ADVERTISEMENT

PV Web Exclusive| ಜಿಲ್ಲಾ ಕೇಂದ್ರಕ್ಕೆ ಭೌಗೋಳಿಕವಾಗಿ ಹೊಸಪೇಟೆ ಎಷ್ಟು ಸೂಕ್ತ?

ಶಶಿಕಾಂತ್ ಎಸ್. ಶೆಂಬೆಳ್ಳಿ
Published 1 ಡಿಸೆಂಬರ್ 2020, 5:57 IST
Last Updated 1 ಡಿಸೆಂಬರ್ 2020, 5:57 IST
ತುಂಗಭದ್ರಾ ಜಲಾಶಯ
ತುಂಗಭದ್ರಾ ಜಲಾಶಯ   

ಹೊಸಪೇಟೆ: ಹೊಸಪೇಟೆ ಜಿಲ್ಲಾ ಕೇಂದ್ರ ಮಾಡಿ ವಿಜಯನಗರ ಜಿಲ್ಲೆಯೇನೋ ಸರ್ಕಾರ ಘೋಷಿಸಿದೆ. ಆದರೆ, ವಾಸ್ತವದಲ್ಲಿ ಹೊಸಪೇಟೆ ನಗರ ಭೌಗೋಳಿಕವಾಗಿ ಜಿಲ್ಲಾ ಕೇಂದ್ರಕ್ಕೆ ಸೂಕ್ತವಾಗಿದೆಯೇ?

ಇಂತಹದ್ದೊಂದು ಪ್ರಶ್ನೆ ಮೂಡಲು ಕೆಲ ಕಾರಣಗಳಿವೆ. ನಾಲ್ಕೂ ದಿಕ್ಕಿನಲ್ಲಿ ನಗರ ಬೆಳೆಯಲು ಭೌಗೋಳಿಕವಾಗಿ ಆ ಸ್ಥಳ ಪ್ರಶಸ್ತವಾಗಿರಬೇಕು. ಆದರೆ, ಈ ವಿಚಾರದಲ್ಲಿ ಹೊಸಪೇಟೆ ನಗರಕ್ಕೆ ಅಂತಹ ಅವಕಾಶಗಳು ಕಡಿಮೆ. ಹೆಚ್ಚಿನ ಅವಕಾಶಗಳೇ ಇಲ್ಲ ಅಂತಲೂ ಹೇಳಬಹುದು.

ನಗರದ ಒಂದಿಡಿ ಭಾಗ ಸಂಪೂರ್ಣವಾಗಿ ತುಂಗಭದ್ರಾ ಜಲಾಶಯ ಆಕ್ರಮಿಸಿಕೊಂಡಿದೆ. ಇನ್ನೊಂದು ಭಾಗದಲ್ಲಿ ತುಂಗಭದ್ರಾ ನದಿ ಹರಿಯುತ್ತದೆ. ಅದು ಜಿಲ್ಲೆಯ ಗಡಿರೇಖೆಯೂ ಹೌದು. ಅದಕ್ಕೆ ಹೊಂದಿಕೊಂಡಂತೆಯೇ ವಿಶ್ವ ಪಾರಂಪರಿಕ ತಾಣ ಹಂಪಿ ಇದೆ. ಈ ಎರಡೂ ಭಾಗಗಳಲ್ಲಿ ಯಾವುದೇ ರೀತಿಯ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ. ಮತ್ತೊಂದು ಭಾಗ ಬೆಟ್ಟ, ಗುಡ್ಡಗಳಿಂದ ಕೂಡಿದೆ. ಹಚ್ಚ ಹಸಿರಿನಿಂದ ಕೂಡಿರುವ ಬೆಟ್ಟ ಶ್ರೇಣಿಗಳು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುತ್ತವೆ. ಅಲ್ಲೂ ನಗರ ವಿಸ್ತರಣೆಗೆ ಅವಕಾಶಗಳಿಲ್ಲ. ನಗರ ಬೆಳೆಯಬೇಕಿದ್ದರೆ ಪೂರ್ಣ ಬಯಲಿನಂತಿರುವ ಬಳ್ಳಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಷ್ಟೇ ಎನ್ನುವುದು ವಾಸ್ತವ.

ADVERTISEMENT

ಬಳ್ಳಾರಿ ಜಿಲ್ಲಾ ಕೇಂದ್ರವೂ ಪಶ್ಚಿಮದ ತಾಲ್ಲೂಕುಗಳಿಗೆ ಬಲುದೂರ. ಆ ತಾಲ್ಲೂಕುಗಳ ಜನರ ಅನುಕೂಲಕ್ಕಾಗಿ ಜಿಲ್ಲೆ ವಿಭಜನೆ ಮಾಡಲಾಗಿದೆ ಎನ್ನುವ ಸರ್ಕಾರದ ವಾದ ಒಪ್ಪುವ ಮಾತು. ವಿಭಜನೆಯ ನಂತರ ಬಳ್ಳಾರಿ ಜಿಲ್ಲಾ ವ್ಯಾಪ್ತಿಗೆ ಸೇರಿರುವ ಕಂಪ್ಲಿ, ಕುರುಗೋಡು, ಸಿರುಗುಪ್ಪ ಹಾಗೂ ಸಂಡೂರು ಸರಾಸರಿ 50 ಕಿ.ಮೀ ಅಂತರದೊಳಗೆ ಬರುತ್ತವೆ. ಆದರೆ, ವಿಜಯನಗರದ ವ್ಯಾಪ್ತಿಗೆ ಸೇರಿರುವ ಆರು ತಾಲ್ಲೂಕುಗಳ ಪೈಕಿ ಕೆಲವು ತಾಲ್ಲುಕುಗಳು ಹೊಸಪೇಟೆ ಜಿಲ್ಲಾ ಕೇಂದ್ರದಿಂದ ದೂರದಲ್ಲಿವೆ. ಅದರಲ್ಲೂ ಹರಪನಹಳ್ಳಿ, ಹೂವಿನಹಡಗಲಿ ಸರಾಸರಿ 80 ಕಿ.ಮೀ ಅಂತರದಲ್ಲಿವೆ. ಕೊಟ್ಟೂರು 64 ಕಿ.ಮೀ ದೂರದಲ್ಲಿದೆ. ಕೂಡ್ಲಿಗಿ ಹಾಗೂ ಹಗರಿಬೊಮ್ಮನಹಳ್ಳಿ ಮಾತ್ರ ಸಮೀಪ, ಸಮಾನ ಅಂತರದಲ್ಲಿವೆ. ಇವೆರಡೂ ತಾಲ್ಲೂಕುಗಳಿಗೆ ಹೊಸಪೇಟೆ ನಗರ 40 ಕಿ.ಮೀ ದೂರದಲ್ಲಿದೆ.

ಒಂದುವೇಳೆ ವಿಜಯನಗರದ ಜಿಲ್ಲಾ ಕೇಂದ್ರ ಹಗರಿಬೊಮ್ಮನಹಳ್ಳಿ ಆಗಿದ್ದರೆ ಹೆಚ್ಚು ಕಡಿಮೆ ಎಲ್ಲ ತಾಲ್ಲೂಕುಗಳು ಸಮಾನ ಅಂತರದಲ್ಲಿ ಇರುತ್ತಿದ್ದವು. ಅಷ್ಟೇ ಅಲ್ಲ, ಭೌಗೋಳಿಕವಾಗಿಯೂ ಎಚ್‌.ಬಿ. ಹಳ್ಳಿ ಹೇಳಿಮಾಡಿಸಿದ ಸ್ಥಳವಾಗಿದ್ದು, ವಿಶಾಲವಾಗಿ ಬೆಳೆಯಲು ಹೆಚ್ಚು ಅವಕಾಶಗಳಿದ್ದವು ಎನ್ನುವುದು ಹಲವು ಮುಖಂಡರ ಅಭಿಪ್ರಾಯವಾಗಿದೆ.

‘ಅಖಂಡ ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯನಗರ ಜಿಲ್ಲೆ ಮಾಡಿರುವುದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಆಡಳಿತ ವಿಕೇಂದ್ರೀಕರಣವಾದರೆ ಜನರಿಗೆ ಹೆಚ್ಚು ಪ್ರಯೋಜನ. ವಿಜಯನಗರ ಜಿಲ್ಲೆ ರಚನೆಯ ಸಂದರ್ಭದಲ್ಲಿ ರಾಜಕೀಯ ಹಿತಾಸಕ್ತಿಯ ಮೇಲುಗೈ ಆಗಿದೆ. ಏನೇ ಇರಲಿ ಜನರ ಅನುಕೂಲದ ದೃಷ್ಟಿಯಿಂದ ಉತ್ತಮ ನಿರ್ಧಾರ. ಭೌಗೋಳಿಕ ಮತ್ತು ವೈಜ್ಞಾನಿಕವಾದ ಮಾನದಂಡಗಳನ್ನು ಒಂದುವೇಳೆ ಅನುಸರಿಸಿದ್ದರೆ ಜಿಲ್ಲಾ ಕೇಂದ್ರ ಹಗರಿಬೊಮ್ಮನಹಳ್ಳಿ ಆಗುತ್ತಿತ್ತು’ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ.

‘ಜಿಲ್ಲೆ ರಚನೆಗೂ ಮುನ್ನ ಎಲ್ಲ ವಲಯದವರ ಅಭಿಪ್ರಾಯ ಆಲಿಸಿದರೆ ಹಗರಿಬೊಮ್ಮನಹಳ್ಳಿ ಜಿಲ್ಲಾ ಕೇಂದ್ರ ರಚಿಸುವ ಕುರಿತು ತಿಳಿಸಬಹುದಿತ್ತು. ಆದರೆ, ಆ ಕೆಲಸವಾಗಿಲ್ಲ. ಹಗರಿಬೊಮ್ಮನಹಳ್ಳಿ ಜಿಲ್ಲಾ ಕೇಂದ್ರ ಮಾಡಿದರೆ ಪಶ್ಚಿಮದ ಎಲ್ಲ ತಾಲ್ಲೂಕುಗಳಿಗೆ ಬಹಳ ಅನುಕೂಲವಾಗುತ್ತಿತ್ತು. ಅಂತಿಮವಾಗಿ ಯಾರೋ ಒಬ್ಬರ ವೈಯಕ್ತಿಕ ಹಿತಾಸಕ್ತಿಗಿಂತ ಜನರ ಹಿತಾಸಕ್ತಿ ಬಹಳ ಮುಖ್ಯವಾದುದು ಎನ್ನುವುದನ್ನು ಸರ್ಕಾರ ಅರಿಯಬೇಕಿತ್ತು’ ಎಂದರು.

‘ಜಿಲ್ಲೆ ವಿಭಜನೆಗೆ ನಮ್ಮ ಸಮ್ಮತಿ ಇದೆ. ಹಗರಿಬೊಮ್ಮನಹಳ್ಳಿ ಜಿಲ್ಲಾ ಕೇಂದ್ರ ಸ್ಥಾನ ಮಾಡಿದರೆ ಬಹಳ ಸೂಕ್ತವಾಗಿರುತ್ತಿತ್ತು. ಪಶ್ಚಿಮದ ತಾಲ್ಲೂಕುಗಳ ಜನ ಬಹಳ ಕಷ್ಟ ಎದುರಿಸುತ್ತಿದ್ದಾರೆ. ಹಗರಿಬೊಮ್ಮನಹಳ್ಳಿ ಜಿಲ್ಲಾ ಕೇಂದ್ರವಾಗಬೇಕು ಎಂದು ಯಾರೂ ಧ್ವನಿ ಎತ್ತಿಲ್ಲ. ಹೊಸಪೇಟೆಯ ಮುಖಂಡರು ರಾಜಕೀಯ ಇಚ್ಛಾಶಕ್ತಿ ತೋರಿಸಿದ್ದರಿಂದ ಇದು ಸಾಧ್ಯವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಕ್ಕಿ ತೋಟೇಶ್‌ ಪ್ರತಿಕ್ರಿಯಿಸಿದರು.

ಆದರೆ, ಹೊಸಪೇಟೆ ಕೇಂದ್ರವಾಗಿರಿಸಿಕೊಂಡು ವಿಜಯನಗರ ಜಿಲ್ಲೆ ರಚಿಸಿರುವುದು ಸೂಕ್ತವಾಗಿದೆ ಎನ್ನುತ್ತಾರೆ ವಿಜಯನಗರ ಜಿಲ್ಲಾ ಹೋರಾಟ ಸಮಿತಿಯ ಮುಖಂಡರು.

‘ಹೊಸಪೇಟೆ ನಗರವೂ ಮೂರು ದಿಕ್ಕುಗಳಲ್ಲಿ ಬೆಳೆಯಲು ಅವಕಾಶಗಳು ಇಲ್ಲ ಎನ್ನುವುದು ನಿಜ. ಆದರೆ, ಒಂದು ಜಿಲ್ಲೆಯಲ್ಲಿ ಇರಬೇಕಾದ ಎಲ್ಲ ಸವಲತ್ತುಗಳು ಈಗಾಗಲೇ ನಗರದಲ್ಲಿವೆ. ಅಲ್ಲದೇ ರಸ್ತೆ ಸಂಪರ್ಕದ ವಿಚಾರದಲ್ಲಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಕೊಂಡಿಯಂತಿದೆ. ಎಲ್ಲ ಕಡೆಗೂ ರೈಲು ಸಂಪರ್ಕವಿದೆ. 30 ಕಿ.ಮೀ ದೂರದಲ್ಲಿ ವಿಮಾನ ನಿಲ್ದಾಣವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜಲಾಶಯ ಇರುವುದರಿಂದ ನೀರಿಗೆ ಯಾವುದೇ ರೀತಿಯ ಕೊರತೆಯಿಲ್ಲ. ಅಖಂಡ ಬಳ್ಳಾರಿ ಜಿಲ್ಲೆಯಲ್ಲಿದ್ದಾಗ ಉಪವಿಭಾಗವಾಗಿದ್ದರಿಂದ ಬಹುತೇಕ ಇಲಾಖೆಯ ಕಚೇರಿಗಳು ಇಲ್ಲಿವೆ’ ಎನ್ನುತ್ತಾರೆ ಸಮಿತಿಯ ಹಿರಿಯ ಮುಖಂಡ ವೈ. ಯಮುನೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.