ADVERTISEMENT

ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕ ಮುಚ್ಚಿದ ನಗರಸಭೆ: ಜನ ಕಂಗಾಲು

ಖಾಸಗಿ ಘಟಕಗಳಿಂದ ಪ್ರತಿದಿನ ಮೂರುವರೆ ಲಕ್ಷ ಲೀಟರ್‌ ನೀರು ಪೂರೈಕೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 21 ಮೇ 2019, 19:35 IST
Last Updated 21 ಮೇ 2019, 19:35 IST
ಹೊಸಪೇಟೆಯ ಅಮರಾವತಿ ಬಡಾವಣೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಮುಚ್ಚಿಸಿರುವುದರಿಂದ ಜನ ಖಾಲಿ ಕ್ಯಾನ್‌ಗಳೊಂದಿಗೆ ಹಿಂತಿರುಗಿದರು
ಹೊಸಪೇಟೆಯ ಅಮರಾವತಿ ಬಡಾವಣೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಮುಚ್ಚಿಸಿರುವುದರಿಂದ ಜನ ಖಾಲಿ ಕ್ಯಾನ್‌ಗಳೊಂದಿಗೆ ಹಿಂತಿರುಗಿದರು   

ಹೊಸಪೇಟೆ: ನಗರಸಭೆಯು ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮುಚ್ಚಿಸಿರುವುದರಿಂದ ನಗರದ ಜನ ನೀರು ಸಿಗದೆ ಕಂಗಾಲಾಗಿದ್ದಾರೆ.

ಅನುಮತಿ ಪಡೆಯದೆ ನೀರಿನ ಘಟಕಗಳನ್ನು ನಡೆಸಲಾಗುತ್ತಿದೆ ಎಂದು ಕಾರಣ ಕೊಟ್ಟು ನಗರಸಭೆಯು ಸೋಮವಾರ ನಗರದಲ್ಲಿನ 70 ಘಟಕಗಳನ್ನು ಏಕಾಏಕಿ ಮುಚ್ಚಿಸಿತ್ತು. ಎರಡನೇ ದಿನವಾದ ಸೋಮವಾರ ಯಾವೊಂದು ಘಟಕವೂ ಕೆಲಸ ನಿರ್ವಹಿಸಲಿಲ್ಲ. ಜನ ಕ್ಯಾನ್‌ಗಳೊಂದಿಗೆ ಬಂದು ಹಿಂತಿರುಗುತ್ತಿದ್ದರು.

ಕೆಲವು ಘಟಕಗಳವರು ‘ನೀರು ಇಲ್ಲ’ ಎಂದು ಫಲಕ ಹಾಕಿದ್ದರೆ, ಮತ್ತೆ ಕೆಲವು ಘಟಕಗಳು ಸಂಪೂರ್ಣವಾಗಿ ಮುಚ್ಚಿದ್ದವು. ಒಂದೆಡೆ ಸಿಗದಿದ್ದರೆ ಮತ್ತೊಂದು ಕಡೆಯಾದರೂ ಸಿಗಬಹುದು ಎಂದು ಜನ ಘಟಕದಿಂದ ಘಟಕಗಳಿಗೆ ಓಡಾಡಿದರೂ ನೀರು ಸಿಗಲಿಲ್ಲ. ಇದರಿಂದ ಪೇಚಿಗೆ ಸಿಲುಕಿ, ಸಪ್ಪೆ ಮೊರೆ ಹಾಕಿ ಹಿಂತಿರುಗುತ್ತಿರುವುದು ಕಂಡು ಬಂತು.

ADVERTISEMENT

ಇಲ್ಲಿನ ಎಂ.ಪಿ. ಪ್ರಕಾಶ್‌ ನಗರ, ಪಟೇಲ್‌ ನಗರ ಸೇರಿದಂತೆ ಕೆಲವೆಡೆ ಸಾರ್ವಜನಿಕರು ನೀರಿನ ಘಟಕದ ಮಾಲೀಕರೊಂದಿಗೆ ವಾಗ್ವಾದಕ್ಕಿಳಿದಿದ್ದರು. ಘಟಕಗಳ ಮಾಲೀಕರು ವಾಸ್ತವ ಸ್ಥಿತಿ ಕುರಿತು ಮನವರಿಕೆ ಮಾಡಿಕೊಡಲು ಯತ್ನಿಸಿದರು. ಆದರೆ, ಜನ ಅದಕ್ಕೆ ಕಿವಿಗೊಡಲಿಲ್ಲ.

‘ಏಕಾಏಕಿ ನೀರಿಲ್ಲ ಎಂದು ಹೇಳಿದರೆ ಹೇಗೆ. ಜಿಲ್ಲಾಧಿಕಾರಿಗಳು ಮುಚ್ಚಬೇಕೆಂದು ಹೇಳಿದರೆ ಮುಚ್ಚಬೇಕೇ? ಅವರಿಗೇನೂ ಗೊತ್ತಾಗಬೇಕು ನಮ್ಮ ಕಷ್ಟ. ನಗರಸಭೆಯಿಂದ ಶುದ್ಧವಾದ ನೀರು ಪೂರೈಕೆ ಮಾಡಿದರೆ ನಾವೇಕೇ ಖಾಸಗಿ ಘಟಕಗಳ ಹಿಂದೆ ತಿರುಗುತ್ತಿದ್ದೆವು. ಜನರ ಸಂಕಷ್ಟ ಅರಿತುಕೊಳ್ಳಬೇಕು. ಈಗ ಕಡು ಬೇಸಿಗೆ. ಇಂತಹ ಸಂದರ್ಭದಲ್ಲಿ ಮುಚ್ಚಿಸಿರುವುದು ಸರಿಯಲ್ಲ. ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಬಗೆಹರಿಸಿಕೊಳ್ಳಬೇಕು. ಜನರಿಗೆ ನೀರು ಪೂರೈಸಬೇಕು’ ಎಂದು ಪಟೇಲ್‌ ನಗರದ ನಿವಾಸಿ ಪ್ರಸನ್ನ ಒತ್ತಾಯಿಸಿದರು.

‘ಜನ ಬಂದು ಬಂದು ಹೋಗುತ್ತಿದ್ದಾರೆ. ಜಿಲ್ಲಾಧಿಕಾರಿ ಮುಚ್ಚಿಸಿದ್ದಾರೆ ಎಂದು ಹೇಳಿದರೆ ಜನ ಕೇಳಿಸಿಕೊಳ್ಳುವ ಸ್ಥಿತಿಯಿಲ್ಲ. ಜನರ ಕಷ್ಟ ಅರ್ಥವಾಗುತ್ತದೆ. ಒಂದುವೇಳೆ ನೀರು ಕೊಟ್ಟರೆ ಜಿಲ್ಲಾಧಿಕಾರಿಯವರ ಆದೇಶ ಉಲ್ಲಂಘಿಸಿದಂತಾಗುತ್ತದೆ. ಪರಿಸ್ಥಿತಿಯ ಅರ್ಥ ಮಾಡಿಕೊಂಡು ಜಿಲ್ಲಾಧಿಕಾರಿ ಘಟಕ ನಡೆಯಲು ಬಿಡಬೇಕು’ ಎಂದು ಪಟೇಲ್‌ ನಗರದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದ ಮಾಲೀಕ ಪಿ. ಬಸವರಾಜ ಹೇಳಿದರು.

ದಿನಕ್ಕೆ ಮೂರುವರೆ ಲಕ್ಷ ಲೀಟರ್‌ ನೀರು:

ನಗರದಲ್ಲಿನ ಒಟ್ಟು 70 ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಪ್ರತಿ ನಿತ್ಯ ಮೂರುವರೆ ಲಕ್ಷ ಲೀಟರ್‌ ನೀರು ಖರ್ಚಾಗುತ್ತಿದೆ. ₹5ಕ್ಕೆ 20 ಲೀಟರ್‌ ನೀರು ಮಾರಾಟ ಮಾಡುತ್ತವೆ. ಕಡಿಮೆ ಬೆಲೆಯಲ್ಲಿ ಶುದ್ಧವಾದ ನೀರು ಸಿಗುವುದರಿಂದ ಘಟಕಗಳ ಮೇಲೆ ಜನರ ಅವಲಂಬನೆ ಹೆಚ್ಚಾಗಿದೆ.

ಆಯಾ ಬಡಾವಣೆಯ ನಿವಾಸಿಗಳ ಜತೆಗೆ ರಸ್ತೆಬದಿಯ ಗೂಡಂಗಡಿಗಳು, ಸಣ್ಣ ಹೋಟೆಲ್‌ಗಳವರು ಘಟಕಗಳ ನೀರನ್ನೇ ಉಪಯೋಗಿಸುತ್ತಿದ್ದಾರೆ. ಈಗ ನೀರು ಸಿಗದ ಕಾರಣ ಅವರು ಪೇಚಿಗೆ ಸಿಲುಕಿದ್ದಾರೆ. ಕೆಲವರಂತೂ ಹೋಟೆಲ್‌ಗಳಿಗೆ ಬೀಗ ಜಡಿದಿದ್ದಾರೆ.

‘ನಮ್ಮ ಹೋಟೆಲ್‌ನಲ್ಲಿ ನಿತ್ಯ ಎಂಟರಿಂದ ಹತ್ತು ಕ್ಯಾನ್‌ ನೀರು ಖರ್ಚಾಗುತ್ತದೆ. ₹5ಕ್ಕೆ ಒಂದು ಕ್ಯಾನ್‌ (20 ಲೀಟರ್‌) ನೀರು ಖರೀದಿಸುತ್ತೇನೆ. ಈಗ ಖಾಸಗಿ ಘಟಕಗಳು ಮುಚ್ಚಿರುವುದರಿಂದ ಸಮಸ್ಯೆಯಾಗುತ್ತಿದೆ. 20 ಲೀಟರ್‌ ಬ್ರ್ಯಾಂಡೆಡ್‌ ನೀರು ಖರೀದಿಸಬೇಕೆಂದರೆ ₹40ರಿಂದ ₹50 ಇದೆ. ಇದು ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತದೆ. ಖಾಸಗಿ ಘಟಕಗಳು ತೆರೆಯುವವರೆಗೆ ಹೋಟೆಲ್‌ ಮುಚ್ಚಿಡಲು ತೀರ್ಮಾನಿಸಿದ್ದೇನೆ’ ಎಂದು ಮಾಲೀಕ ರಾಜು ತಿಳಿಸಿದರು.

‘ಜಿಲ್ಲಾ ಆಡಳಿತವು ಗ್ರಾಮ ಪಂಚಾಯಿತಿ ಮಾದರಿಯಲ್ಲಿ ನಗರದ ಪ್ರತಿ ವಾರ್ಡ್‌ಗಳಲ್ಲಿ ಎರಡೆರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಬೇಕು. ಇಲ್ಲವಾದಲ್ಲಿ ಖಾಸಗಿ ಘಟಕಗಳನ್ನು ನಡೆಯಲು ಬಿಡಬೇಕು. ಒಟ್ಟಿನಲ್ಲಿ ಜನರಿಗೆ ಕಡಿಮೆ ದುಡ್ಡಿನಲ್ಲಿ ಉತ್ತಮವಾದ ನೀರು ಸಿಗಬೇಕು’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಕೆ.ಎಂ. ಸಂತೋಷ್‌ ಕುಮಾರ್‌.

‘ಈಗಲೂ ನಗರದ ಅನೇಕ ಕಡೆಗಳಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಇತ್ತೀಚೆಗೆ ಚಿತ್ತವಾಡ್ಗಿಯಲ್ಲಿ ಅನೇಕ ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುತ್ತವೆ. ಅವುಗಳಿಗೆ ಮುಕ್ತಿ ಹಾಡಬೇಕು. ಜನರಿಗೆ ಯಾವುದೇ ರೀತಿಯ ಸಮಸ್ಯೆಯಿಲ್ಲದೆ ಶುದ್ಧವಾದ ಕುಡಿಯುವ ನೀರು ಪೂರೈಸುವ ಕೆಲಸವಾಗಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.