
ಕುರುಗೋಡು: ಕ್ರಿಮಿನಾಶಕ ಸಿಂಪರಣೆಯಿಂದ ಮೆಣಸಿನಕಾಯಿ ಬೆಳೆಗೆ ಪರಿಹಾರ ನೀಡಲು ನಿರಾಕರಿಸಿದ ಕಂಪನಿ ಅಧಿಕಾರಿಯನ್ನು ಮಂಗಳವಾರ ಮಧ್ಯರಾತ್ರಿವರೆಗೆ ಕೂಡಿಹಾಕಿದ ಘಟನೆ ತಾಲ್ಲೂಕಿನ ಮಾರುತಿಕ್ಯಾಂಪಿನಲ್ಲಿ ಜರುಗಿದೆ.
ರೈತರ ಮನವೊಲಿಸಿದ ಪೊಲೀಸರು ಅಧಿಕಾರಿಯನ್ನು ಬಿಡಿಸಿ ಕಳುಹಿಸಿದರು.
ತಹಶೀಲ್ದಾರ್, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಬುಧವಾರ ವಿವಾದ ಬಗೆಹರಿಸಿ ರೈತನಿಗೆ ನ್ಯಾಯಕೊಡಿಸುವ ಪೊಲೀಸರ ಭರವಸೆಯ ಬಳಿಕ ರೈತರು ಅಧಿಕಾರಿಯನ್ನು ಬಿಟ್ಟು ಕಳುಹಿಸಿದ್ದರು.
ತಾಲ್ಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದ ರೈತರು ಚಲವಾದಿ ಹನುಮಂತ ಅವರು ಮಾರುತಿಕ್ಯಾಂಪಿನಲ್ಲಿರುವ 2 ಎಕರೆ ಜಮೀನಿನಲ್ಲಿ ಬೆಳೆದ ಮೆಣಸಿನಕಾಯಿ ಬೆಳೆಗೆ ಸಿಂಜೆಂಟ ಕಂಪನಿಯ ಸಿಮೊಡಿಸ್ ಹೆಸರಿನ ಕ್ರಿಮಿನಾಶಕ ಸಿಂಪಡಿಸಿದ್ದರು. ಕ್ರಿಮಿನಾಶಕ ಸಿಂಪಡಿಸಿದ ನಂತರ ಬೆಳೆ ಸಂಪೂರ್ಣ ನಾಶವಾಗಿ ರೈತನಿಗೆ ₹3 ಲಕ್ಷ ನಷ್ಟವಾಗಿದೆ ಎನ್ನಲಾಗಿದೆ.
ರೈತರು ಈ ಕುರಿತು ತೋಟಗಾರಿಕೆ ಇಲಾಖೆ ಅಧಿಕಾರಿಗೆ ಮನವಿಸಲ್ಲಿಸುವ ಜತೆಗೆ ಬಳ್ಳಾರಿ ನಗರದ ಹೊರವಲಯದಲ್ಲಿರುವ ಸಿಂಜೆಂಟ ಕಂಪನಿ ಕಚೇರಿಗೆ ಮುತ್ತಿಗೆಹಾಕಿದ್ದರು. ಪರಿಹಾರ ನೀಡುವುದಾಗಿ ಹೇಳಿದ್ದ ಕಂಪನಿ ಅಧಿಕಾರಿ ಮಂಗಳವಾರ ಮಾರುತಿ ಕ್ಯಾಂಪ್‍ಗೆ ಬಂದಿದ್ದರೂ ಪರಿಹಾರ ನೀಡಲು ನಿರಾಕರಿಸಿದರು. ಅಧಿಕಾರಿಯ ನಡೆಯಿಂದ ಕೆರಳಿದ ರೈತ ಮುಖಂಡರು ಅವರನ್ನು ಕೂಡಿಹಾಕಿದ್ದರು.
ಪಿಎಸ್‍ಐ ಸುಪ್ರಿತ್ ಮತ್ತು ಸಿಪಿಐ ವಿಶ್ವನಥಹಿರೇಗೌಡರ್ ಅವರು ಬುಧವಾರ ಜಮೀನಿಗೆ ಭೇಟಿನೀಡಿದರು. ರೈತನೊಂದಿಗೆ ಮಾತನಾಡಿದ ಅವರು ಇದೇ ತಿಂಗಳು 10ನೇ ತಾರೀಕು ತಹಶೀಲ್ದಾರ್ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಜಮೀನಿಗೆ ಭೇಟಿನೀಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ.
ನಷ್ಟಕ್ಕೀಡಾಗಿರುವ ರೈತನಿಗೆ ಪರಿಹಾರ ನೀಡಲೇಬೇಕು. 10ರಂದು ಸಭೆ ನಿಗದಿ ಮಾಡಲಾಗಿದೆ. ಅಂದು ಎಲ್ಲ ಅಧಿಕಾರಿಗಳು ಬರಬೇಕು. ನೊಂದ ರೈತನಿಗೆ ನ್ಯಾಯ ಒದಗಿಸಿಕೊಡಲೇ ಬೇಕು.ಮಾಧವ ರೆಡ್ಡಿ ರಾಜ್ಯ ರೈತ ಸಂಘ–ಹಸಿರುಸೇನೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.