ADVERTISEMENT

ಜಿಂದಾಲ್ ಎಲೆಕ್ಟ್ರಿಕಲ್ ಕೈಗಾರಿಕೆ ಸ್ಥಾಪನೆಗೆ ವಿರೋಧ

ಕುಡತಿನಿ ಸೇರಿದಂತೆ ಸುತ್ತಲಿನ ಗ್ರಾಮಗಳ ಭೂಸಂತ್ರಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 4:39 IST
Last Updated 28 ಡಿಸೆಂಬರ್ 2025, 4:39 IST
ಕುಡತಿನಿಯ ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರವು ಜಿಂದಾಲ್‌ನ ನೂತನ ಎಲೆಕ್ಟ್ರಿಕಲ್ ಕೈಗಾರಿಕೆಯ ಸ್ಥಾಪನೆಯ ಉದ್ದೇಶಕ್ಕಾಗಿ ಜಮೀನು ನೀಡಿರುವುದನ್ನು ವಿರೋಧಿಸಿ ನೂರಾರು ರೈತರು ಶನಿವಾರ ಪ್ರತಿಭಟನೆ ನಡೆಸಿದರು
ಕುಡತಿನಿಯ ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರವು ಜಿಂದಾಲ್‌ನ ನೂತನ ಎಲೆಕ್ಟ್ರಿಕಲ್ ಕೈಗಾರಿಕೆಯ ಸ್ಥಾಪನೆಯ ಉದ್ದೇಶಕ್ಕಾಗಿ ಜಮೀನು ನೀಡಿರುವುದನ್ನು ವಿರೋಧಿಸಿ ನೂರಾರು ರೈತರು ಶನಿವಾರ ಪ್ರತಿಭಟನೆ ನಡೆಸಿದರು   

ಕುಡತಿನಿ (ಸಂಡೂರು): ಪಟ್ಟಣದ ಹೊರವಲಯದಲ್ಲಿನ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಗೆ ಸೇರಿದ ಕೈಗಾರಿಕಾ ಪ್ರದೇಶದಲ್ಲಿ ಜಿಂದಾಲ್ ಕಾರ್ಖಾನೆಯ ನೂತನ ಎಲೆಕ್ಟ್ರಿಕಲ್ ಕೈಗಾರಿಕೆಯ ಸ್ಥಾಪನೆಗೆ ವಿರೋಧಿಸಿ ಕುಡತಿನಿ ಸೇರಿದಂತೆ ಸುತ್ತಲಿನ ಗ್ರಾಮಗಳ ಭೂಸಂತ್ರಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಮಾತನಾಡಿ, ‘ಕುಡುತಿನಿ ಪಟ್ಟಣ ಸೇರಿದಂತೆ ಸುತ್ತಲಿನ ಏಳು ಗ್ರಾಮಗಳ ರೈತರಿಂದ ಸರ್ಕಾರವು ಕೈಗಾರಿಕೆಗಳ ಸ್ಥಾಪನೆಗಾಗಿ ಸುಮಾರು 12,000 ಎಕರೆಯ ಭೂಮಿ ವಶಪಡಿಸಿಕೊಂಡು 14 ವರ್ಷಗಳಾದರೂ ಯಾವುದೇ ಕೈಗಾರಿಕೆಗಳನ್ನು ಸ್ಥಾಪಿಸಿಲ್ಲ’ ಎಂದರು.

‘ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಕೈಗಾರಿಕೆಗಳ ಸ್ಥಾಪನೆಗೆ ವಶಪಡಿಸಿಕೊಂಡ ಜಮೀನುಗಳನ್ನು ಜಿಂದಾಲ್ ಸೇರಿದಂತೆ ಇತರೆ ಕೈಗಾರಿಕೆಗಳಿಗೆ ಸಣ್ಣ ಪ್ರಮಾಣದ ಕೈಗಾರಿಕೆಗಳ ಸ್ಥಾಪನೆಯ ಉದ್ದೇಶಕ್ಕಾಗಿ ನೀಡುವುದು ಸರಿಯಲ್ಲ. ರಾಜ್ಯ ಸರ್ಕಾರವು ತಕ್ಷಣ ರೈತರ ಸಮ್ಮುಖದಲ್ಲಿ ಸಭೆ ನಡೆಸಿ ಭೂಸಂತ್ರಸ್ತರಿಗೆ ಅಗತ್ಯ ಭೂ ಪರಿಹಾರ ನೀಡಿ ಉದ್ಯೋಗ ಭದ್ರತೆ ಒದಗಿಸುವವರೆಗೂ ಯಾವುದೇ ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಸ್ಥಾಪಿಸಲು ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದರು.

ADVERTISEMENT

ಸಿಐಟಿಯುನ ರಾಜ್ಯ ಉಪಾಧ್ಯಕ್ಷ ಜೆ. ಸತ್ಯಬಾಬು ಮಾತನಾಡಿ, ‘ಲಕ್ಷ್ಮಿ ಮಿತ್ತಲ್, ಬ್ರಾಹ್ಮಿಣಿ ಸ್ಟೀಲ್, ಎನ್‌ಎಂಡಿಸಿ ಕಂಪನಿಗಳು ಒಂದೇ ಭಾಗದಲ್ಲಿ ಜಮೀನುಗಳನ್ನು ಖರೀದಿಸಿದ್ದು, ಮಿತ್ತಲ್ ಕೈಗಾರಿಕೆಯ ಭೂಮಿಯನ್ನು ತುಂಡು ತುಂಡಾಗಿ ಸಣ್ಣ ಕೈಗಾರಿಕೆಗಳಿಗೆ ಮಾರಾಟ ಮಾಡಿ ರಿಯಲ್ ಎಸ್ಟೇಟ್ ಮಾಡುತ್ತಿದ್ದು, ಈ ದಂಧೆಯನ್ನು ತಕ್ಷಣ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

ಕುಡತಿನಿ ಪಟ್ಟಣ, ಸುತ್ತಲಿನ ಗ್ರಾಮಗಳ ಭೂಸಂತರ ಕೈಗಾರಿಕಾ ಪ್ರದೇಶದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಜಿಂದಾಲ್ ಕಾರ್ಖಾನೆಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು

ಮುಖಂಡರಾದ ಎಂ. ತಿಪ್ಪೇಸ್ವಾಮಿ, ಜಂಗ್ಲಿ ಸಾಬ್, ಸಿದ್ದಪ್ಪ ಶ್ರೀಧರ್, ಮಲ್ಲಿಕಾರ್ಜುನ, ಪಂಪಣ್ಣ, ಗೋಪಾಲ್, ಶೇಖರ್, ಗಂಗಮ್ಮ, ದೇವಮ್ಮ, ಹುಲಿಗೆಮ್ಮ, ಹನುಮಕ್ಕ, ಈರಮ್ಮ ವಿವಿಧ ಗ್ರಾಮಗಳ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.