ಬಳ್ಳಾರಿ: ‘ಪಡಿತರ ವಿತರಕರಿಗೆ ಸರ್ಕಾರದಿಂದ ಬರಬೇಕಾದ ಕಮೀಷನ್ ಹಾಗೂ ಇ–ಕೆವೈಸಿ ಹಣ ನೀಡಬೇಕು’ ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯ ಅಧ್ಯಕ್ಷ ಟಿ.ಕೃಷ್ಣಪ್ಪ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದಾದ್ಯಂತ ಏಕರೂಪ ಕಮೀಷನ್ ಕೊಡಿಸಬೇಕು. ಕೇಂದ್ರ ಸರ್ಕಾರದಿಂದ ಪ್ರತಿ ಕಾರ್ಡುದಾರರಿಗೆ 3 ಲೀಟರ್ ಸೀಮೆಎಣ್ಣೆ ಕೊಡಬೇಕು’ ಎಂದು ಆಗ್ರಹಿಸಿದರು.
‘ಪ್ರತಿ ತಿಂಗಳು ಡಿಬಿಟಿ ಮೂಲಕ ಕಾರ್ಡುದಾರರಿಗೆ ಸಂದಾಯ ಮಾಡುತ್ತಿರುವ ರೀತಿಯಲ್ಲೇ ಮಾಲೀಕರಿಗೂ ಡಿಬಿಟಿ ಮೂಲಕ ಕಮೀಷನ್ ಹಣವನ್ನು ಸರ್ಕಾರ ನೀಡಬೇಕು. ಸಗಟು ಮಳಿಗೆಗಳಿಗೆ ಸಿಸಿಟಿವಿ ಕ್ಯಾಮರಾ ಹಾಗೂ ಎಲೆಕ್ಟ್ರಾನಿಕ್ ಸ್ಕೇಲ್ ಅಳವಡಿಸಬೇಕು. ಕಾರ್ಡುದಾರರಿಗೆ ಡಿಬಿಟಿ ಮೂಲಕ ಕೊಡುತ್ತಿರುವ ಹಣದ ಬದಲು ಸಕ್ಕರೆ, ಗೋಧಿ, ಅಡುಗೆ ಎಣ್ಣೆ, ಉಪ್ಪು ಹಾಗೂ ದಿನನಿತ್ಯ ಬಳಕೆಗೆ ಬೇಕಾದ ಆಹಾರ ಪದಾರ್ಥ ಕೊಡಬೇಕು’ ಎಂದರು.
ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮೀನಹಳ್ಳಿ ತಾಯಣ್ಣ, ಜಿಲ್ಲಾ ಕಾರ್ಯಾಧ್ಯಕ್ಷ ವೆಂಕಟೇಶ್ ಹೆಗಡೆ, ರಾಜ್ಯ ಸಮಿತಿ ಸದಸ್ಯ ಬಿ.ಹೇಮಣ್ಣ, ಬಳ್ಳಾರಿ ಗ್ರಾಮಾಂತರ ಅಧ್ಯಕ್ಷ ಜಗನ್ನಾಥ ಗೌಡ, ಸಂಘದ ಪದಾಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.