದುಃಖವನ್ನು ವ್ಯಕ್ತಪಡಿಸುವ ಮಹಾನ್ ಶಕ್ತಿ ಕಲೆಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗೋಡೆಗಳ ಮೇಲೆ ಚಿತ್ರಕಲೆಯನ್ನು ಬಿಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ಉತ್ತಮ ಕೆಲಸ’ ಎಂದರು.

ಕುಲಸಚಿವ ಪ್ರೊ. ಎ.ಸುಬ್ಬಣ್ಣ ರೈ, ದೃಶ್ಯಕಲಾ ವಿಭಾಗದ ಮುಖ್ಯಸ್ಥ ಮೋಹನ್‌ರಾವ್‌ ಬಿ. ಪಾಂಚಾಳ, ಪ್ರಾಧ್ಯಾಪಕ ಎಚ್‌.ಎನ್‌. ಕೃಷ್ಣೇಗೌಡ, ವಿದ್ಯಾರ್ಥಿ ಶ್ರೀಶೈಲ ಕಂಬಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.