ADVERTISEMENT

ಸಫಾಯಿ ಕರ್ಮಚಾರಿಗಳು, ಪೌರಕಾರ್ಮಿಕರಿಗೆ ಸೌಲಭ್ಯ ತಲುಪಿಸಿ: ಚಂದ್ರಕಲಾ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 6:22 IST
Last Updated 26 ಜುಲೈ 2025, 6:22 IST
ಚಂದ್ರಕಲಾ 
ಚಂದ್ರಕಲಾ    

ಬಳ್ಳಾರಿ: ‘ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳು ಮತ್ತು ಪೌರಕಾರ್ಮಿಕರಿಗೆ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ನೀಡಬೇಕು ಹಾಗೂ ಅವರಲ್ಲಿ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಚಂದ್ರಕಲಾ ಹೇಳಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಾಗೃತಿ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಏಜೆನ್ಸಿಗಳು ಪೌರಕಾರ್ಮಿಕರಿಗೆ ಅಗತ್ಯವಾದ ಸಮವಸ್ತ್ರ, ಗಮ್ ಬೂಟ್, ಕೈಗವಸು, ಮಾಸ್ಕ್ ಮತ್ತು ಇತರೆ ಸುರಕ್ಷತಾ ಪರಿಕರಗಳನ್ನು ಸಮರ್ಪಕವಾಗಿ ನೀಡಬೇಕು. ಆರೋಗ್ಯ ನಿರೀಕ್ಷಕರು ಮತ್ತು ಮೇಸ್ತ್ರಿಗಳು ಸುರಕ್ಷತಾ ಪರಿಕರಗಳನ್ನು ಧರಿಸುವಂತೆ ಪ್ರೇರೇಪಿಸಬೇಕು’ ಎಂದರು 

ADVERTISEMENT

‘ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳು ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮೆಲ್ಲರ ಜವಾಬ್ದಾರಿ’ ಎಂದು ತಿಳಿಸಿದರು. 

ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸಂಶೋಧನಾಧಿಕಾರಿ ಮಹಾದೇವಸ್ವಾಮಿ ಮಾತನಾಡಿ, ‘ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳು, ಲೋಡರ್ಸ್, ಕ್ಲೀನರ್ಸ್, ವಾಹನಚಾಲಕರಿಗೆ ನಿಗದಿತ ವೇಳೆಯೊಳಗೆ ವೇತನ ಪಾವತಿಸಿ, ವೇತನ ಸ್ಲಿಪ್ ನೀಡಬೇಕು. ಪಿಎಫ್ ಮತ್ತು ಇಎಸ್‌ಐ ಮೊತ್ತ ಸರಿಯಾಗಿ ಕಟಾವಣೆಯಾಗುತ್ತಿದೆಯೇ ಎಂದು ಖಾತ್ರಿಪಡಿಸಿಕೊಳ್ಳಬೇಕು. ಮಾಸ್ಟರ್ ಆರೋಗ್ಯ ತಪಾಸಣೆ ಕಾಲ ಕಾಲಕ್ಕೆ ಮಾಡಿಸಬೇಕು. ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್, ವೇತನ ಪ್ಯಾಕೇಜ್ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ತಿಳಿಸಿದರು.

ಪ್ರತಿಭಾ ಪುರಸ್ಕಾರ ಮಾಡಿ: ನವೆಂಬರ್ 07 ರಂದು ಅಂಬೇಡ್ಕರ್ ಅವರು ಶಾಲೆಗೆ ಸೇರಿದ ದಿನ. ಅದರ ಅಂಗವಾಗಿ ಎಸೆಸೆಲ್ಸಿ, ಪಿಯುಸಿ, ಉನ್ನತ ಶಿಕ್ಷಣ ಪಡೆದ ಪೌರಕಾರ್ಮಿಕರ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಬೇಕು ಎಂದು ಹೇಳಿದರು.

ಪೌರಕಾರ್ಮಿಕರು ಸಫಾಯಿ ಕರ್ಮಚಾರಿಗಳು ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮೆಲ್ಲರ ಜವಾಬ್ದಾರಿ
ಚಂದ್ರಕಲಾ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ
‘ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ’
ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಪೌರಕಾರ್ಮಿಕರ ಸಭೆ ಕರೆದು ಅವರ ಸಮಸ್ಯೆಗಳನ್ನು ಆಲಿಸಬೇಕು. ಅವರ ಪುನರ್ವಸತಿಗಾಗಿ ಸರ್ಕಾರ ರೂಪಿಸಿರುವ ನೀತಿ-ನಿಯಮಗಳ ಅರಿವು ಮೂಡಿಸಬೇಕು. ಅಧಿಕಾರಿಗಳು ಕಾಯ್ದೆಯನ್ವಯ ಪೌರಕಾರ್ಮಿಕರಿಗೆ ಅಗತ್ಯ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.