
ಸಂಡೂರು: ‘ರಾಜ್ಯದಲ್ಲಿನ ಪಂಚಮಸಾಲಿ ಸಮಾಜದ ಸಮಗ್ರ ಅಭಿವೃದ್ಧಿಗೆ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದ್ದು, ಸಮಾಜದ ಮೀಸಲಾತಿ ಹೆಚ್ಚಳದ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಸಂಸದ ಇ.ತುಕಾರಾಂ ಹೇಳಿದರು.
ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಸಂಡೂರು ತಾಲ್ಲೂಕು ಘಟಕದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಅವರ 201ನೇ ವಿಜಯೋತ್ಸವ, 247ನೇ ಜಯಂತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಸಂಡೂರು ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಸಂವಿಧಾನ ವ್ಯವಸ್ಥೆಯಲ್ಲಿ ಉತ್ತಮ ಆಡಳಿತ ನಡೆಸಲಾಗುತ್ತಿದ್ದು, ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ರಸ್ತೆ, ಕುಡಿಯುವ ನೀರು, ವಸತಿ, ಆರೋಗ್ಯ, ಶಿಕ್ಷಣ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಕಿತ್ತೂರು ಸಂಸ್ಥಾನವನ್ನು ರಕ್ಷಣೆ ಮಾಡಿ ದೇಶದ ಇತಿಹಾಸದಲ್ಲಿ ಚರಿತ್ರೆ ಸೃಷ್ಟಿಸಿದ್ದಾರೆ. ಸಮಾಜದಲ್ಲಿ ಮಹಿಳೆಯರು ಕೇವಲ ಮನೆಗೆ ಮಾತ್ರ ಸಿಮಿತವಲ್ಲ ಎಲ್ಲ ಕ್ಷೇತ್ರಗಳಲ್ಲಿ ವಿಶಿಷ್ಟವಾಗಿ ಸೇವೆ ಸಲ್ಲಿಸಲು ಸಬಲರಾಗಿದ್ದಾರೆ. ನಾವುಗಳು ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಬೇಕು’ ಎಂದರು.
ಸಂಡೂರಿನ ಶಾಸಕಿ ಅನ್ನಪೂರ್ಣ ತುಕಾರಾಂ ಮಾತನಾಡಿ, ‘ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿನ ಮಹಿಳೆಯರ ಉನ್ನತ ಶಿಕ್ಷಣಕ್ಕಾಗಿ ನೂತನ ನರ್ಸಿಂಗ್ ಕಾಲೇಜನ್ನು ಶೀಘ್ರ ಸ್ಥಾಪಿಸಲಾಗುವುದು. ಕ್ಷೇತ್ರದಲ್ಲಿನ ಮಹಿಳೆಯರ ಆರ್ಥಿಕ ಪ್ರಗತಿಗಾಗಿ ಸರ್ಕಾರದಿಂದ ಸ್ವಯಂ ಉದ್ಯೋಗಗಳನ್ನು ಜಾರಿಗೆ ತರಲಾಗುವುದು’ ಎಂದರು.
ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರದ ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಡೆಯಿತು. ಮಹಿಳೆಯರು ಕಳಸ, ಕುಂಬ ಹೊತ್ತು ಸಾಗಿದರು. ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.
ಪುರಸಭೆಯ ಮುಖ್ಯಾಧಿಕಾರಿ ವಿನಯಕುಮಾರ ಗೌಡ, ನಿಕಟಪೂರ್ವ ರಾಜ್ಯಾಧ್ಯಕ್ಷ ಬಿ.ನಾಗನಗೌಡ, ಸಂಘದ ತಾಲ್ಲೂಕು ಅಧ್ಯಕ್ಷ ರಮೇಶ್ ಗಡಾದ್, ಜಿಲ್ಲಾಧ್ಯಕ್ಷ ಬಿ.ಕುಮಾರಸ್ವಾಮಿ, ಗೌರವಾಧ್ಯಕ್ಷ ಎಂ.ಶಂಕ್ರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಅರುಂಧತಿ, ಮುಖಂಡರಾದ ಪಿ.ರವಿಕುಮಾರ್, ಶೆಟ್ರು ನಾಗರಾಜ್, ಬಸವರಾಜ್ ಬಣಕಾರ್, ಮೇಘನಾಥ್, ಕೋರಿ ಪಂಪಾಪತಿ, ತಾಳೂರುಲಿಂಗಪ್ಪ, ಸುಬ್ಬಯ್ಯ, ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.