ADVERTISEMENT

ವಿಜಯನಗರ: ‘ಪ್ರವಾಸಿ ತಾಣಗಳಲ್ಲಿ ಜನರ ನಿರ್ಬಂಧಕ್ಕೆ ಚಿಂತನೆ’

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 16:39 IST
Last Updated 3 ಆಗಸ್ಟ್ 2021, 16:39 IST
ಹೊಸಪೇಟೆಯಲ್ಲಿ ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ (ಬಲದಿಂದ ಎರಡನೆಯವರು) ಮಾತನಾಡಿದರು. ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ, ಡಿವೈಎಸ್ಪಿ ವಿಶ್ವನಾಥ ರಾವ್‌ ಕುಲಕರ್ಣಿ, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಇದ್ದಾರೆ
ಹೊಸಪೇಟೆಯಲ್ಲಿ ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ (ಬಲದಿಂದ ಎರಡನೆಯವರು) ಮಾತನಾಡಿದರು. ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ, ಡಿವೈಎಸ್ಪಿ ವಿಶ್ವನಾಥ ರಾವ್‌ ಕುಲಕರ್ಣಿ, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಇದ್ದಾರೆ   

ಹೊಸಪೇಟೆ (ವಿಜಯನಗರ): ‘ನೆರೆಯ ರಾಜ್ಯಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ವ್ಯಾಪಕವಾಗಿ ಹೆಚ್ಚುತ್ತಿರುವುದರಿಂದ ನಗರದ ತುಂಗಭದ್ರಾ ಜಲಾಶಯ ಹಾಗೂ ವಿಶ್ವಪ್ರಸಿದ್ಧ ಹಂಪಿಯಲ್ಲಿ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲು ಚಿಂತನೆ ನಡೆದಿದೆ’ ಎಂದು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ತಿಳಿಸಿದರು.

ಮಂಗಳವಾರ ಸಂಜೆ ನಗರದ ಡಿವೈಎಸ್ಪಿ ಕಚೇರಿಯಲ್ಲಿ ಕೋವಿಡ್‌ ಬಗ್ಗೆ ಏರ್ಪಡಿಸಿದ್ದ ವರ್ತಕರು, ಹೋಟೆಲ್‌ ಮಾಲೀಕರ ಹಾಗೂ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಹಂಪಿ, ತುಂಗಭದ್ರಾ ಜಲಾಶಯ, ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ನೆರೆಯ ಮಹಾರಾಷ್ಟ್ರ, ಕೇರಳದಿಂದಲೂ ಪ್ರವಾಸಿಗರು ಬರುತ್ತಿದ್ದಾರೆ. ಇದರಿಂದ ಕೊರೊನಾ ಸೋಂಕು ವ್ಯಾಪಿಸಬಹುದು. ಅದನ್ನು ತಪ್ಪಿಸಲು ಜನರ ಪ್ರವೇಶ ನಿರ್ಬಂಧಿಸಿವುದರ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಜಿಲ್ಲಾಧಿಕಾರಿ ಜತೆಗೆ ಚರ್ಚಿಸಿ ಶೀಘ್ರದಲ್ಲೇ ತೀರ್ಮಾನಕ್ಕೆ ಬರಲಾಗುವುದು’ ಎಂದು ಹೇಳಿದರು.

ADVERTISEMENT

‘ಚಿನ್ನಾಭರಣ, ಬಟ್ಟೆ, ಕಿರಾಣಿ ಮಳಿಗೆಗಳಲ್ಲಿ ಹೆಚ್ಚಿನ ಜನ ಸೇರದಂತೆ ನೋಡಿಕೊಳ್ಳಬೇಕು. ಮಾಸ್ಕ್‌ ಧರಿಸಿದವರೊಂದಿಗೆ ಮಾತ್ರ ವ್ಯವಹರಿಸಬೇಕು. ಸಾರ್ವಜನಿಕರು ಕೋವಿಡ್‌ ಮರೆತು ಎಲ್ಲೆಡೆ ಓಡಾಡುತ್ತಿದ್ದಾರೆ. ಮಾಸ್ಕ್‌ ಕೂಡ ಧರಿಸುತ್ತಿಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ದಂಡ ವಿಧಿಸಲಾಗುವುದು. ಬುಧವಾರದಿಂದಲೇ (ಆ.4) ಪ್ರಮುಖ ವೃತ್ತಗಳಲ್ಲಿ ಪೊಲೀಸರು ಮಾಸ್ಕ್‌ ಧರಿಸದವರ ವಿರುದ್ಧ ಕ್ರಮ ಕೈಗೊಳ್ಳುವುದು. ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಿ ಓಡಾಡಬೇಕು’ ಎಂದು ತಿಳಿಸಿದರು.

ಡಿವೈಎಸ್ಪಿ ವಿಶ್ವನಾಥ ರಾವ್‌ ಕುಲಕರ್ಣಿ, ತಹಶೀಲ್ದಾರ್ ಎಚ್.ವಿಶ್ವನಾಥ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಭಾಸ್ಕರ್, ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ಸಂಚಾರ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಮಹಾಂತೇಶ್ ಸಜ್ಜನ್, ಗ್ರಾಮೀಣ ಠಾಣೆ ಸಿಪಿಐ ಶ್ರೀನಿವಾಸ ಮೇಟಿ, ಪಿ.ಐ ಜಯಪ್ರಕಾಶ್, ವಾಣಿಜ್ಯ ಹಾಗೂ ಕೈಗಾರಿಕೆ ಸಂಸ್ಥೆ ತಾಲ್ಲೂಕು ಅಧ್ಯಕ್ಷ ಅಶ್ವಿನ್ ಕೋತಂಬ್ರಿ, ಚಿನ್ನಾಭರಣ ವ್ಯಾಪಾರಿಗಳ ಸಂಘದ ಅಧ್ಯಕ್ಷ ಕಾಕುಬಾಳ್ ರಾಜೇಂದ್ರ, ಆಟೊ ಫೆಡರೇಶನ್‌ ಉಪಾಧ್ಯಕ್ಷ ಕೆ.ಎಂ.ಸಂತೋಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.