ADVERTISEMENT

ತಂಗುದಾಣವಿಲ್ಲದೇ ಜನ ಹೈರಾಣ

ಬಿಸಿಲು, ಮಳೆ ಲೆಕ್ಕಿಸದೆ ರಸ್ತೆಯಲ್ಲೆ ನಿಂತು ಬಸ್‌ಗಾಗಿ ಕಾಯುವ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 4:43 IST
Last Updated 4 ಅಕ್ಟೋಬರ್ 2025, 4:43 IST
ಕುರುಗೋಡು ಮುಖ್ಯವೃತ್ತದಲ್ಲಿ ಬಿಸಿಲಿನಲ್ಲಿ ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು
ಕುರುಗೋಡು ಮುಖ್ಯವೃತ್ತದಲ್ಲಿ ಬಿಸಿಲಿನಲ್ಲಿ ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು   

ಕುರುಗೋಡು: ಪಟ್ಟಣದಲ್ಲಿ ಬಸ್‌ಗಳಿಗಾಗಿ ಕಾಯುವ ಪ್ರಯಾಣಿಕರು ಬಿಸಿಲು, ಮಳೆ, ಗಾಳಿಯನ್ನದೆ ರಸ್ತೆಯಲ್ಲಿಯೇ ಕಾಯಬೇಕಾದ ಪರಿಸ್ಥಿತಿ ಇದೆ.

ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಗದಿತ ಸ್ಥಳಗಳಲ್ಲಿ ಬಸ್ ತಂಗುದಾಣ ಇಲ್ಲದಿದ್ದರಿಂದ ಬಸ್‌ಗಳು ಮುಖ್ಯವೃತ್ತದ ಸುತ್ತಮುತ್ತ ನಿಲ್ಲುತ್ತವೆ. ಎಲ್ಲಂದರಲ್ಲಿ ವಾಹನಗಳು ನಿಲ್ಲುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ.

ಬಳ್ಳಾರಿಗೆ ಹೋಗುವ ಬಸ್‌ಗಳು ಜೋಡಿರಸ್ತೆಯ ಪಕ್ಕದಲ್ಲಿ, ಸಿರುಗುಪ್ಪ ಕಡೆಗೆ ಹೋಗುವ ಬಸ್‌ಗಳು ಮುಖ್ಯವೃತ್ತದ ಎಡಭಾಗದಲ್ಲಿ, ಬಳ್ಳಾರಿ ಯಿಂದ ಕಂಪ್ಲಿ ಮಾರ್ಗದ ಬಸ್‌ಗಳು ಮುಖ್ಯವೃತ್ತದ ಬಳಿ ಅಥವಾ ಖಾದಿಭಂಡಾರದ ಮುಂದೆ ಮತ್ತು ಕುಡತಿನಿ ಮಾರ್ಗದ ಬಸ್‌ಗಳು ಪೊಲೀಸ್ ಠಾಣೆ ಮುಂಭಾಗದ ರಸ್ತೆಯಲ್ಲಿ ನಿಲ್ಲುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ವಾಣಿಜ್ಯ ಮಳಿಗೆಗಳ ಮುಂಭಾಗದಲ್ಲಿ ಅಥವಾ ಚರಂಡಿಗಳ ಮೇಲೆ ಕುಳಿತು ಬಸ್‌ಗಳನ್ನು ಕಾಯುವ ಪ್ರಯಾಣಿಕರು ಸರಕು-ಸರಂಜಾಮುಗಳನ್ನು ಕೈಯಲ್ಲಿ ಹಿಡಿದು ಹರಸಾಹಸಪಟ್ಟು ಬಸ್‌ಗಳನ್ನು ಹತ್ತಬೇಕಾದ ಪರಿಸ್ಥಿತಿ ಇದೆ.

ADVERTISEMENT

‘ಹೊಸ ಬಸ್‌ನಿಲ್ದಾಣ ನಿರ್ಮಾಣದ ನಂತರ ಹಳೇ ಬಸ್‌ನಿಲ್ದಾಣ ತೆರವುಗೊಳಿಸಿದರೂ ಬಳ್ಳಾರಿಗೆ ಹೋಗುವ ಎಲ್ಲ ಬಸ್‌ಗಳು ನಿಲ್ದಾಣದ ಮುಂಭಾಗವನ್ನು ಹಾದುಹೋಗುತ್ತಿವೆ. ಆದರೆ ತಾತ್ಕಾಲಿಕವಾಗಿ ಒಂದು ಸಣ್ಣ ತಂಗುದಾಣವೂ ಇಲ್ಲ. ಆ ಸ್ಥಳದಲ್ಲಿ ಕೆಲವು ಜನರು ತಳ್ಳುವ ಗಾಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಜನರು ಮಲಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಪ್ರದೇಶ ನೈರ್ಮಲ್ಯದ ಸಮಸ್ಯೆ ಎದುರಿಸುತ್ತಿದೆ’ ಎಂದು ಕೋಳೂರಿನ ಚಂದ್ರಶೇಖರ ಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ಬಸ್ ತಂಗುದಾಣ ನಿರ್ಮಾಣಮಾಡಲು ಸ್ಥಳ ಗುರುತಿಸಿ, ಪುರಸಭೆ ಹಸ್ತಾಂತರಿಸಿದ ನಂತರ ಶಾಸಕರ ನೆರವಿನೊಂದಿಗೆ ನಿರ್ಮಾಣಮಾಡಲಾಗುವುದು’ ಎಂದು ಬಸ್‌ ಘಟಕದ ವ್ಯವಸ್ಥಾಪಕ ಕೆ.ಎಂ. ತಿರುಮಲೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮಿನಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಸ್ಥಳ ಹಸ್ತಾಂತರಿಸಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತನಂತರ ಹಸ್ತಾಂತರಿಸಲಾಗುವುದು
ಹರ್ಷವರ್ಧನರೆಡ್ಡಿ ಕುರುಗೋಡು ಪುರಸಭೆ ಮುಖ್ಯಾಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.