ADVERTISEMENT

‘ಪರಿಸರ ಹಾಳಾದರೆ ಬದುಕು ಹಾಳಾದಂತೆ’

ಹೊಸಪೇಟೆ ತಾಲ್ಲೂಕಿನಾದ್ಯಂತ 25 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 15:36 IST
Last Updated 5 ಜೂನ್ 2019, 15:36 IST
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಆನಂದ್ ಟಿ.ಚವ್ಹಾಣ್ ಅವರು ಬುಧವಾರ ಹೊಸಪೇಟೆಯ ಮುನ್ಸಿಪಲ್‌ ಕಾಲೇಜು ಆವರಣದಲ್ಲಿ ಸಸಿ ನೆಟ್ಟು, ನೀರೆರೆದು ವಿಶ್ವ ಪರಿಸರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಆನಂದ್ ಟಿ.ಚವ್ಹಾಣ್ ಅವರು ಬುಧವಾರ ಹೊಸಪೇಟೆಯ ಮುನ್ಸಿಪಲ್‌ ಕಾಲೇಜು ಆವರಣದಲ್ಲಿ ಸಸಿ ನೆಟ್ಟು, ನೀರೆರೆದು ವಿಶ್ವ ಪರಿಸರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು   

ಹೊಸಪೇಟೆ: ಅರಣ್ಯ, ಕಂದಾಯ, ಶಿಕ್ಷಣ, ತೋಟಗಾರಿಕೆ, ತಾಲ್ಲೂಕು ಪಂಚಾಯಿತಿ, ನಗರಸಭೆ, ವಕೀಲರ ಸಂಘ, ಕಾನೂನು ಸೇವಾ ಸಮಿತಿ ಸಹಭಾಗಿತ್ವದಲ್ಲಿ ಬುಧವಾರ ನಗರದ ಮುನ್ಸಿಪಲ್‌ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಆನಂದ್ ಟಿ.ಚವ್ಹಾಣ್ ಅವರು ಸಸಿ ನೆಟ್ಟು, ಅದಕ್ಕೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ, ‘ಪ್ರತಿಯೊಂದು ಜೀವರಾಶಿ ಉಸಿರಾಡಬೇಕಾದರೆ ಗಿಡ, ಮರಗಳು ಬೇಕು. ಏಕೆಂದರೆ ಅವುಗಳು ಹೊರಸೂಸುವ ಆಮ್ಲಜನಕದಿಂದ ಇಡೀ ಜೀವಸಂಕುಲ ಉಸಿರಾಡುತ್ತಿದೆ. ಪರಿಸರ ಹಾಳಾದರೆ ಬದುಕು ಹಾಳಾದಂತೆ. ಆ ಎಚ್ಚರಿಕೆಯೊಂದಿಗೆ ಪರಿಸರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು’ ಎಂದು ಕಿವಿಮಾತು ಹೇಳಿದರು.

‘ನಗರ ಸೇರಿದಂತೆ ತಾಲ್ಲೂಕಿನಾದ್ಯಂತ 25 ಸಾವಿರ ಸಸಿಗಳನ್ನು ನೆಡಲು ವಿವಿಧ ಇಲಾಖೆಗಳ ಮುಖ್ಯಸ್ಥರು ಮುಂದೆ ಬಂದಿರುವುದರಿಂದ ಈ ಸಲದ ವಿಶ್ವ ಪರಿಸರ ದಿನಕ್ಕೆ ವಿಶೇಷ ಅರ್ಥ ಬಂದಿದೆ. ಸಸಿಗಳನ್ನು ನೆಟ್ಟು ಬಿಟ್ಟರೆ ಸಾಲದು. ಅವುಗಳನ್ನು ನಮ್ಮ ಮಕ್ಕಳಂತೆ ಪೋಷಿಸಬೇಕು. ಆಗ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಬದುಕು ನಡೆಸಬಹುದು. ಈಗಾಗಲೇ ಪ್ರಕೃತಿ ಮೇಲೆ ಸಾಕಷ್ಟು ದಾಳಿ ನಡೆಸಿದ್ದೇವೆ. ಈಗ ಅದರಿಂದ ಹೊರಬರಬೇಕು. ಅದನ್ನು ಸಂರಕ್ಷಿಸುವ ಕೆಲಸವಾಗಬೇಕು’ ಎಂದು ತಿಳಿಸಿದರು.

ADVERTISEMENT

ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಬಿ.ಚನ್ನಪ್ಪ ಮಾತನಾಡಿ, ‘ಸಸಿ ನೆಡುವ ಕಾರ್ಯಕ್ರಮ ಪರಿಸರ ದಿನಕ್ಕಷ್ಟೇ ಸೀಮಿತವಾಗಬಾರದು. ವರ್ಷವಿಡೀ ಈ ಕಾರ್ಯಕ್ರಮ ನಡೆಯಬೇಕು. ಶಾಲಾ–ಕಾಲೇಜುಗಳು, ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ, ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸಬೇಕು. ಆಗ ಪರಿಸರ ದಿನಕ್ಕೆ ನಿಜವಾದ ಅರ್ಥ ಬರುತ್ತದೆ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ.ಜೋಶಿ ಮಾತನಾಡಿ, ‘ಇಡೀ ಜಗತ್ತಿನಲ್ಲಿ ಶೇ 33, ಭಾರತದಲ್ಲಿ ಶೇ 24.68ರಷ್ಟು ಅರಣ್ಯ ಪ್ರದೇಶವಿದೆ. ಅರಣ್ಯ ಸಮೃದ್ಧವಾಗಿದ್ದರೆ ನಮ್ಮ ಸುತ್ತಮುತ್ತಲಿನ ವಾತಾವರಣ ಸರಿಯಿರಲು ಸಾಧ್ಯ. ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ, ಮೂಲಸೌಕರ್ಯ ಕಲ್ಪಿಸುವ ಹೆಸರಿನಲ್ಲಿ ಪರಿಸರವನ್ನು ನಾಶ ಮಾಡುತ್ತಿರುವುದರಿಂದ ಅನೇಕ ಅಡ್ಡಪರಿಣಾಮಗಳು ಆಗುತ್ತಿವೆ. ಜಾಗತಿಕ ತಾಪಮಾನದಲ್ಲಿ ಏರುಪೇರಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ’ ಎಂದು ಹೇಳಿದರು.

ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಎಸ್.ಶಿವನಗೌಡರ, ವಲಯ ಅರಣ್ಯ ಅಧಿಕಾರಿ ಎನ್‌. ಬಸವರಾಜ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ವೆಂಕೋಬಪ್ಪ, ವಕೀಲ ಎ.ಕರುಣಾನಿಧಿ, ಎ.ಸಿ.ಎಫ್. ಎಂ.ಡಿ.ಮೋಹನ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜೇಂದ್ರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮರೇಶ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಭಾಸ್ಕರ್, ಉಪ ತಹಶೀಲ್ದಾರ್‌ ಅಮರನಾಥ, ವಕೀಲರಾದ ಜಂಬಣ್ಣ, ರಾಮಣ್ಣ, ತಾರಿಹಳ್ಳಿ ಹನುಮಂತಪ್ಪ ಇದ್ದರು.

ತಾಲ್ಲೂಕಿನ ಹೊಸೂರಿನ ಹೊಸೂರಮ್ಮ ದೇವಸ್ಥಾನ, ಮಲಪನಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಂತರ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.