ADVERTISEMENT

ರಾಜಕೀಯ ಲಾಭಕ್ಕಾಗಿ ಪುಲ್ವಾಮ ದಾಳಿ: ಆರ್‌.ಎಸ್‌. ಬಸವರಾಜ ಆರೋಪ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 8:21 IST
Last Updated 17 ಏಪ್ರಿಲ್ 2019, 8:21 IST
ಆರ್‌.ಎಸ್‌. ಬಸವರಾಜ
ಆರ್‌.ಎಸ್‌. ಬಸವರಾಜ   

ಹೊಸಪೇಟೆ: ‘ಸಾರ್ವತ್ರಿಕ ಚುನಾವಣೆಯಲ್ಲಿ ರಾಜಕೀಯ ಲಾಭ ಗಳಿಸುವ ಉದ್ದೇಶದಿಂದಲೇ ಬಿಜೆಪಿಯು ಪುಲ್ವಾಮ ದಾಳಿಯ ಸಂಚು ರೂಪಿಸಿತ್ತು. ಈ ಕುರಿತು ಸಮಗ್ರ ತನಿಖೆಯಾದರೆ ಸತ್ಯ ಹೊರಬರುತ್ತದೆ’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್‌.ಎಸ್‌. ಬಸವರಾಜ ಆಗ್ರಹಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಒಂದೇ ಒಂದು ಜನಪರ ಕೆಲಸ ಮಾಡಿಲ್ಲ. ಚುನಾವಣೆಯಲ್ಲಿ ಅವರು ಸೋಲುವುದು ಖಚಿತವಾಗಿತ್ತು. ಅದನ್ನು ಅರಿತು ಪುಲ್ವಾಮ ದಾಳಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಿರ್ದಿಷ್ಟ ದಾಳಿಯ ಕಥೆ ಕಟ್ಟಿ, ಜನರನ್ನು ಭಾವನಾತ್ಮಕವಾಗಿ ಕಟ್ಟಿ ಹಾಕಿ ಮತ ಸೆಳೆಯಲು ಯೋಜನೆ ರೂಪಿಸಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.

‘ಉದ್ಯೋಗ ಸೃಷ್ಟಿಸುವುದರ ಬದಲು ನಿರುದ್ಯೋಗ ಸೃಷ್ಟಿಯಾಗಿದೆ. ಸರಕು ಮತ್ತು ಸೇವಾ ತೆರಿಗೆಯಿಂದ (ಜಿ.ಎಸ್.ಟಿ.) ಸಣ್ಣ ಉದ್ದಿಮೆಗಳು ಬಂದ್‌ ಆಗಿವೆ. ಅಲ್ಲಿನ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಸ್ವಾಮಿನಾಥನ್‌ ಆಯೋಗದ ವರದಿ ಜಾರಿಗೆ ತಂದಿಲ್ಲ. ರೈತರು ಖರೀದಿಸುವ ಕೃಷಿ ಉತ್ಪನ್ನಗಳಿಗೆ ಸಬ್ಸಿಡಿ ಕೊಡುವ ಬದಲು, ರಾಸಾಯನಿಕ ಕಂಪನಿಗಳಿಗೆ ಸಬ್ಸಿಡಿ ಕೊಟ್ಟಿದ್ದಾರೆ. ಐದು ವರ್ಷ ಕಾರ್ಪೊರೇಟ್‌ ಜಗತ್ತಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಿರುವುದು ಮೋದಿಯವರ ಹೆಗ್ಗಳಿಕೆ. ಮತ್ತೆ ಮೋದಿ ಅಧಿಕಾರಕ್ಕೆ ಬಂದರೆ ಬಂಡವಾಳಶಾಹಿಗಳಿಗೆ ಮಣೆ ಹಾಕುವುದು ಬಿಟ್ಟರೆ ಬೇರೇನೂ ಕೆಲಸ ಮಾಡುವುದಿಲ್ಲ’ ಎಂದು ಟೀಕಿಸಿದರು.

ADVERTISEMENT

ಮುಖಂಡ ಮರಡಿ ಜಂಬಯ್ಯ ನಾಯಕ ಮಾತನಾಡಿ, ‘ಯೋಜನಾ ಆಯೋಗವನ್ನು ರದ್ದುಪಡಿಸಿ ನೀತಿ ಆಯೋಗ ರಚಿಸಿರುವ ಬಿಜೆಪಿ ಸರ್ಕಾರ, ಅದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಕಾರ್ಯಕರ್ತರನ್ನು ನೇಮಿಸಿದೆ. ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಹಣ ಮೀಸಲಿಡಲಾಗುತ್ತದೆ. ಆದರೆ, ಬಿಜೆಪಿ ಅದನ್ನು ವರ್ಷದಿಂದ ವರ್ಷಕ್ಕೆ ಕಡಿತಗೊಳಿಸುತ್ತಿದೆ’ ಎಂದು ಆರೋಪಿಸಿದರು.

‘ಈ ಹಿಂದೆ ಪ್ರತಿ ವರ್ಷ ಎಸ್‌ಸಿ, ಎಸ್‌ಟಿಗಳಕಲ್ಯಾಣಕ್ಕಾಗಿ ₹1.70 ಲಕ್ಷ ಕೋಟಿ ಹಣ ಮೀಸಲಿಡಲಾಗುತ್ತಿತ್ತು. ಬಿಜೆಪಿ ಬಂದ ನಂತರ ಅದು 50 ಸಾವಿರ ಕೋಟಿಗೆ ತಗ್ಗಿದೆ. ಇದು ಎಸ್‌ಸಿ, ಎಸ್‌ಟಿಗಳಿಗೆ ಮಾಡುತ್ತಿರುವ ದೊಡ್ಡ ವಂಚನೆ. 1 ಲಕ್ಷ 80 ಸಾವಿರ ಬ್ಯಾಕ್‌ಲಾಗ್‌ ಹುದ್ದೆಗಳು ಕೇಂದ್ರದಲ್ಲಿ ಖಾಲಿ ಉಳಿದಿವೆ. ಅವುಗಳನ್ನು ತುಂಬುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಹೀಗಾಗಿ ಸಮಾಜದವರು ಬಿಜೆಪಿ ವಿರುದ್ಧ ಮತ ಚಲಾಯಿಸಬೇಕು’ ಎಂದು ಮನವಿ ಮಾಡಿದರು.

ಮುಖಂಡ ಕೆ. ಕರುಣಾನಿಧಿ, ‘ಸಂವಿಧಾನಕ್ಕೆ ಬಹಳ ದೊಡ್ಡ ಗಂಡಾಂತರ ಕಾದಿದೆ. ಒಂದುವೇಳೆ ಪುನಃ ಬಿಜೆಪಿ ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಸಂವಿಧಾನ ಬದಲಿಸುತ್ತಾರೆ. ಅದಕ್ಕೆ ಮತದಾರರು ಅವಕಾಶ ಮಾಡಿಕೊಡಬಾರದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.