ADVERTISEMENT

ಬಳ್ಳಾರಿಯಲ್ಲಿ ಮರಳು ಬಂದ್‌: ಅರ್ಧಕ್ಕೇ ನಿಂತ ಕಟ್ಟಡಗಳು

ಹದಿನೈದು ದಿನಗಳಿಂದ ಪೂರೈಕೆ ಸ್ಥಗಿತ

ಆರ್. ಹರಿಶಂಕರ್
Published 7 ಜೂನ್ 2025, 7:28 IST
Last Updated 7 ಜೂನ್ 2025, 7:28 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಬಳ್ಳಾರಿ: ಬಳ್ಳಾರಿಯಲ್ಲಿ ಕಳೆದ ಹದಿನೈದು ದಿನಗಳಿಂದ ಮರಳು ಪೂರೈಕೆ ಸ್ಥಗಿತಗೊಂಡಿದ್ದು, ಕಟ್ಟಡ ನಿರ್ಮಾಣ ಕಾರ್ಯಗಳು ಬಹುತೇಕ ಸ್ಥಗಿತಗೊಂಡಿವೆ. ಇದೇ ವೃತ್ತಿಯನ್ನು ನಂಬಿ  ಬದುಕುತ್ತಿದ್ದ ಕೂಲಿ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ. 

ಬಳ್ಳಾರಿ ತಾಲೂಕಿನ ವಣೇನೂರು, ಅಸುಂಡಿ, ಯಾಳ್ಪಿ, ಕರ್ಚೇಡುಗಳಲ್ಲಿ ಒಟ್ಟು ಐದು ಮರಳು ಬ್ಲಾಕ್‌ಗಳಿವೆ. ಈ ಬ್ಲಾಕ್‌ಗಳಿಂದ ಬಳ್ಳಾರಿಯಾದ್ಯಂತ ಮರಳು ಪೂರೈಕೆಯಾಗುತ್ತದೆ. 

ಸದ್ಯ ಇರುವ ಬ್ಲಾಕ್‌ಗಳ ಪೈಕಿ ಪೈಕಿ ಅಸುಂಡಿಯಲ್ಲಿರುವ ರಾಮಕೃಷ್ಣ ರಾವ್‌ ಎಂಬುವವರ ವಿರುದ್ಧ ಇತ್ತೀಚೆಗೆ ಅಕ್ರಮ ಮರಳುಗಾರಿಕೆಯ ಆರೋಪ ಕೇಳಿಬಂತು. ಇದರ ಜತೆಗೆ, ಇತರ ಬ್ಲಾಕ್‌ಗಳಲ್ಲಿ ನಡೆದಿರುವ ಮರಳುಗಾರಿಕೆಯಲ್ಲೂ ವ್ಯತ್ಯಾಸ ಕಂಡು ಬಂದಿದ್ದರಿಂದ ತನಿಖೆಗೆ ನಿರ್ಧರಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಅದಕ್ಕಾಗಿ ತಂಡ ರಚಿಸಿದೆ. ವರದಿ ಬರುವವರೆಗೆ ಮರಳು ತೆಗೆಯುವಂತಿಲ್ಲ ಎಂದು ಗುತ್ತಿಗೆದಾರರಿಗೆ ಕಟ್ಟಪ್ಪಣೆಯನ್ನೂ ವಿಧಿಸಿದೆ.  

ADVERTISEMENT

ಹಲವು ಬಗೆಯ ವಾದಗಳು: ‘ಜಿಲ್ಲೆಯಲ್ಲಿ ಹೊಸದಾಗಿ 13 ಮರಳು ಬ್ಲಾಕ್‌ಗಳನ್ನು ಹರಾಜು ಹಾಕಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮುಂದಾಗಿದೆ. ಬಳ್ಳಾರಿ ತಾಲೂಕಿನಲ್ಲಿ ಈಗಿರುವ ಐದು ಬ್ಲಾಕ್‌ಗಳನ್ನು ಹೊರತುಪಡಿಸಿ ಬೇರೆ ಬ್ಲಾಕ್‌ಗಳು ಆರಂಭವಾಗದಂತೆ ನೋಡಿಕೊಂಡಿದ್ದ ಕೆಲ ಪಟ್ಟಭದ್ರರಿಗೆ ಈಗ ಹೊಸದಾಗಿ 13 ಬ್ಲಾಕ್‌ ಹರಾಜು ಹಾಕುತ್ತಿರುವುದು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಅನಗತ್ಯ ಗೊಂದಲಗಳನ್ನು  ಸೃಷ್ಟಿಸಲಾಗುತ್ತಿದೆ’ ಎಂದು ಕೆಲ ಮಂದಿ ಹೇಳಿದ್ದಾರೆ. 

‘ಹೊಸ ಬ್ಲಾಕ್‌ಗಳ ಮೇಲೆ ಕಣ್ಣಿಟ್ಟಿರುವ ಕೆಲ ಪಟ್ಟಭದ್ರರು ಸದ್ಯ ಚಾಲ್ತಿಯಲ್ಲಿರುವ ಬ್ಲಾಕ್‌ಗಳ ಗುತ್ತಿಗೆದಾರರ ಮೇಲೆ ಮೇಲೆ ಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ಮರಳು ಬ್ಲಾಕ್‌ವೊಂದರ ಗುತ್ತಿಗೆದಾರರೊಬ್ಬರು ಹೇಳುತ್ತಿದ್ದಾರೆ.  

‘ಮರಳುಗಾರಿಕೆ ಎಂದರೇ ಅಕ್ರಮ ಎಂಬ ಭಾವನೆ ಸಮಾಜದಲ್ಲಿ ಬೇರೂರಿದೆ. ನಾವು ಬ್ಲಾಕ್‌ಗಳನ್ನು ಕಾನೂನಿನ ಪ್ರಕಾರವೇ ಗುತ್ತಿಗೆ ಪಡೆದು ಜನರಿಗೆ ಪೂರೈಕೆ ಮಾಡುತ್ತಿದ್ದೇವೆ. ಇದರಲ್ಲಿ ಮಾಮೂಲು ಕೇಳಿದರೆ ಹೇಗೆ? ಮಾಮೂಲು ಕೊಡದೇ ಇದ್ದಾಗ ನಮ್ಮ  ಮೇಲೆ ದೂರುಗಳು ಸಲ್ಲಿಕೆಯಾಗಿವೆ. ದೂರಿನ ಹಿನ್ನೆಲೆಯಲ್ಲಿ ಮರಳು ಎತ್ತುವುದನ್ನು ತಡೆಯಲಾಗಿದೆ’ ಎಂದು ಮರಳು ಮಾರಾಟಗಾರರೊಬ್ಬರು ಹೇಳಿದ್ದಾರೆ.

‘ಬಳ್ಳಾರಿಯಲ್ಲಿ ಮರಳುಗಾರಿಕೆ ಎಂಬುದು ಬಹಳ ಹಿಂದಿನಿಂದಲೂ ಕೆಲವರ ಕಪಿಮುಷ್ಟಿಗೆ ಸಿಲುಕಿದೆ. ಅಕ್ರಮಗಳು ನಡೆಯುತ್ತಿವೆ. ಅವರ ಅಕ್ರಮಗಳನ್ನು ತಡೆಯಬೇಕಾಗಿದೆ’ ಎಂದು ಕೆಲ ಮಂದಿ ಹೇಳುತ್ತಿದ್ದಾರೆ.   

‘ತಾಲೂಕಿನಲ್ಲಿ ಮರಳು ವ್ಯಾಪಾರ ಸದ್ಯ ಈ ಹಂತಕ್ಕೆ ಇಳಿಯುತ್ತಿರುವುದರ ಹಿಂದೆ ರಾಜಕೀಯ ಮುಖಂಡರ ಕೈವಾಡವೂ ಇರುವುದಾಗಿ ಗುಲ್ಲು ಇದೆಯಾದರೂ ಇದರ ಬಗ್ಗೆ ಯಾರೂ ಬಾಯಿ ಬಿಡುತ್ತಿಲ್ಲ. ಮಾಸಿಕ ಮಾಮೂಲಿಗಾಗಿ ಈ ಎಲ್ಲ ಪ್ರಹಸನಗಳೂ ನಡೆಯುತ್ತಿವೆ. ಇದರಿಂದ ಒಂದೆಡೆ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ, ಅಧಿಕಾರಿಗಳು ಅಡಕತ್ತರಿಯಲ್ಲಿ ಸಿಲುಕಿದ್ದಾರೆ’ ಎಂದು ಇದೆಲ್ಲವನ್ನೂ ಹತ್ತಿರದಿಂದ ಗಮನಿಸಿರುವ ವ್ಯಕ್ತಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.  

‘ಆದೇನೇ ಇರಲಿ, ಅಕ್ರಮ ನಡೆಯಲು ನಾವು ಮಾತ್ರ ಬಿಡುವುದಿಲ್ಲ’ ಎನ್ನುತ್ತಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.  ‘ತನಿಖಾ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇದರ ಜತೆಗೆ ಜನರ ಹಿತವನ್ನೂ ಕಾಯಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.   

ಎಲ್ಲರಿಗೂ ನಷ್ಟ

ಕಳೆದ ಹದಿನೈದು ದಿನಗಳಿಂದ ಮರಳು ಪೂರೈಕೆ ಸ್ಥಗಿತಗೊಂಡಿರುವುದರಿಂದ ಒಂದೆಡೆ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ತೊಂದರೆ ಎದುರಾಗಿದೆ. ಇನ್ನೊಂದೆಡೆ ಸರ್ಕಾರಕ್ಕೆ ಸಲ್ಲುತ್ತಿದ್ದ ರಾಯಧನವೂ ನಷ್ಟವಾಗಿದೆ. ಮತ್ತೊಂದು ಕಡೆ ರಾತ್ರೋ ರಾತ್ರಿ ಮರಳು ತೆಗೆದು ಅಕ್ರಮವಾಗಿ ಮಾರಾಟ ಮಾಡುವ ದಂಧೆ ಸಣ್ಣದಾಗಿ ಬೆಳೆಯಲಾರಂಭಿಸಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.