ADVERTISEMENT

ಬಳ್ಳಾರಿ: ದಂಧೆ ಮಟ್ಟ ಹಾಕಲು ಐಜಿಪಿ ಸೂಚನೆ

ಗಣರಾಜ್ಯೋತ್ಸವದ ದಿನ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಐಜಿಪಿ ತುರ್ತು ಸಭೆ

ಆರ್. ಹರಿಶಂಕರ್
Published 28 ಜನವರಿ 2026, 7:37 IST
Last Updated 28 ಜನವರಿ 2026, 7:37 IST
ಪಿ.ಎಸ್‌ ಹರ್ಷ
ಪಿ.ಎಸ್‌ ಹರ್ಷ   

ಬಳ್ಳಾರಿ: ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿರುವ ಬಳ್ಳಾರಿ ವಲಯ ಪೊಲೀಸ್‌ ಮಹಾನಿರೀಕ್ಷಕ (ಐಜಿಪಿ) ಡಾ ಪಿ.ಎಸ್‌ ಹರ್ಷ ಶತಾಯಗತಯ ಅಕ್ರಮ ದಂಧೆಗಳನ್ನು ಮಟ್ಟಹಾಕಬೇಕು ಎಂದು ಸೂಚಿಸಿದ್ದಾರೆ. 

ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೆರಿಸಲು ಸಚಿವ ರಹೀಂ ಖಾನ್‌ ಮತ್ತು ಸಂಸದ ಇ. ತುಕಾರಾಂ ಸೋಮವಾರ ನಗರಕ್ಕೆ ಬಂದಾಗ ಪತ್ರಿಕಾಗೋಷ್ಠಿಯಲ್ಲಿ ಈ ಸಂಬಂಧ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಪೊಲೀಸ್‌ ಅಧಿಕಾರಿಗಳ ಸಭೆ ನಡೆದಿದೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ನಡೆಯುತ್ತಿರುವ ಡ್ರಗ್ಸ್‌ ಮಾರಾಟ, ಮಟ್ಕಾ, ಜೂಜು, ಕ್ಲಬ್‌ಗಳು ಸೇರಿದಂತೆ ಅಕ್ರಮ ದಂಧೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳು ಸಚಿವರು, ಸಂಸದರಿಗೆ ತೀಕ್ಷ್ಣ ಪ್ರಶ್ನೆಗಳನ್ನು ಕೇಳಿದ್ದರು. 

ADVERTISEMENT

ಈ ಸಭೆಯಲ್ಲಿ ಎಸ್‌ಪಿ, ಎಎಸ್‌ಪಿಗಳು, ಡಿವೈಎಸ್‌ಪಿಗಳು ಇದ್ದರು ಎಂದು ಗೊತ್ತಾಗಿದೆ.  

ಗಾಂಜಾ ಸೇರಿದಂತೆ ಡ್ರಗ್ಸ್‌ಗಳನ್ನು ಸಾಗಿಸುವವರು, ಮಾರಾಟ ಮಾಡುತ್ತಿರುವವರನ್ನು ಪತ್ತೆ ಹಚ್ಚಬೇಕು. ಸಣ್ಣಪುಟ್ಟ ಪ್ರಮಾಣದಲ್ಲಿ ಮಾರಾಟ ಮಾಡುವವರ ಹಿಂದೆ ಬೀಳದೇ, ಅವುಗಳನ್ನು ನಗರದ ಒಳಗೆ ತಲುಪಿಸುತ್ತಿರುವವರನ್ನು ಹುಡುಕಬೇಕು. ಕಾಲೇಜುಗಳ ಪ್ರಾಚಾರ್ಯರನ್ನು ಕರೆದು ಅವರಿಗೆ ಜಾಗೃತಿ ಮೂಡಿಸಬೇಕು. ಜತೆಗೆ, ಮಟ್ಕಾ, ಇಸ್ಪೀಟ್‌, ಕ್ಲಬ್‌ಗಳು ಬಾಗಿಲು ಬಂದ್‌ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಐಜಿ ತಿಳಿಸಿದ್ದಾರೆ.

ಪ್ರಕರಣಗಳು ದಾಖಲಾಗುವುದು ಮುಖ್ಯವಲ್ಲ, ಅವುಗಳು ನ್ಯಾಯಾಲಯದಲ್ಲಿ ಪ್ರಬಲವಾಗಿ ನಿಲ್ಲಬೇಕು. ಪೊಲೀಸ್‌ ಇಲಾಖೆ ಸಮರ್ಥವಾಗಿ ವಾದಿಸಬೇಕು. ಇದಕ್ಕೆ ಪೂರಕವಾಗಿ ತನಿಖೆ ನಡೆಯಬೇಕು ಎಂದೂ ತಾಕೀತು ಮಾಡಲಾಗಿದೆ. 

ಸೂಚನೆ ಆಧರಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ.ಪಿ ಮಂಗಳವಾರ ಜಿಲ್ಲೆಯ ಇನ್ಸ್‌ಪೆಕ್ಟರ್‌ ಮತ್ತು ಅವರಿಗೂ ಮೇಲ್ಪಟ್ಟ ಅಧಿಕಾರಿಗಳ ಸಭೆ ನಡೆಸಿದರು. 

ಎನ್‌ಸಿಬಿಯೊಂದಿಗೂ ಚರ್ಚೆ: ಮಾದಕವಸ್ತು ನಿಯಂತ್ರಣ ಮತ್ತು ಕಾನೂನು ಜಾರಿಯ ಅತ್ಯುನ್ನತ ಸಂಸ್ಥೆಯಾದ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ಸಿಬಿ)ಯೊಂದಿಗೆ ವಲಯ ಐಜಿಪಿ ಹರ್ಷ ಚರ್ಚೆ ನಡೆಸಿದ್ದು, ಮಾದಕ ವಸ್ತುಗಳ ನಿಯಂತ್ರಣದ ವಿಚಾರದಲ್ಲಿ ಸಹಕಾರ ಕೋರಿದ್ದಾರೆ. 

ದೇಶದಲ್ಲಿ ಮಾದಕ ದ್ರ್ಯವ ಸಾಗಣೆ, ಮಾರಾಟಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಎನ್‌ಸಿಬಿ ನಿರ್ವಹಿಸುತ್ತಿರುತ್ತದೆ. ಬಳ್ಳಾರಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನೂ ಕೂಡಲೇ ಹಂಚಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ. ಎನ್‌ಸಿಬಿ ಜತೆಗಿನ ಸಂವಹನಕ್ಕಾಗಿ ಒಂದು ವ್ಯವಸ್ಥೆ ಮಾಡಿಕೊಳ್ಳಬೇಕಾಗಿಯೂ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಗೊತ್ತಾಗಿದೆ. 

ಇದರ ಜತೆಗೆ, ರಾಜ್ಯದಲ್ಲಿಯೂ ಸಿಐಡಿ ಸೇರಿದಂತೆ ಈ ವಿಷಯದಲ್ಲಿ ಆಳವಾದ ಮಾಹಿತಿ ಹೊಂದಿರುವ ತಂಡಗಳೊಂದಿಗೂ ಸಂಪರ್ಕದಲ್ಲಿರುವಂತೆ ಜಿಲ್ಲೆಯ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ ಎನ್ನಲಾಗಿದೆ.

ಸಾರ್ವಜನಿಕರು ಮಾಹಿತಿ ನೀಡಬಹುದು: ಐಜಿಪಿ

ಡ್ರಗ್ಸ್‌ ನಿಯಂತ್ರಣಕ್ಕಾಗಿ ಇಲಾಖೆಯ ಅಧಿಕಾರಿ ಸಿಬ್ಬಂದಿಯನ್ನು ಬಿಗಿ ಮಾಡುವುದರ ಜತೆಗೆ ಜನರಿಂದಲೂ ಮಾಹಿತಿ ಪಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ವಾಟ್ಸ್‌ಆ್ಯಪ್‌ ಸಂಖ್ಯೆಯೊಂದನ್ನು ಸಾರ್ವಜನಿಕರಿಗೆ ನಾವು ನೀಡಲಿದ್ದೇವೆ ಎಂದು ಬಳ್ಳಾರಿ ವಲಯ ಐಜಿಪಿ ಪಿ.ಎಸ್‌ ಹರ್ಷ ತಿಳಿಸಿದ್ದಾರೆ.

ಸಾರ್ವಜನಿಕರು ವಾಟ್ಸ್‌ಆ್ಯಪ್‌ ಸಂಖ್ಯೆ ಮೂಲಕ ಮಾಹಿತಿ ರವಾನಿಸಬಹುದು. ಇಲ್ಲವೇ ಜಿಲ್ಲಾ ಪೊಲೀಸ್‌ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಬಹುದು. ನಾವು ಅದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಅವರ ಗುರುತನ್ನು ಗೌಪ್ಯವಾಗಿಡುತ್ತೇವೆ. ಜತೆಗೆ ಕೈಗೊಂಡ ಕ್ರಮದ ಬಗ್ಗೆಯೂ ನಾವು ಜನರಿಗೆ ಮಾಹಿತಿ ನೀಡುತ್ತೇವೆ ಎಂದು ಹರ್ಷ ‘ಪ್ರಜಾವಾಣಿ’ಗೆ ತಿಳಿಸಿದರು. 

ಎಕ್ಸ್‌ಟ್ರಾಗಳು ಬೇಡ

ಯಾವುದೇ ಪ್ರಕರಣದಲ್ಲಿ ಕಾನೂನಾತ್ಮಕವಾಗಿ ಏನು ಮಾಡಬೇಕೋ ಅದನ್ನೇ ಮಾಡಬೇಕು. ಭಾವನಾತ್ಮಕ ಕ್ರಮಗಳಿಗೆ ಅವಕಾಶವಿಲ್ಲ. ಹತ್ತಾರು ಕ್ಯಾಮೆರಾಗಳನ್ನು ಸುತ್ತಲೂ ಇಟ್ಟುಕೊಂಡು ಹೋಗಿ ದಾಳಿ ಮಾಡುವುದು ವಿಡಿಯೊ ಮಾಡಿ ಹಂಚಿಕೊಳ್ಳುವುದು ಇಂಥದ್ದಕ್ಕೆಲ್ಲ ಅವಕಾಶವಿಲ್ಲ ಎಂದು ಅಧಿಕಾರಿಗಳಿಗೆ ಐಜಿಪಿ ಹರ್ಷ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.