ADVERTISEMENT

ಹಗರಿಬೊಮ್ಮನಹಳ್ಳಿ: ಕೇಂದ್ರ ಸರ್ಕಾರದಿಂದ ಅಂಗವಿಕಲರ ನಿರ್ಲಕ್ಷ್ಯಆರೋಪ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 16:20 IST
Last Updated 30 ಜುಲೈ 2024, 16:20 IST
ಹಗರಿಬೊಮ್ಮನಹಳ್ಳಿಯಲ್ಲಿ ಅಂಗವಿಕಲರು ಪ್ರತಿಭಟನೆ ನಡೆಸಿದರು
ಹಗರಿಬೊಮ್ಮನಹಳ್ಳಿಯಲ್ಲಿ ಅಂಗವಿಕಲರು ಪ್ರತಿಭಟನೆ ನಡೆಸಿದರು   

ಹಗರಿಬೊಮ್ಮನಹಳ್ಳಿ: ಅಂಗವಿಕಲರನ್ನು ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ತಾಲ್ಲೂಕು ಘಟಕದ ಪದಾಧಿಕಾರಿಗಳು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಒಕ್ಕೂಟದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ್ ಮಾತನಾಡಿ, ಕೇಂದ್ರ ಸರ್ಕಾರ ಅಂಗವಿಕಲರನ್ನು ನಿರಂತರವಾಗಿ ಶೋಷಣೆ ಮಾಡುತ್ತಿದೆ, ಸರ್ಕಾರದ ಆದ್ಯತೆಗಳು ದಮನಿತರ ಪರವಾಗಿಲ್ಲದಿರುವುದು ಈ ಬಜೆಟ್‌ನಲ್ಲಿ ಸಾಬೀತಾಗಿದೆ. ಅಂಗವಿಕಲ ವ್ಯಕ್ತಿಗಳ ಸಬಲೀಕರಣ ಇಲಾಖೆಗೆ ಕೂಡ ಈ ಬಜೆಟ್‌ನಿಂದ ಏನೂ ದೊರೆತಿಲ್ಲ. ಪ್ರಸ್ತುತ ಬಜೆಟ್‌ನಲ್ಲಿ ಶೇ 0.025ರಷ್ಟು ಮಾತ್ರವೇ ಹಣ ದೊರೆತಿದೆ. ದೇಶದ ಅಂಗವಿಕಲರ ಹಕ್ಕುಗಳ ಸಂಘಟನೆಗಳು ಮತ್ತು ಹೋರಾಟಗಾರರು, ಎಲ್ಲ ಸಚಿವಾಲಯಗಳಿಗೆ ಶೇ ೫ರಷ್ಟು ಅನುದಾನಕ್ಕಾಗಿ ಒತ್ತಾಯಿಸುತ್ತಿದ್ದರೂ ಪ್ರಯೋಜವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂದಿರಾಗಾಂಧಿ ರಾಷ್ಟ್ರೀಯ ಅಂಗವಿಕಲರ ಪಿಂಚಣಿ ಯೋಜನೆ ಹಣ ಹೆಚ್ಚಳ ಮಾಡಿಲ್ಲ. ಪಿಂಚಣಿಯಲ್ಲಿ 2011ರಿಂದ ಕೇಂದ್ರ ಪಾಲು ₹ 300 ಮಾತ್ರ ನೀಡಿದೆ. ದೇಶದ ಅಂಗವಿಕಲರಿಗೆ ಒಂದೇ ರೀತಿಯ ಮಾಸಾಶನ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಬೇಕು. ಆಂಧ್ರ ಪ್ರದೇಶದಲ್ಲಿ ₹ 6 ಸಾವಿರ ಮಾಸಾಶನ ನೀಡುತ್ತಿದ್ದಾರೆ. ರಾಜ್ಯದ ಅಂಗವಿಕರಲಿಗೆ ಕನಿಷ್ಟ ₹ 10 ಸಾವಿರ ಮಾಸಾಶನ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷೆ ಬಿ.ರೇಣುಕಾ ಮಾತನಾಡಿದರು. ಹುಲುಗಪ್ಪ, ಗಂಗಮ್ಮ, ಅಂಜಿನಪ್ಪ, ನಾಗರಾಜ, ಗಂಟೆ ಪರುಶಪ್ಪ, ಸೊಬಟಿ ಅಂಜಿನಪ್ಪ, ಉಮಾದೇವಿ, ಭೀಮೇಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.