
ಹೊಸಪೇಟೆ(ವಿಜಯನಗರ): ಮಾನಸಿಕ ಹಾಗೂ ದೈಹಿಕ ಶುದ್ಧತೆ, ಉತ್ತಮ ಆರೋಗ್ಯಕ್ಕೆ ಸೋಪಾನ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ..ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.
ಹಂಪಿ ಕನ್ನಡ ವಿವಿ ಯೋಗ ಅಧ್ಯಯನ ವಿಭಾಗ ಮತ್ತು ಹರಪನಹಳ್ಳಿಯ ಜನನಿ ಯೋಗ & ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಚಿತ ಯೋಗ ಹಾಗೂ ಪ್ರಕೃತಿ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೈಹಿಕ ಮತ್ತು ಮಾನಸಿಕ ಸಮತೋಲನವನ್ನು ಕಾಪಾಡುವ ಉತ್ತಮ ಮಾರ್ಗ ಯೋಗ. ಇದು ನಮ್ಮ ಪೂರ್ವಜರು ನಮಗೆ ನೀಡಿದ ದೊಡ್ಡ ಬಳುವಳಿ. ಯೋಗಮಾರ್ಗದಲ್ಲಿ ದೇಹದಂಡನೆ, ಮಾನಸಿಕ ದಂಡನೆಯಂಥ ಹಲವು ಮಾರ್ಗಗಳನ್ನು ಋಷಿಮುನಿಗಳು ಸಾಧಿಸಿ ತೋರಿಸಿದ್ದಾರೆ. ಮನಸ್ಸು ಮತ್ತು ದೇಹದ ನಡುವಿನ ಅಗೋಚರ ಸಂಬಂಧದ ಸಮನ್ವಯವನ್ನು ಬೆಸೆಯುವ ಸಾಧನ ಯೋಗ ಎಂದರು.
ಉಪನ್ಯಾಸ ನೀಡಿದ ಜನನಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ರಾಜೇಶ್ ಪಾದೇಕಲ್, ಪಂಚಭೂತಗಳಿಂದ ಆದ ಶರೀರಕ್ಕೆ ಅಸ್ವಸ್ಥತೆಗಳು ಕಾಡಿದಾಗ ಪಂಚಭೂತಗಳಲ್ಲೇ ಚಿಕಿತ್ಸೆ ಇದೆ ಎಂಬ ತತ್ವವನ್ನು ಆಧರಿಸಿದ ಪ್ರಕೃತಿ ಚಿಕಿತ್ಸೆ ನಮ್ಮ ಜೀವನ ವಿಧಾನವಾದಾಗ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಜನನಿ ಸಮೂಹ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ಉದಯಶಂಕರ ಭಟ್, ಯೋಗ ಅಧ್ಯಯನ ವಿಭಾಗದ ನಿರ್ದೇಶಕ ಪ್ರೊ.ಮಾಧವ ಪೆರಾಜೆ ಮಾತನಾಡಿದರು. ಈ ಸಂದರ್ಭದಲ್ಲಿ ಕೃಷ್ಣ ನಾಯ್ಕ, ಬಿ.ಸಿದ್ದರಾಮೇಶ, ಪ್ರೊ.ಲೋಕೇಶ್, ಯೋಗ ಪ್ರಾಧ್ಯಾಪಕ ಬಿ.ಜಯರಾಂ, ಸುಮಲತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.