ADVERTISEMENT

ಹೊಸಪೇಟೆ: ಪುರಂದರ ಮಂಟಪಕ್ಕೆ ಜಿಲ್ಲಾಧಿಕಾರಿ ಭೇಟಿ

ವಿದೇಶಿಯರಿಂದ ಮದ್ಯ ಸೇವನೆ ಆರೋಪ; ಪ್ರಜಾವಾಣಿ ವರದಿ ಪರಿಣಾಮ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 6:12 IST
Last Updated 25 ಫೆಬ್ರುವರಿ 2023, 6:12 IST
ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಅವರು ಶುಕ್ರವಾರ ಹಂಪಿ ಪುರಂದರದಾಸರ ಮಂಟಪಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದರು
ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಅವರು ಶುಕ್ರವಾರ ಹಂಪಿ ಪುರಂದರದಾಸರ ಮಂಟಪಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದರು   

ಹೊಸಪೇಟೆ (ವಿಜಯನಗರ): ವಿಶ್ವಪ್ರಸಿದ್ಧ ಹಂಪಿ ಪುರಂದರದಾಸರ ಮಂಟಪಕ್ಕೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

‘ಹಂಪಿ ಪುರಂದರದಾಸರ ಮಂಟಪದಲ್ಲಿ ವಿದೇಶಿಗರಿಂದ ಮದ್ಯ ಸೇವನೆ’ ಶೀರ್ಷಿಕೆ ಅಡಿ ಫೆ. 21ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಹಂಪಿಯಲ್ಲಿ ಮದ್ಯ ಸೇವನೆ ನಿಷೇಧವಿದ್ದರೂ ಕೆಲ ವಿದೇಶಿ ಪ್ರವಾಸಿಗರು ಮಂಟಪದೊಳಗೆ ಕುಳಿತು ಮದ್ಯಪಾನ ಮಾಡಿದ್ದರು. ಅದು ತೀವ್ರ ಟೀಕೆಗೆ ಗುರಿಯಾಗಿತ್ತು. ಭದ್ರತೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಅಲ್ಲಿಗೆ ಭೇಟಿ ಕೊಟ್ಟಿರುವುದು ಮಹತ್ವ ಪಡೆದಿದೆ.

‘ಇತ್ತೀಚೆಗೆ ವಿದೇಶಿಗರು ಪುರಂದರದಾಸರ ಮಂಟಪದಲ್ಲಿ ಮದ್ಯಪಾನ ಮಾಡಿರುವ ವಿಷಯ ಗೊತ್ತಾಯಿತು. ಹೀಗಾಗಿ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವೆ. ಮದ್ಯದ ಮೇಲೆ ನಿಷೇಧವಿರುವ ಮಾಹಿತಿಯನ್ನು ಪುರಂದರ ಮಂಟಪ ಸೇರಿದಂತೆ ಇತರೆ ಕಡೆಗಳಲ್ಲಿ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ’ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಇದೇ ವೇಳೆ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣ ಪ್ರಾಧಿಕಾರದ ಕಚೇರಿಗೂ ಭೇಟಿ ಕೊಟ್ಟಿರುವೆ. ಹಂಪಿಯಲ್ಲಿ ಪೊಲೀಸರು, ಪ್ರವಾಸಿ ಮಿತ್ರರು, ಗೃಹರಕ್ಷಕರು ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಭದ್ರತಾ ಸಿಬ್ಬಂದಿ ಇದ್ದಾರೆ. ಎಲ್ಲರೂ ಸಮನ್ವಯದಿಂದ ಕೆಲಸ ಮಾಡುವಂತೆ ಯೋಜನೆ ರೂಪಿಸಲಾಗುವುದು. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಲಾಗುವುದು. ಜಿ–20 ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರತಿನಿಧಿಗಳು ಹಂಪಿಗೂ ಭೇಟಿ ನೀಡುವವರಿದ್ದಾರೆ. ಮೂಲಸೌಕರ್ಯ ಕಲ್ಪಿಸಲು ಗಮನಹರಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.