ADVERTISEMENT

ಜಿಂದಾಲ್‌ಗೆ ಭೂ ಪರಭಾರೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 8:41 IST
Last Updated 26 ಜೂನ್ 2019, 8:41 IST
ರಾಜ್ಯ ಸರ್ಕಾರ ಜಿಂದಾಲ್‌ಗೆ ಭೂ ಪರಭಾರೆ ಮಾಡದಂತೆ ಒತ್ತಾಯಿಸಿ ಸಿಪಿಎಂ ಕಾರ್ಯಕರ್ತರು ಬುಧವಾರ ಹೊಸಪೇಟೆಯ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ
ರಾಜ್ಯ ಸರ್ಕಾರ ಜಿಂದಾಲ್‌ಗೆ ಭೂ ಪರಭಾರೆ ಮಾಡದಂತೆ ಒತ್ತಾಯಿಸಿ ಸಿಪಿಎಂ ಕಾರ್ಯಕರ್ತರು ಬುಧವಾರ ಹೊಸಪೇಟೆಯ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಜಿಂದಾಲ್‌ಗೆ ಭೂ ಪರಭಾರೆ ಮಾಡುವ ಪ್ರಸ್ತಾವವನ್ನು ರಾಜ್ಯ ಸರ್ಕಾರ ಕೈಬಿಡಬೇಕೆಂದು ಆಗ್ರಹಿಸಿ ಸಿಪಿಎಂ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಶ್ರಮಿಕ ಭವನದಿಂದ ಪ್ರಮುಖ ಮಾರ್ಗಗಳ ಮೂಲಕ ತಾಲ್ಲೂಕು ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ನಂತರ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ಸರ್ಕಾರ ಸಾರ್ವಜನಿಕ ಆಸ್ತಿಯನ್ನು ಸಂರಕ್ಷಿಸಬೇಕೇ ಹೊರತು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು. ಕೋಟ್ಯಂತರ ರೂಪಾಯಿ ಬೆಲೆಬಾಳುವ ಖನಿಜ ಸಂಪತ್ತು ಹೊಂದಿರುವ 3,667 ಎಕರೆ ಜಮೀನು ಅತಿ ಕಡಿಮೆ ಬೆಲೆಯಲ್ಲಿ ಮಾರಾಟಕ್ಕೆ ಮುಂದಾಗಿರುವುದು ತೀವ್ರ ಖಂಡನಾರ್ಹ. ಇದು ಜನವಿರೋಧಿ ನೀತಿಯಾಗಿದೆ’ ಎಂದು ಮನವಿ ಪತ್ರದಲ್ಲಿ ಆರೋಪಿಸಿದರು.

ADVERTISEMENT

‘ನಗರದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರಿಗೆ ನಿವೇಶನ ಇಲ್ಲ. ಸರ್ಕಾರ ಒಂದು ಸಾವಿರ ಎಕರೆ ಪ್ರದೇಶ ಗುರುತಿಸಿ, ಹಂಚಿಕೆ ಮಾಡಬೇಕೆಂದು ಅನೇಕ ವರ್ಷಗಳಿಂದ ಒತ್ತಾಯಿಸುತ್ತ ಬರಲಾಗಿದೆ. ಆದರೆ, ಸರ್ಕಾರ ಆ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಜಿಂದಾಲ್‌ಗೆ ಜಮೀನು ಮಾರಾಟ ಮಾಡಲು ಆಸಕ್ತಿ ತೋರಿಸುತ್ತಿರುವುದು ನೋಡಿದರೆ ಸರ್ಕಾರ ಮತ್ತು ಕಂಪನಿ ಮಧ್ಯೆ ಏನೋ ಒಳ ಒಪ್ಪಂದ ಆಗಿರುವ ಅನುಮಾನ ಬರುತ್ತಿದೆ’ ಎಂದುಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್‌. ಭಾಸ್ಕರ್‌ ರೆಡ್ಡಿ ಆರೋಪ ಮಾಡಿದರು.

‘ನಿವೇಶನ ಇರದ ಬಡ ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು. ಅವರಿಗೆ ಸರ್ಕಾರ ನಿವೇಶನ ಕೊಡಲು ವ್ಯವಸ್ಥೆ ಮಾಡಬೇಕು. ಜಿಂದಾಲ್‌ಗೆ ಜಮೀನು ಮಾರುವ ಬದಲು, ಗುತ್ತಿಗೆಯನ್ನು ಮುಂದುವರೆಸಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಮರಡಿ ಜಂಬಯ್ಯ ನಾಯಕ, ಎ. ಕರುಣಾನಿಧಿ, ಕೆ. ನಾಗರತ್ನ, ಎಂ. ಗೋಪಾಲ್‌, ವಿ. ಸ್ವಾಮಿ, ಯಲ್ಲಾಲಿಂಗ, ಶಕುಂತಲಾ, ಕೆ.ಎಂ. ಸ್ವಪ್ನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.