ಹಗರಿಬೊಮ್ಮನಹಳ್ಳಿ: ‘ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಮಗಾರಿಗಳು ಕಳಪೆಯಾಗಿದ್ದರೆ ಅಂಥಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಶಾಸಕ ಕೆ.ನೇಮರಾಜನಾಯ್ಕ ಎಚ್ಚರಿಸಿದರು.
ತಾಲ್ಲೂಕಿನ ಮಸಾರಿ ನೆಲ್ಕುದ್ರಿ, ಮಾಲವಿ, ಹರೇಗೊಂಡನಹಳ್ಳಿ, ಉಲುವತ್ತಿ, ವಟ್ಟಮ್ಮನಹಳ್ಳಿ, ಕನ್ನಿಹಳ್ಳಿ, ಕೃಷ್ಣಾಪುರ, ಬನ್ನಿಗೋಳ, ಶೀಗೇನಹಳ್ಳಿ, ತಂಬ್ರಹಳ್ಳಿ-ಉತ್ತರ ಗ್ರಾಮಗಳಲ್ಲಿ ಅಂದಾಜು ₹6.5ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಮಸಾರಿ ನೆಲ್ಕುದ್ರಿ ಗ್ರಾಮದಲ್ಲಿ ₹30 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕುಡಿಯುವ ನೀರಿನ ಸ್ಥಾವರ ಬಳಕೆಯಾಗದೇ ಸೋರಿಕೆಯಾಗುತ್ತಿದೆ, ಈ ಕುರಿತು ಕ್ರಮ ಕೈಗೊಳ್ಳುವಂತೆ ಮುಖಂಡ ಕೆ.ರಾಜಶೇಖರಪ್ಪ ಒತ್ತಾಯಿಸಿದರು. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಬಸವರೆಡ್ಡಿ ಅವರಿಗೆ ಕರೆಮಾಡಿ ಕಾಮಗಾರಿ ಕಳಪೆಯಾಗಿದ್ದರೆ ಗುತ್ತಿಗೆದಾರನ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಶಾಸಕರು ತಾಕೀತು ಮಾಡಿದರು.
‘ತಾಲ್ಲೂಕಿನಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಚೆಕ್‍ಡ್ಯಾಂ ನಿರ್ಮಿಸುವುದಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದೆ. ಅಂತರ್ಜಲ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ. ಕಳೆದ 2 ವರ್ಷಗಳಲ್ಲಿ ಕ್ಷೇತ್ರದ ಎಲ್ಲ 254 ಬೂತ್‍ಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಮುಖಂಡರಾದ ಬಾದಾಮಿ ಮೃತ್ಯುಂಜಯ, ಕನ್ನಿಹಳ್ಳಿ ಚಂದ್ರಶೇಖರ್, ಬ್ಯಾಟಿ ನಾಗರಾಜ, ಫಕ್ಕೀರರೆಡ್ಡಿ, ನರೇಗಲ್ಲು ಕೊಟ್ರೇಶ್, ಕಾಳಿ ರೇವಣಸಿದ್ದಪ್ಪ, ಹೋಟೆಲ್ ಸಿದ್ದರಾಜು, ಮಹಾಂತೇಶ್‍ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.