ADVERTISEMENT

ಅಮಾಯಕ ರೈತರು, ರೈತ ಸಂಘದ ಜಿಲ್ಲಾಧ್ಯಕ್ಷರನ್ನು ಥಳಿಸಿದ ಖಾಕಿ ಪಡೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 9:58 IST
Last Updated 29 ಮಾರ್ಚ್ 2020, 9:58 IST
ರೈತನ ಮೇಲೆ ಹಲ್ಲೆ ನಡೆಸಿದ ಪೊಲೀಸರು
ರೈತನ ಮೇಲೆ ಹಲ್ಲೆ ನಡೆಸಿದ ಪೊಲೀಸರು   

ಹೊಸಪೇಟೆ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ನಾರಾಯಣ ರೆಡ್ಡಿ ಹಾಗೂ ರೈತರೊಬ್ಬರನ್ನು ಪೊಲೀಸರು ಮನಬಂದಂತೆ ಥಳಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಕಾಯಿಲೆಗೆ ಸಂಬಂಧಿಸಿದಂತೆ ಬಳಲುತ್ತಿರುವ ರೆಡ್ಡಿ ಅವರು ಶನಿವಾರ (ಮಾ.28) ಸಂಜೆ ಕಂಪ್ಲಿಯಲ್ಲಿ ಔಷಧಿ ಅಂಗಡಿಗೆ ಹೋಗಿ ಹಿಂತಿರುಗುವಾಗ ಪೊಲೀಸರು ತಡೆದು ಅವರನ್ನು ಲಾಠಿಯಿಂದ ಬೇಕಾಬಿಟ್ಟಿ ಥಳಿಸಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶುಕ್ರವಾರ (ಮಾ.27) ಕಂಪ್ಲಿಯಲ್ಲಿ ಇಂತಹುದೇ ಘಟನೆ ನಡೆದಿದ್ದು, ಗದ್ದೆಗೆ ನೀರು ಬಿಡಲು ಹೋಗುತ್ತಿದ್ದ ರೈತನೊಂದಿಗೂ ಪೊಲೀಸರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ರೈತ ಮುರಾರಿ ಎನ್ನುವವರು ಸಣಾಪುರ ಮಾಗಾಣಿಯ ಹೊಲದಲ್ಲಿ ನೀರು ಬಿಡಲು ಹೋಗುತ್ತಿದ್ದಾಗ, ಅವರನ್ನು ನಿಲ್ಲಿಸಿ ಬೆತ್ತದಿಂದ ಥಳಿಸಿದ್ದು, ಮೈತುಂಬ ಗಂಭೀರ ಸ್ವರೂಪದ ಗಾಯಗಳಾಗಿವೆ.
ಖಂಡನೆ

ADVERTISEMENT

ಪೊಲೀಸರ ಕ್ರಮವನ್ನು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ಕಟುವಾಗಿ ಖಂಡಿಸಿದ್ದಾರೆ. ‘ಜನರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್‌ಡೌನ್‌ ಘೋಷಿಸಿದೆ. ಗುಂಪಾಗಿ ಓಡಾಡದಂತೆ ನಿಷೇಧಾಜ್ಞೆ ಹೇರಲಾಗಿದೆ. ಈ ಕುರಿತು ಜಿಲ್ಲೆಯ ಎಲ್ಲಾ ರೈತರಿಗೂ ತಿಳಿವಳಿಕೆ ಮೂಡಿಸಲಾಗಿದೆ. ಹೊಲಕ್ಕೆ ಕೆಲಸಕ್ಕೆ ಹೋಗುವಾಗ ಇಬ್ಬರಿಗಿಂತ ಹೆಚ್ಚು ಜನ ಹೋಗದಂತೆ ತಿಳಿಸಲಾಗಿದೆ. ಅದನ್ನು ರೈತರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಹೀಗಿದ್ದರೂ ವಿನಾಕಾರಣ ದೌರ್ಜನ್ಯ ನಡೆಸಿರುವುದು ಖಂಡನೀಯ’ ಎಂದು ಹೇಳಿದರು.

‘ಸಂಘದ ಜಿಲ್ಲಾ ಅಧ್ಯಕ್ಷ ನಾರಾಯಣ ರೆಡ್ಡಿ ಅವರು ಮಧುಮೇಹಿ ರೋಗಿ. ಅವರು ಗುಳಿಗೆ ತರಲು ಹೋಗಿದ್ದರು. ಪೊಲೀಸರು ತಡೆದಾಗ ಅವರಿಗೆ ಗುಳಿಗೆ, ಔಷಧಿ ಚೀಟಿ ತೋರಿಸಿದ್ದರು. ಹೀಗಿದ್ದರೂ ಅವರನ್ನು ಮನಬಂದಂತೆ ಹೊಡೆದಿದ್ದಾರೆ. ರೈತ ಮುರಾರಿ ಏಕಾಂಗಿಯಾಗಿ ಹೊಲಕ್ಕೆ ಹೋಗುತ್ತಿದ್ದರು. ನೀರು ಬಿಡಲು ಹೋಗುತ್ತಿರುವೆ ಎಂದು ತಿಳಿಸಿದರೂ ದೌರ್ಜನ್ಯವೆಸಗಲಾಗಿದೆ. ಕರ್ಫ್ಯೂ ಹೆಸರಿನಲ್ಲಿ ಅಮಾಯಕರಿಕೆ ಕಿರುಕುಳ ಕೊಡುತ್ತಿರುವುದು ಸರಿಯಲ್ಲ’ ಎಂದು ತಿಳಿಸಿದರು.

‘ರೈತರಿಗೆ ತೊಂದರೆಯಾಗದಂತೆ ಕಂಪ್ಲಿ ಘಟಕದಿಂದ ಇತ್ತೀಚೆಗೆ ಅಲ್ಲಿನ ತಹಶೀಲ್ದಾರ್‌ಗೆ ರೈತರು ಮನವಿ ಪತ್ರ ಸಲ್ಲಿಸಿದ್ದರು. ವಿಷಯ ಗೊತ್ತಾಗಿ ಅಲ್ಲಿನ ಪಿಎಸ್‌ಐ ಮೌನೇಶ್‌ ರಾಥೋಡ್‌ ಅವರು ‘ನಿಮ್ಮನ್ನು ನೋಡಿಕೊಳ್ಳುತ್ತೇನೆ’ ಎಂದು ರೈತರಿಗೆ ಧಮಕಿ ಹಾಕಿದ್ದರು. ಈಗ ಸಂದರ್ಭ ನೋಡಿ ರೈತರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ರೈತರ ಮೇಲೆ ದೌರ್ಜನ್ಯವೆಸಗಿದ ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ಲಾಕ್‌ಡೌನ್‌ ತೆರವಾದ ನಂತರ ಜಿಲ್ಲೆಯಾದ್ಯಂತ ರೈತರಿಂದ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಕಾರ್ತಿಕ್‌ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.