ADVERTISEMENT

ತೆಕ್ಕಲಕೋಟೆ | ಆದಿಮಾನವನ 2ನೇ ಅಸ್ಥಿಪಂಜರ ಪತ್ತೆ

ಮನೆಯಲ್ಲಿ ಶವಸಂಸ್ಕಾರ ಮಾಡುವ ಪದ್ದತಿ ಇತ್ತು: ಪ್ರೋ. ರವಿ ಕೋರಿಶೆಟ್ಟರ್, ‘ಬೂದಿ ದಿಬ್ಬ’ ರಕ್ಷಣೆಗೆ ಆದ್ಯತೆ ನೀಡಿ: ನಮಿತಾ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 3:06 IST
Last Updated 9 ಫೆಬ್ರುವರಿ 2026, 3:06 IST
ತೆಕ್ಕಲಕೋಟೆ ಪಟ್ಟಣದಲ್ಲಿ ನಡೆಯುತ್ತಿರುವ ಉತ್ಖನನ ಸ್ಥಳದಲ್ಲಿ ಎರಡನೆ ಅಸ್ಥಿಪಂಜರ ಪತ್ತೆಯಾಗಿರುವುದು
ತೆಕ್ಕಲಕೋಟೆ ಪಟ್ಟಣದಲ್ಲಿ ನಡೆಯುತ್ತಿರುವ ಉತ್ಖನನ ಸ್ಥಳದಲ್ಲಿ ಎರಡನೆ ಅಸ್ಥಿಪಂಜರ ಪತ್ತೆಯಾಗಿರುವುದು   

ತೆಕ್ಕಲಕೋಟೆ: ಪಟ್ಟಣದ ಗೌಡ್ರಮೂಲೆ ಬೆಟ್ಟ ಪ್ರದೇಶಗಳಲ್ಲಿ ನಡೆಯುತ್ತಿರುವ ಉತ್ಖನನ ಸ್ಥಳದಲ್ಲಿ ಶನಿವಾರ ಆದಿಮಾನವನ ಮತ್ತೊಂದು ಅಸ್ಥಿಪಂಜರ ದೊರೆತಿದ್ದು, ಅಧ್ಯಯನಾಸಕ್ತರ ಕುತೂಹಲ ಹೆಚ್ಚಿಸಿದೆ.

ಈಚೆಗೆ ದೊರೆತ, ಆದಿಮಾನವನ ಪಳೆಯುಳಿಕೆ ಪಕ್ಕದಲ್ಲಿ ಉತ್ಖನನ ಕಾರ್ಯ ಮುಂದುವರಿಸಿದಾಗ ಮತ್ತೊಂದು ಅಸ್ಥಿಪಂಜರ ಗೋಚರಿಸಿದೆ. ‘ಎದೆಯ ಭಾಗದ ಮೇಲೆ ದೊಡ್ಡ ಗಾತ್ರದ ಕಲ್ಲು ಇರುವುದರಿಂದ ಅದನ್ನು ಸರಿಸಿದಲ್ಲಿ ಮೊದಲನೇ ಪಳೆಯುಳಿಕೆಗೆ ಧಕ್ಕೆಯಾಗುವ ಸಾಧ್ಯತೆ ಇದ್ದು, ಅದನ್ನು ಹಾಗೆಯೇ ಬಿಟ್ಟಿರುವುದಾಗಿ’ ಅಮೇರಿಕಾದ ಹಾರ್ಟ್ ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ಉತ್ಖನನ ಕಾರ್ಯದ ಸಹ ನಿರ್ದೇಶಕಿ ನಮಿತಾ ಎಸ್. ಸುಗಂಧಿ ತಿಳಿಸಿದರು.

‘ಸುಮಾರು 3.5 ರಿಂದ 5 ಸಾವಿರ ವರ್ಷಗಳ ಹಿಂದಿನ ಇತಿಹಾಸ ಇರುವ ಈ ಸ್ಥಳ ಅಧ್ಯಯನಕ್ಕೆ ಯೋಗ್ಯವಾಗಿದ್ದು, ಮುಂದಿನ ದಿನಗಳಲ್ಲಿ ಇವುಗಳ ಸಂರಕ್ಷಣೆ ಹಾಗೂ ಹೆಚ್ಚಿನ ಸಂಶೋಧನೆಯ ಅವಶ್ಯಕತೆ ಇದೆ’ ಎಂದು ತಿಳಿಸಿದರು.

ADVERTISEMENT

‘ಜಕ್ಕೇರು ಗುಡ್ಡದ ಬಳಿ ಇದೇ ಕಾಲಮಾನದ ಲೋಹಯುಗಕ್ಕೆ ಸಂಬಂಧಿಸಿದ ‘ಬೂದಿದಿಬ್ಬ’ದ ಬಹುದೊಡ್ಡ ನೆಲೆ ಇದ್ದು, ಇದರ ಸಂರಕ್ಷಣೆಗೆ ಸ್ಥಳೀಯ ಆಡಳಿತ ಕ್ರಮ ಕೈಗೊಂಡಲ್ಲಿ ಅಧ್ಯಯನಕ್ಕೆ ಅನುಕೂಲವಾಗುತ್ತದೆ. ಇಲ್ಲವಾದರೆ ಅದೂ ಕಣ್ಮರೆಯಾಗಬಹುದು’ ಎಂದು ಬೇಸರ ವ್ಯಕ್ತಪಡಿಸಿದರು.

‘ಉತ್ಖನನ ನಡೆಯುತ್ತಿರುವ ಗೌಡ್ರಮೂಲೆಯ ಎತ್ತರದ ಬೆಟ್ಟ ಪ್ರದೇಶದ ವಿಶಾಲ ಮೈದಾನದಲ್ಲಿ ಸೂಕ್ಷ್ಮ ಶಿಲಾಯುಗದ ಚಿಕ್ಕಗಾತ್ರದ ಆಯುಧಗಳು ದೊರೆತಿದ್ದು, ಇವುಗಳನ್ನು ಬೇಟೆಗಾಗಿ ಇಲ್ಲವೆ ಚರ್ಮ ಸುಲಿಯಲು ಅಥವಾ ಮಾಂಸಕ್ಕಾಗಿ ಉಪಯೋಗಿಸಿರುವ ಸಾಧ್ಯತೆ ಇದೆ’ ಎಂದು ಅವರು ಹೇಳಿದರು. 

‘ಇದೇ ಸ್ಥಳದಲ್ಲಿ ಕಲ್ಲುರಾಶಿ ಕಂಡುಬರುತ್ತಿದ್ದು, ವಾಸಕ್ಕೆ ಬಳಸಿರುವ ಸಾಧ್ಯತೆ ಇದೆ. ಏಕೆಂದರೆ ಇಲ್ಲಿಯೇ ಚಿಕ್ಕ ಹಾಗೂ ದೊಡ್ಡ ಗಾತ್ರದ ಮಡಕೆಗಳು ಕಂಡುಬಂದಿವೆ’ ಎಂದು ನಮಿತಾ ತಿಳಿಸಿದರು.

ಇತಿಹಾಸ ತಜ್ಞರಾದ ಪ್ರೊ. ರವಿ ಕೋರಿಶೆಟ್ಟರ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಉತ್ಖನನದ ಸ್ಥಳದಲ್ಲಿ ಸುಮಾರು 4 ಸಾವಿರ ವರ್ಷಗಳ ಹಿಂದೆ ವಾಸವಿದ್ದ ನವಶಿಲಾಯುಗದ ಮಾನವನ ಬಗ್ಗೆ ಮಾಹಿತಿ ದೊರೆಯುತ್ತದೆ. ಇವರದ್ದು ಕೃಷಿಕ ಸಮಾಜವಾಗಿತ್ತು ಎಂದು ತಿಳಿದುಬರುತ್ತದೆ. ಬಹುಮುಖ್ಯವಾಗಿ ಶವ ಸಂಸ್ಕಾರ ಪದ್ಧತಿ ವಿಶಿಷ್ಟವಾಗಿತ್ತು. ಪ್ರತಿಷ್ಠಿತ ವ್ಯಕ್ತಿ ಸತ್ತರೆ ದೊಡ್ಡ ದೊಡ್ಡ ಮಡಿಕೆಗಳಲ್ಲಿ ಮನೆಯ ನೆಲದಲ್ಲಿಯೇ ಹಾಗೂ ಇತರರನ್ನು ಸಾಮಾನ್ಯ ರೀತಿಯಲ್ಲಿ ಶವಸಂಸ್ಕಾರ ಮಾಡುತ್ತಿದ್ದರು ಎಂದು ತಿಳಿದು ಬರುತ್ತದೆ’ ಎಂದು ತಿಳಿಸಿದರು.

1964-65ರಲ್ಲಿ ಎಂ. ಎಸ್. ನಾಗರಾಜ ರಾವ್ ನಡೆಸಿದ ಉತ್ಖನನದ ಸಂದರ್ಭದಲ್ಲಿ ದೊರೆತ ಶವ, ಮಣ್ಣಿನ ಮಡಿಕೆ ಹಾಗೂ ಇತರ ವಸ್ತುಗಳನ್ನು ಪುಣೆಯ ‘ಡೆಕ್ಕನ್ ಕಾಲೇಜ್‌ ಮ್ಯೂಸಿಯಂ’ನಲ್ಲಿ ಸಂಗ್ರಹಿಸಿ ಇಡಲಾಗಿದೆ ಎಂಬ ವಿಷಯವನ್ನೂ ಕೋರಿಶೆಟ್ಟರ್‌ ತಿಳಿಸಿದರು. 

ತೆಕ್ಕಲಕೋಟೆ ಪಟ್ಟಣದಲ್ಲಿ ನಡೆಯುತ್ತಿರುವ ಉತ್ಖನನ ಸ್ಥಳದಲ್ಲಿ ಉತ್ಖನನ ಕಾರ್ಯದ ನಿರ್ದೇಶಕ ಹಾಗೂ ಹಂಪಿ ಕಮಲಾಪುರದ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕ ಡಾ. ಆರ್. ಶೇಜೇಶ್ವರ ಪರಿಶೀಲನೆ ನಡೆಸಿದರು

ಉತ್ಖನನದ ಸ್ಥಳಕ್ಕೆ ಜನರ ಗುಂಪು  ಕಳೆದ ಎರಡು ಮೂರು ದಿನಗಳಿಂದ ಮಾಧ್ಯಮಗಳಲ್ಲಿ ನಿರಂತರವಾಗಿ ವರದಿ ಬಂದ ಕಾರಣ ಕುತೂಹಲ ತಾಳಲಾರದೇ ಜನರು ಉತ್ಖನನದ ಸ್ಥಳಕ್ಕೆ ಬರುತ್ತಿದ್ದಾರೆ. ದೂರದ ಕೊಪ್ಪಳ ಜಿಲ್ಲೆಯ ಹಿರೇಬೆಣಕಲ್‌ನ ಸಂಶೋಧನಾರ್ಥಿ ಹರನಾಯಕ ಹಾಗೂ ಎಂಜನಿಯರ್ ಮಂಜುನಾಥ ದೊಡ್ಮನಿ ‘ಪ್ರಜಾವಾಣಿ’ ಯಲ್ಲಿ ಬಂದ ವರದಿ ನೋಡಿ ಕುತೂಹಲ ತಾಳದೇ ಉತ್ಖನನ ಸ್ಥಳಕ್ಕೆ ಖುದ್ದಾಗಿ ವೀಕ್ಷಿಸಲು ಬಂದಿರುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.