ADVERTISEMENT

ಕಾರ್ಮಿಕರ ಮಕ್ಕಳಿಗೆ ಪಿಎಸ್‌ಐ ಪಾಠ

ಕುರುಗೋಡು ತಾಲ್ಲೂಕಿನ ಶಾಂತಪ್ಪ ಬೆಂಗಳೂರಿನಲ್ಲಿ ಪಿಎಸ್‌ಐ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 14:10 IST
Last Updated 12 ಸೆಪ್ಟೆಂಬರ್ 2020, 14:10 IST
ಪಿಎಸ್ಐ ಶಾಂತಪ್ಪ ಜಡೆಮ್ಮನವರ್ ವಲಸೆ ಕಾರ್ಮಿಕರ ಮಕ್ಕಳಿಗೆ ಬೋಧಿಸುತ್ತಿರುವ ಸ್ಥಳಕ್ಕೆ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಈಚೆಗೆ ಭೇಟಿ ನೀಡಿ ಮಾಹಿತಿ ಪಡೆದರು
ಪಿಎಸ್ಐ ಶಾಂತಪ್ಪ ಜಡೆಮ್ಮನವರ್ ವಲಸೆ ಕಾರ್ಮಿಕರ ಮಕ್ಕಳಿಗೆ ಬೋಧಿಸುತ್ತಿರುವ ಸ್ಥಳಕ್ಕೆ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಈಚೆಗೆ ಭೇಟಿ ನೀಡಿ ಮಾಹಿತಿ ಪಡೆದರು   

ಕುರುಗೋಡು: ಬೆಂಗಳೂರಿನವಲಸೆ ಕಾರ್ಮಿಕರ ಮಕ್ಕಳಿಗೆ ನಿತ್ಯವೂ ಒಂದು ಗಂಟೆ ಉಚಿತವಾಗಿ ಪಾಠಮಾಡುವ ಪಿಎಸ್‍ಐಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ ಪಿಎಸ್‌ಐ ಬೆನ್ನುತಟ್ಟಿದ್ದಾರೆ.

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಪೊಲೀಸ್ ಠಾಣೆಯ ಪಿಎಸ್‍ಐ ಶಾಂತಪ್ಪ ಜಡೆಮ್ಮನವರ್ ಅವರು ತಾಲ್ಲೂಕಿನ ಹೊಸಗೆಣಿಕೆಹಾಳು ಗ್ರಾಮದವರು. ಪೊಲೀಸ್‌ ಕರ್ತವ್ಯದ ಮಧ್ಯೆ ಬಿಡುವು ಮಾಡಿಕೊಂಡು ಕೊಳೆಗೇರಿ ಪ್ರದೇಶದಲ್ಲಿನ ವಲಸೆ ಕಾರ್ಮಿಕರ ಮಕ್ಕಳಿಗೆ ಗಣಿತ ಮತ್ತು ಸಾಮಾನ್ಯ ಜ್ಞಾನ ವಿಷಯ ಬೋಧಿಸುತ್ತಿದ್ದಾರೆ.

ಬಡತನದಲ್ಲಿ ಬೆಳೆದು ಪಿಎಸ್‍ಐ ಉದ್ಯೋಗದಲ್ಲಿರುವ ಶಾಂತಪ್ಪ ಜಡೆಮ್ಮನಗರ್ ಅವರಿಗೆ ವಲಸೆ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ಇಷ್ಟ ಇರಲಿಲ್ಲ. ಬಿಡುವಿನ ವೇಳೆಯಲ್ಲಿ ಠಾಣೆ ವ್ಯಾಪ್ತಿಯ ನಾಗರಬಾವಿ, ವಿನಾಯಕ ನಗರ, ವರ್ತುಲ ರಸ್ತೆ ಸುತ್ತಮುತ್ತ ವಾಸವಿರುವ ಅವರ ಗುಡಿಸಲುಗಳ ಬಳಿ ತೆರಳಿ ಪ್ರತಿನಿತ್ಯ ಒಂದು ಗಂಟೆ ಪಾಠಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ADVERTISEMENT

ಈ ಸಂಗತಿಯನ್ನು ಫೇಸ್‍ಬುಕ್‍ನಲ್ಲಿ ನೋಡಿದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಈಚೆಗೆ ಸ್ಥಳಕ್ಕೆ ಭೇಟಿ ನೀಡಿ ಪಿಎಸ್‍ಐ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಥಳೀಯ ಅನೇಕ ಸಂಘ, ಸಂಸ್ಥೆಗಳು ಶಾಂತಪ್ಪ ಅವರ ಕಾರ್ಯಕ್ಕೆ ಕೈಜೋಡಿಸಿ ಪುಸ್ತಕ, ಬ್ಯಾಗ್‍ಗಳನ್ನು ಉಚಿತವಾಗಿ ನೀಡಿವೆ.

ಈ ಕುರಿತು 'ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಶಾಂತಪ್ಪ ಜಡೆಮ್ಮನವರ್, ‘ಕಾರ್ಮಿಕ ಕುಟುಂಬದಲ್ಲಿ ಜನಿಸಿದ ನನಗೆ ಅವರ ಸಂಕಷ್ಟಗಳ ಅರಿವಿದೆ. ಹೀಗಾಗಿಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.