ಕಂಪ್ಲಿ: ‘ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆ ಚುನಾವಣೆಯಲ್ಲಿ ಮತ ಕಳವು ಕುರಿತು ದಾಖಲೆ ಸಹಿತ ಆರೋಪಿಸಿರುವುದು ನೂರಕ್ಕೆ ನೂರಷ್ಟು ವಾಸ್ತವಾಂಶದಿಂದ ಕೂಡಿದೆ’ ಎಂದು ಇಲ್ಲಿಯ ಶಾಸಕ ಜೆ.ಎನ್. ಗಣೇಶ್ ಸಮರ್ಥಿಸಿಕೊಂಡರು.
ಪಟ್ಟಣದ ಷಾ. ಮಿಯಾಚಂದ್ ಸರ್ಕಾರಿ ಪ್ರೌಢಶಾಲೆಯಲ್ಲಿ ₹35.50ಲಕ್ಷ ವೆಚ್ಚದ ಜಿ ಪ್ಲಸ್ ಒನ್ ಕೊಠಡಿ ನಿರ್ಮಾಣಕ್ಕೆ ಮತ್ತು ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿ ₹1ಕೋಟಿ ವೆಚ್ಚದ ಚೆಕ್‍ಡ್ಯಾಂ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಒಂದೇ ಕ್ಷೇತ್ರದಲ್ಲಿ ಒಬ್ಬರೆ ನಾಲ್ಕೈದು ಮತ ಚಲಾಯಿಸುತ್ತಾರೆ ಎನ್ನುವುದು ದಾಖಲೆಯಿಂದ ದೃಢಪಟ್ಟಿದ್ದು, ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಮೋಸ ಎಂದು ದೂರಿದರು.
ಮುಂಬರುವ ದಿನಗಳಲ್ಲಿ ಇದೇ ವ್ಯವಸ್ಥೆ ಮುಂದುವರಿದಲ್ಲಿ ಮನೆಯಲ್ಲಿಯೇ ಕುಳಿತು ಏಕ ಸರ್ಕಾರ ಆಯ್ಕೆ ಮಾಡುವುದರಲ್ಲಿ ಸಂದೇಹವಿಲ್ಲ ಎಂದು ಬೇಸರವೂ ವ್ಯಕ್ತಪಡಿಸಿದರು.
ಮುಂಬರುವ ಅಧಿವೇಶನದಲ್ಲಿ ತುಂಗಭದ್ರಾ ಜಲಾಶಯಕ್ಕೆ ನೂತನ ಕ್ರೆಸ್ಟ್ ಗೇಟ್ ಅಳವಡಿಕೆ, ಕ್ಷೇತ್ರದಲ್ಲಿ ಜೋಳದ ಬೆಳೆ ಸಮರ್ಪಕ ಸಮೀಕ್ಷೆ, ಖರೀದಿ ಕೇಂದ್ರದ ಷರತ್ತುಗಳಲ್ಲಿ ರಿಯಾಯಿತಿ ಕುರಿತು ಚರ್ಚಿಸುತ್ತೇನೆ ಎಂದರು.
ಪಟ್ಟಣದಲ್ಲಿ ಬಿಇಒ ಕಚೇರಿ ಆರಂಭಕ್ಕೆ, ತುಂಗಭದ್ರಾ ನದಿಗೆ ನೂತನ ಸೇತುವೆ ನಿರ್ಮಿಸುವ ಕುರಿತು ನಿರಂತರ ಪ್ರಯತ್ನ ನಡೆದಿದೆ ಎಂದರು.
ದಸರಾ ರಜಾ ದಿನಗಳಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಜರುಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಮತ್ತು ಸದಸ್ಯರು, ಎಪಿಎಂಸಿ ಅಧ್ಯಕ್ಷ ಎನ್. ಹಬೀಬ್ ರೆಹಮಾನ್, ಸುಜಾತ, ಟಿ.ಎಂ. ಬಸವರಾಜ, ಪ್ರಮುಖರಾದ ವೆಂಕೋಬಾ ನಾಯಕ, ಹೊನ್ನೂರಪ್ಪ, ಕೆ. ಷಣ್ಮುಖಪ್ಪ, ಬಿ. ಪಂಪಾಪತಿ, ಕೋರಿ ಚನ್ನಬಸವ, ಕುರಿ ಬಸವರಾಜ, ನೆಲ್ಲೂಡಿ ಬಸವರಾಜ, ಎಚ್. ಗುಂಡಪ್ಪ, ಖಾಜಾಸಾಬ್, ದಂಡಿನ ದೊಡ್ಡಬಸವ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.