ADVERTISEMENT

ಅಲೆಮಾರಿಗಳಿಗೆ ಸವಲತ್ತು ನೀಡಿ: ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2018, 12:59 IST
Last Updated 5 ಸೆಪ್ಟೆಂಬರ್ 2018, 12:59 IST
ಪರಿಶಿಷ್ಟರು, ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ, ಅತಿಸೂಕ್ಷ್ಮ ಸಮುದಾಯಗಳಿಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಅಲೆಮಾರಿ ಗುಡಾರ -ಗುಡಿಸಲು ನಿವಾಸಿಗಳ ಕಲ್ಯಾಣ ಸಂಘದ ಪದಾಧಿಕಾರಿಗಳು ಬಳ್ಳಾರಿಯಲ್ಲಿ ಬುಧವಾರ ಪ್ರಭಾರಿ ಉಪವಿಭಾಗಾಧಿಕಾರಿ ವಿಶ್ವಜಿತ್‌ ಮೆಹ್ತಾ ಅವರಿಗೆ ಮನವಿ ಸಲ್ಲಿಸಿದರು.
ಪರಿಶಿಷ್ಟರು, ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ, ಅತಿಸೂಕ್ಷ್ಮ ಸಮುದಾಯಗಳಿಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಅಲೆಮಾರಿ ಗುಡಾರ -ಗುಡಿಸಲು ನಿವಾಸಿಗಳ ಕಲ್ಯಾಣ ಸಂಘದ ಪದಾಧಿಕಾರಿಗಳು ಬಳ್ಳಾರಿಯಲ್ಲಿ ಬುಧವಾರ ಪ್ರಭಾರಿ ಉಪವಿಭಾಗಾಧಿಕಾರಿ ವಿಶ್ವಜಿತ್‌ ಮೆಹ್ತಾ ಅವರಿಗೆ ಮನವಿ ಸಲ್ಲಿಸಿದರು.   

ಬಳ್ಳಾರಿ: ಪರಿಶಿಷ್ಟರು, ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ, ಅತಿಸೂಕ್ಷ್ಮ ಸಮುದಾಯಗಳಿಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅಲೆಮಾರಿ ಗುಡಾರ- ಗುಡಿಸಲು ನಿವಾಸಿಗಳ ಕಲ್ಯಾಣ ಸಂಘದ ಪದಾಧಿಕಾರಿಗಳು ನಗರದಲ್ಲಿ ಬುಧವಾರ ಪ್ರಭಾರಿ ಉಪವಿಭಾಗಾಧಿಕಾರಿ ವಿಶ್ವಜಿತ್‌ ಮೆಹ್ತಾ ಅವರಿಗೆ ಮನವಿ ಸಲ್ಲಿಸಿದರು.

‘ಸಮುದಾಯಗಳ ಜಿಲ್ಲಾ ಅನುಷ್ಠಾನ ಸಮಿತಿಗೆ ಸಮುದಾಯಗಳ ಅನುಮತಿ ಇಲ್ಲದೇ ಕೆಲ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಮೂಲ ಅಲೆಮಾರಿಗಳಿಗೆ ಸೌಕರ್ಯಗಳು ಸಿಗದೇ ಅನ್ಯಾಯವಾಗಿದೆ. ಈ ಕುರಿತು ಅನೇಕ ಬಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಣ್ಣ ಮಾರೆಪ್ಪ ದೂರಿದರು.

‘2015–16ನೇ ಸಾಲಿನಿಂದ ಸಮಿತಿಯಲ್ಲಿರುವ ಸದಸ್ಯರು ಕುಂದುಕೊರತೆಗಳ ಪರಿಶೀಲನೆ ಮತ್ತು ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಎಲ್ಲಾ ತಾಲ್ಲೂಕುಗಳಲ್ಲೂ ಅಲೆಮಾರಿಗಳ ಪರಿಸ್ಥಿತಿ ಹೀನಾಯವಾಗಿದೆ. ಜಿಲ್ಲಾಧಿಕಾರಿಗಳು ಇನ್ನಾದರೂ ಅರ್ಹರನ್ನು ಗುರುತಿಸಿ ಸಮಿತಿಗೆ ನೇಮಕ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಹಿಂದಿನ ಡಿಸೆಂಬರ್ 20ರಂದು ನಡೆದಿದ್ದ ಹಿಂದುಳಿದ ಅಲೆಮಾರಿ ಸಮುದಾಯಗಳ ಸಭೆ ನಂತರ ನಡೆದಿಲ್ಲ. ನೇರ ಸಾಲ, ವಸತಿ ಸೌಕರ್ಯ, ಜಮೀನು, ವಿವಿಧ ಉದ್ಯೋಗ, ಕೌಶಲ್ಯ, ಕರಕುಶಲ ತರಬೇತಿ ಸೇರಿದಂತೆ ವಿವಿಧ ಸೌಕರ್ಯಗಳಿಗೆ ಸಂಬಂಧಿಸಿದ 3 ಸಾವಿರ ಅರ್ಜಿಗಳು ಧೂಳು ಹಿಡಿಯುತ್ತಿವೆ. ಅಂಬೇಡ್ಕರ್ ನಿಗಮ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡ ಹಾಗೂ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಅರ್ಜಿಗಳನ್ನು ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ ಶಿಫಾರಸ್ಸು ಮಾಡಬೇಕು’ ಎಂದು ಆಗ್ರಹಿಸಿದರು.

‘2015–-16ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾಗಿರುವಂತೆ ಸಮುದಾಯಗಳ ಅಭಿವೃದ್ದಿಗೆ ಮೀಸಲಿಟ್ಟಿರುವ ₨ 200 ಕೋಟಿ ಅನುದಾನವನ್ನು ಗುಡಿಸಲು, ಟೆಂಟುಗಳಲ್ಲಿರುವವರ ಅಭಿವೃದ್ಧಿಗೆ ವ್ಯಯಿಸಬೇಕು. ಪುನರ್‌ ವಸತಿ, ಅಲೆಮಾರಿಗಳ ಆಶ್ರಯ ಕಾಲೊನಿಗಳ ಅಭಿವೃದ್ಧಿ, ಬೀದಿ ದೀಪ ಅಳವಡಿಕೆ ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯ ಒದಗಿಸದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು’ ಎಂದರು.

ಸಂಘದ ಪದಾಧಿಕಾರಿಗಳಾದ ಹೆಚ್.ಪಿ. ಶಿಕಾರಿ ರಾಮು, ಶೈಲಾ ಸೀತಾರಾಮ ಪಾಚಂಗೆ, ಸುಬ್ಬು ಸಿಳ್ಳೆಕ್ಯಾತ, ಕಿನ್ನರಿ ಶೇಖಪ್ಪ, ಡೊಂಗ್ರಿಗ್ರಾಸಿ ಮಾಧವರಾವ್, ಚೆನ್ನದಾಸರ ಗಿರೀಶ, ಹಂಡಿಜೋಗಿ ಹನುಮಂತಪ್ಪ, ಸಿಂದೋಳ್ ರಾಹುಲ್ ನಾಗಪ್ಪ, ಹಕ್ಕಿಪಿಕ್ಕಿ ಎಚ್.ಪಿ. ಶ್ರೀಕಾಂತ, ಬುಡ್ಗಜಂಗಮ ಜಂಬಣ್ಣ, ಸಿಳ್ಳೆಕ್ಯಾತ ಅಗ್ನಿ, ವೈ ಚಿನ್ನಪ್ಪ, ಜಿ.ಬಾಬು, ಮಾಂತೇಶ್, ಹನುಮಂತಪ್ಪ, ಎಬಿ ಜಂಬಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.