ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ರಾಬಕೊವಿ)ದ 12 ನಿರ್ದೇಶಕರ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಎರಡೂ ಗುಂಪುಗಳು ಸಮಬಲ ಸಾಧಿಸಿದ್ದು, ಆಡಳಿತ ಯಾರಿಗೆ ಎಂಬ ಪ್ರಶ್ನೆ ಹುಟ್ಟು ಹಾಕಿದೆ. ಬಳ್ಳಾರಿ ಜಿಲ್ಲೆ ಪ್ರಾತಿನಿಧ್ಯವನ್ನೇ ಕಳೆದುಕೊಂಡಿದೆ.
ಚುನಾವಣೆಯಲ್ಲಿ ಒಕ್ಕೂಟದ ಈ ಹಿಂದಿನ ಅಧ್ಯಕ್ಷ ಭೀಮ ನಾಯ್ಕ ಅವರ ಬೆಂಬಲಿಗರು 6 ಸ್ಥಾನಗಳಲ್ಲಿ ವಿಜೇತರಾಗಿದ್ದು, ಅವರ ವಿರೋಧಿ ಬಣದವರು 6 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಹೀಗಾಗಿ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಪ್ರಶ್ನೆ ಸದ್ಯ ಉದ್ಭವಿಸಿದೆ. ಆಡಳಿತ ಮಂಡಳಿ ರಚಿಸಲು ಕಾಂಗ್ರೆಸ್‌ನ ಹಿರಿಯ ನಾಯಕರು ಮಧ್ಯಪ್ರವೇಶ ಮಾಡಬೇಕಾದ ಸನ್ನಿವೇಶ ಸದ್ಯ ಸೃಷ್ಟಿಯಾಗಿದೆ.
ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಗುರುವಾರ ಮತದಾನ ಪ್ರಕ್ರಿಯೆ ನಡೆಯಿತು. ಪೊಲೀಸರ ಬಿಗಿ ಭದ್ರತೆಯಲ್ಲಿ ಹಾಲು ಉತ್ಪಾದಕರ ಸಂಘದ ಪ್ರತಿನಿಧಿಗಳು ಮತ ಚಲಾಯಿಸಿದರು. ಎಲ್ಲ ಜಿಲ್ಲೆಗಳಿಂದ ಶೇ 100ರಷ್ಟು ಮತದಾನ ನಡೆಯಿತು. (ವಿಜಯನಗರ ಜಿಲ್ಲೆಯಿಂದ 229 ಮತ, ಬಳ್ಳಾರಿ 28, ಕೊಪ್ಪಳ 154, ರಾಯಚೂರು 55). ಮಧ್ಯಾಹ್ನ ನಾಲ್ಕು ಗಂಟೆ ನಂತರ ಮತ ಎಣಿಕೆ ಕಾರ್ಯ ಆರಂಭಗೊಂಡಿತು. ಕೆಲವೇ ಹೊತ್ತಿನಲ್ಲಿ ಫಲಿತಾಂಶ ಪ್ರಕಟಗೊಂಡಿತು.
ಬಳ್ಳಾರಿ–ವಿಜಯನಗರ ಜಿಲ್ಲೆಯಿಂದ ಭೀಮ ನಾಯ್ಕ ಬೆಂಬಲಿಗರೇ ನಾಲ್ಕು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದರು. ಕೊಪ್ಪಳ ಜಿಲ್ಲೆಯಲ್ಲಿ ಭೀಮ ನಾಯ್ಕ ವಿರೋಧಿ ಬಣವೇ ನಾಲ್ಕು ಸ್ಥಾನ ಗೆಲ್ಲುವ ಮೂಲಕ ಪಾರಮ್ಯ ಮರೆಯಿತು. ಆದರೆ, ರಾಯಚೂರಿನಲ್ಲಿ ಮಾತ್ರ ಎರಡೂ ಬಣಗಳು ತಲಾ ಎರಡೆರಡು ಸ್ಥಾನಗಳನ್ನು ಗೆದ್ದಿವೆ.
ಅಧ್ಯಕ್ಷರ ಆಯ್ಕೆ ಹೇಗೆ?: ಅಧ್ಯಕ್ಷರ ಆಯ್ಕೆಗೆ ಚುನಾಯಿತ 12 ನಿರ್ದೇಶಕರು, ಸರ್ಕಾರದಿಂದ ನಾಮನಿರ್ದೇಶಿತ ಒಬ್ಬ ನಿರ್ದೇಶಕ, ರಬಕೊವಿ ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದಿಂದ (ಕೆಎಂಎಫ್) ನಿಯೋಜನೆಗೊಂಡ ಒಬ್ಬ ಅಧಿಕಾರಿ, ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯ (ಎನ್‌ಡಿಡಿಬಿ) ಒಬ್ಬರು, ಪಶುಸಂಗೋಪನಾ ಇಲಾಖೆ ಮತ್ತು ಸಹಕಾರ ಇಲಾಖೆಯಿಂದ ತಲಾ ಒಬ್ಬೊಬ್ಬರು ಸೇರಿ ಒಟ್ಟು 18 ಮಂದಿ ಮತ ಚಲಾಯಿಸಲಿದ್ದಾರೆ.
ಯಾರಾಗಬಹುದು ಅಧ್ಯಕ್ಷರು: ಚುನಾವಣೆಯಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿವೆ. ನಾಮನಿರ್ದೇಶಿತ ನಿರ್ದೇಶಕರು ಮತ್ತು ಅಧಿಕಾರಿ ವರ್ಗದ ಮತಗಳು ಸರ್ಕಾರ ಸೂಚಿಸಿದವರ ಕಡೆ ಚಲಾವಣೆಗೊಳ್ಳುತ್ತವೆ. ಹೀಗಾಗಿ ಆಡಳಿತ ಮಂಡಳಿ ರಚನೆಯಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡರು ಮಧ್ಯಪ್ರವೇಶ ಮಾಡಿ ಸಮನ್ವಯತೆ ಮೂಡಿಸುವ ಪರಿಸ್ಥಿತಿ ಎದುರಾಗಿದೆ. ಬಲ್ಲ ಮೂಲಗಳ ಮಾಹಿತಿ ಪ್ರಕಾರ ಭೀಮ ನಾಯ್ಕ ವಿರೋಧಿ ಬಣ ಅಧ್ಯಕ್ಷ ಸ್ಥಾನಕ್ಕಾಗಿ ಬಿಗಿಪಟ್ಟು ಹಿಡಿದಿದೆ ಎಂದು ಗೊತ್ತಾಗಿದೆ.
ಒಂದು ಮತದಿಂದ ಸೋತ ಅಭ್ಯರ್ಥಿ: ರಾಯಚೂರಿನ ರವೀಂದ್ರ ಒಂದೇ ಒಂದು ಮತದಿಂದ ಚುನಾವಣೆಯಲ್ಲಿ ಪರಾಭವಗೊಂಡರು. ಸಿಂದನೂರಿನ ಪ್ರವೀಣ್ ಕುಮಾರ್ 31 ಮತ ಪಡೆದರೆ, ರವೀಂದ್ರ 30 ಮತಗಳನ್ನು ಪಡೆದು ಸೋತರು. ಹೆಚ್ಚು ಮತ ಪಡೆದರೂ ಒಂದೇ ತಾಲೂಕಿನಿಂದ ಇಬ್ಬರು ಆಯ್ಕೆಯಾಗಲು ಸಾಧ್ಯವಿಲ್ಲ
ಬಳ್ಳಾರಿಯಲ್ಲೇ ಮೆಗಾ ಡೇರಿ: ಮೆಗಾ ಡೇರಿ ಮಂಜೂರಾಗಿರುವುದು, ಕೆಎಂಇಆರ್‌ಸಿ ಅನುದಾನ ಕೊಟ್ಟಿರುವುದು ಬಳ್ಳಾರಿಗೆಂದೇ. ಹೀಗಾಗಿ ಸ್ಥಳಾಂತರ ಸುಳ್ಳು. ಡೇರಿಯನ್ನು ವಿಜಯನಗರಕ್ಕೆ ಸ್ಥಳಾಂತರ ಮಾಡುತ್ತಿದ್ದೇನೆ ಎಂದು ಚುನಾವಣೆಯಲ್ಲಿ ಅಪಪ್ರಚಾರ ಮಾಡಲಾಯಿತು. ಅವರಿಗೆ ಫಲ ಸಿಕ್ಕಿಲ್ಲ. ನನ್ನ ವಿರುದ್ಧ ಕೆಲಸ ಮಾಡಿದ ನನ್ನ ಪಕ್ಷದವರಿಗೆ ಸೂಕ್ತ ಸಮಯದಲ್ಲಿ ಸೂಕ್ತ ರೀತಿಯಲ್ಲಿ ತಿರುಗೇಟು ನೀಡುತ್ತೇನೆ ಎಂದು ಒಕ್ಕೂಟದ ನೂತನ ನಿರ್ದೇಶಕ ಭೀಮ ನಾಯ್ಕ ಹೇಳಿದರು.
ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿ. ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ ಸುರೇಶ್ ಅಭ್ಯರ್ಥಿಯಾಗುತ್ತಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲಭೀಮಾ ನಾಯ್ಕ ನಿರ್ದೇಶಕ ರಾಬಕೊವಿ
ಅಭಿಮಾನಶೂನ್ಯತೆ: ಬಳ್ಳಾರಿ ಅಸ್ಮಿತೆ ಮಣ್ಣುಪಾಲು
ನಿರೀಕ್ಷೆ ಮಾಡಿದಂತೆ ಬಳ್ಳಾರಿ ಜಿಲ್ಲೆಯ ಅಸ್ಮಿತೆ ಈ ಚುನಾವಣೆಯಲ್ಲಿ ಮಣ್ಣುಪಾಲಾಗಿದೆ. ಬಳ್ಳಾರಿ ಜಿಲ್ಲೆಯವರು ಒಕ್ಕೂಟಕ್ಕೆ ಆಯ್ಕೆಯಾಗಬಾರದು ಎಂದು ವರ್ಷಗಳಿಂದ ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿದ್ದ ತಂತ್ರ ಫಲ ಕೊಟ್ಟಿದೆ. ವಿಜಯನಗರ ಬಣದೊಂದಿಗೆ ಕೈಜೋಡಿಸಿದ ಬಳ್ಳಾರಿ ಜಿಲ್ಲೆಯ ಕೆಲ ಪ್ರಭಾವಿ ರಾಜಕಾರಣಿಗಳ ಅಭಿಮಾನ ಶೂನ್ಯತೆ ರಾರಾಜಿಸಿತು. ಪರಿಣಾಮವಾಗಿ ಬಳ್ಳಾರಿಯ ಸ್ಪರ್ಧಿಗಳು ಠೇವಣಿ ಕಳೆದುಕೊಳ್ಳಬೇಕಾಯಿತು. ಸದ್ಯ ಒಕ್ಕೂಟದಲ್ಲಿ ಬಳ್ಳಾರಿ ಪ್ರತಿನಿಧಿಗಳು ಇಲ್ಲದೇ ಇರುವುದು ಪ್ರಾದೇಶಿಕ ಅಸಮಾನತೆಯಂಥ ಗಂಭೀರ ಸಮಸ್ಯೆಯನ್ನು ಮುಂದಿಟ್ಟಿದೆ. ಮಂಡಳಿಯ ನೀತಿ ನಿರ್ಧಾರಗಳಲ್ಲಿ ಬಳ್ಳಾರಿಗೆ ಅನಾನುಕೂಲವಾಗುವ ಲಕ್ಷಣಗಳು ಗೋಚರಿಸಿವೆ. ಬಳ್ಳಾರಿ ಜಿಲ್ಲೆಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಒಂದಂಕಿ ಮತಗಳನ್ನು ಪಡೆದು ನಿರಾಶೆ ಮೂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.