ಹಗರಿಬೊಮ್ಮನಹಳ್ಳಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಜನ ಬದಲಾವಣೆ ಬಯಸಿದ್ದಾರೆ, ಸಂಸದನಾಗಿ ದೆಹಲಿಗೆ ಹೋಗುವೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇ.ತುಕಾರಾಂ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಮಂಗಳವಾರ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದ ಬಳಿಕ ಅವರು ಮಾತನಾಡಿದರು. ಮತದಾರರು ಕಾಂಗ್ರೆಸ್ ಪಕ್ಷದ ಪರವಾಗಿ ಮತದಾನ ಮಾಡಿದ್ದಾರೆ. ಎಲ್ಲ ಕಡೆಗಳಿಂದಲೂ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿವೆ ಎಂದರು.
ರಾಮನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯೊಂದರಲ್ಲಿ ಸರಿಯಾಗಿ ಬೆಳಕಿನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಲ್ಲಿ ವಿನಂತಿಸಿಕೊಂಡರು.
ಕೆಎಂಎಫ್ ಅಧ್ಯಕ್ಷ ಎಲ್‍ಬಿಪಿ ಭೀಮನಾಯ್ಕ ಮಾತನಾಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳು ತುಕಾರಾಂ ಅವರ ಗೆಲುವಿನಲ್ಲಿ ಮುಖ್ಯವಾಗುತ್ತವೆ, ಪಕ್ಷದ ಹೈಕಮಾಂಡ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ದಿನವೇ ಗೆಲುವು ಸಿಕ್ಕಂತಾಗಿದೆ ಎಂದರು.
ಪುರಸಭೆ ಸದಸ್ಯ ಎಂ.ಮರಿರಾಮಪ್ಪ, ಮುಖಂಡರಾದ ಡಿಶ್ ಮಂಜುನಾಥ, ಸೆರೆಗಾರ ಹುಚ್ಚಪ್ಪ, ಕೆ.ಜಹಾಂಗೀರ್, ಅರಸಿಕೇರಿ ಹನುಮಂತಪ್ಪ, ಶಶಿ, ಎಚ್.ಎಂ.ವೀರೇಶ್ ಇದ್ದರು.
ಹೊರಗಡೇ ನಿಂತಿದ್ದ ಭೀಮಾ ನಾಯ್ಕ:
ರಾಮನಗರದ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅರಳಿಹಳ್ಳಿಯ ಅಂಗನವಾಡಿ ಕೇಂದ್ರದ ಮತಗಟ್ಟೆಗಳಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ತುಕಾರಾಂ ತೆರಳಿದರಾದರೂ ಕೆಎಂಎಫ್ ಅಧ್ಯಕ್ಷ, ಮಾಜಿ ಶಾಸಕ ಎಲ್‍ಬಿಪಿ ಭೀಮನಾಯ್ಕ ಅವರು ಆವರಣವನ್ನು ಪ್ರವೇಶಿಸದೇ ಹೊರಗಡೆ ನಿಂತಿದ್ದರು.
ಕಳೆದ ಪುರಸಭೆ ಚುನಾವಣೆಯಲ್ಲಿ ಮತಗಟ್ಟೆ ಒಳಗೆ ಜನಪ್ರತಿನಿಧಿಗಳು ಅಲ್ಲದವರು ಪ್ರವೇಶ ಮಾಡಿದ ಕಾರಣದಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಮುಖಂಡರ ನಡುವೆ ಗಲಾಟೆ ನಡೆದಿತ್ತು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.