ADVERTISEMENT

ಪೊಲೀಸರಿಂದ ತಪ್ಪಿಸಿಕೊಂಡಿದ್ದ ಆರೋಪಿ 24 ಗಂಟೆಯಲ್ಲಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 15:52 IST
Last Updated 28 ಜುಲೈ 2021, 15:52 IST
ರುದ್ರೇಶ್‌
ರುದ್ರೇಶ್‌   

ಹೊಸಪೇಟೆ(ವಿಜಯನಗರ): ಗಲಾಟೆ ಪ್ರಕರಣವೊಂದರಲ್ಲಿ ಬಂಧಿಸಿ, ನಗರದ ಉಪ ಕಾರಾಗೃಹಕ್ಕೆ ಕೊಂಡೊಯ್ಯುವಾಗ ತಪ್ಪಿಸಿಕೊಂಡಿದ್ದ ಯುವಕನನ್ನು ಪೊಲೀಸರು 24 ಗಂಟೆಯೊಳಗೆ ಪುನಃ ವಶಕ್ಕೆ ಪಡೆದು ಜೈಲಿಗೆ ಅಟ್ಟಿದ್ದಾರೆ.

ತಾಲ್ಲೂಕಿನ ಕಮಲಾಪುರದ ನಿವಾಸಿ ರುದ್ರೇಶ್‌ (27) ಎಂಬಾತನನ್ನು ಹಲ್ಲೆ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದು, ಮಂಗಳವಾರ ರಾತ್ರಿ ನಗರದ ಉಪ ಕಾರಾಗೃಹದಲ್ಲಿ ಇಡಲು ಕರೆತಂದಿದ್ದರು. ಕಾರಾಗೃಹದ ಬಳಿ ಪೊಲೀಸರನ್ನು ತಳ್ಳಿ, ಅಲ್ಲಿಂದ ಕಾಲ್ಕಿತ್ತಿದ್ದ. ಈ ಕುರಿತು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಬುಧವಾರ ಮಧ್ಯಾಹ್ನ ಆತನನ್ನು ವಶಕ್ಕೆ ಪಡೆದಿದ್ದಾರೆ.

‘ಕಮಲಾಪುರ ಪೊಲೀಸರು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಬುಧವಾರ ಮಧ್ಯಾಹ್ನ ರುದ್ರೇಶ್‌ನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈಗ ರುದ್ರೇಶ್‌ ವಿರುದ್ಧ ಕಮಲಾಪುರ ಹಾಗೂ ನಮ್ಮ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ’ ಎಂದು ಪಟ್ಟಣ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಶ್ರೀನಿವಾಸ ಮೇಟಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಉಪ ಕಾರಾಗೃಹಕ್ಕೆ ಹೊಂದಿಕೊಂಡಂತೆ ಗ್ರಾಮೀಣ ಪೊಲೀಸ್‌ ಠಾಣೆ ಇದೆ. ಈ ಠಾಣೆಯ ಮುಖ್ಯರಸ್ತೆಯ ಎದುರಿಗೆ ಪಟ್ಟಣ ಠಾಣೆ ಇದೆ. ಸದಾ ಪೊಲೀಸರು ಓಡಾಡಿಕೊಂಡಿರುವ ಜಾಗದಿಂದಲೇ ರುದ್ರೇಶ್‌ ತಪ್ಪಿಸಿಕೊಂಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.