ಸಿರುಗುಪ್ಪ: ‘ಬೆಳೆ ಸಮೀಕ್ಷೆಯ ದತ್ತಾಂಶ ಆಧರಿಸಿ ರೈತರಿಗೆ ಸೌಲಭ್ಯಗಳನ್ನು ಸರ್ಕಾರ ನೀಡುತ್ತದೆ. ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ನಿಖರ ಮಾಹಿತಿ ನೀಡಬೇಕು’ ಎಂದು ತಹಶೀಲ್ದಾರ್ ಎಚ್.ವಿಶ್ವನಾಥ್ ತಿಳಿಸಿದರು.
ನಗರದ ಸಿಡಿಪಿಒ ಕಚೇರಿ ಸಭಾಂಗಣದಲ್ಲಿ ಬೆಳೆ ಸಮೀಕ್ಷೆಯ ಖಾಸಗಿ ನಿವಾಸಿಗಳು ಮತ್ತು ಮೇಲ್ವಿಚಾರಕರಿಗೆ ಬುಧವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿ, ‘ತಪ್ಪು ಮಾಹಿತಿ ದಾಖಲಿಸಿದರೆ ರೈತರಿಗೆ ಸಮಸ್ಯೆಯಾಗುತ್ತದೆ’ ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಬಿ. ಪಾಟೀಲ್, ‘ರೈತರು ತಮ್ಮ ನಿಖರ ಬೆಳೆಯ ಮಾಹಿತಿಯನ್ನು ಖಾಸಗಿ ಸಮೀಕ್ಷೆಯ ನಿವಾಸಿಗಳಿಗೆ ನೀಡುವ ಮೂಲಕ ಸಹಕಾರ ನೀಡಬೇಕು. ದಾಖಲಿಸಿದ ಬೆಳೆಯ ಮಾಹಿತಿಯ ಸಂದೇಶ ರೈತರ ಮೊಬೈಲ್ ಸಂಖ್ಯೆಗೆ ರವಾನೆ ಆಗುತ್ತದೆ. ರೈತರು ಬೆಳೆ ದರ್ಶಕ ಆಪ್ಯ ಮೂಲಕ ಪರಿಶೀಲಿಸಿ ವ್ಯತ್ಯಾಸವಿದ್ದರೆ ಸರಿಪಡಿಸಿಕೊಳ್ಳಬಹುದು. ಅಲ್ಲದೆ ರೈತರು ನನ್ನ ಬೆಳೆ ನನ್ನ ಹಕ್ಕು ಎಂಬ ಶೀರ್ಷಿಕೆ ಅಡಿ ತಾವು ಜಮೀನಿನಲ್ಲಿ ಬೆಳೆದ ಬೆಳೆಯನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. 2024–25ನೇ ಸಾಲಿನ ಕೃಷಿ ಭಾಗ್ಯ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ’ ಎಂದು ತಿಳಿಸಿದರು.
ಕರೂರು ಹೋಬಳಿ ಕೃಷಿ ಅಧಿಕಾರಿ ಪರಮೇಶ್ವರ್ ರೆಡ್ಡಿ ಬೆಳೆ ಸಮೀಕ್ಷೆ ಬಗ್ಗೆ ತರಬೇತಿ ನೀಡಿದರು. ಕೃಷಿ ತಾಂತ್ರಿಕ ಅಧಿಕಾರಿ ಗರ್ಜಪ್ಪ, ತೋಟಗಾರಿಕೆ ಅಧಿಕಾರಿ ಚೈತ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.