ADVERTISEMENT

ಬಳ್ಳಾರಿ | ಶೀಘ್ರವೇ ಜೀನ್ಸ್ ಪಾರ್ಕ್‌ಗೆ ರಾಹುಲ್‌ ಅಡಿಗಲ್ಲು: ಭರತ್‌ರೆಡ್ಡಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 7:39 IST
Last Updated 21 ನವೆಂಬರ್ 2025, 7:39 IST
ಭರತ್‌ ರೆಡ್ಡಿ
ಭರತ್‌ ರೆಡ್ಡಿ   

ಬಳ್ಳಾರಿ: ‘ಬಳ್ಳಾರಿ ಜೀನ್ಸ್ ಅಪರೆಲ್ ಪಾರ್ಕ್ ಸ್ಥಾಪನೆಗೆ ಲೋಕಸಭೆಯ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ 2026ರ ಮಾರ್ಚ್ ಒಳಗೆ ಅಡಿಗಲ್ಲು ಹಾಕಲಿದ್ದಾರೆ’ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್‌ರೆಡ್ಡಿ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಜೀನ್ಸ್‌ ಪಾರ್ಕ್‌ಗೆ ಈಗಾಗಲೇ 150 ಎಕರೆ ಭೂ ಸ್ವಾಧೀನ ಮಾಡಲಾಗಿದೆ. ಸಂಜೀವರಾಯನ ಕೋಟೆ ಸಮೀಪ ಇನ್ನೂ 400 ಎಕರೆ ಜಮೀನು ಗುರುತಿಸಲಾಗಿದೆ. ಅಂದಾಜು ಆರು ನೂರು ಎಕರೆ ಪ್ರದೇಶದಲ್ಲಿ ಸಕಲ ಸೌಲಭ್ಯಗಳನ್ನು ಒಳಗೊಂಡ ಅತ್ಯಾಧುನಿಕ ಜೀನ್ಸ್ ಪಾರ್ಕ್ ಅನ್ನು ರಾಜ್ಯ ಸರ್ಕಾರ ನಿರ್ಮಿಸಲಿದೆ’ ಎಂದರು.

ಬಳ್ಳಾರಿಯ 36 ಜೀನ್ಸ್ ಘಟಕಗಳನ್ನು ಬಂದ್ ಮಾಡಿಸಿದ್ದ ಸಮಸ್ಯೆಯು ಬಗೆಹರಿದಿದೆ. ಇವುಗಳನ್ನು ಪುನಃ ಪ್ರಾರಂಭಿಸಲು ಸಿಎಂ ಬುಧವಾರ ನಡೆದ ಸಭೆಯಲ್ಲಿ ಸೂಚಿಸಿದ್ದಾರೆ. 

ADVERTISEMENT

ಜೀನ್ಸ್‌ ಘಟಕಗಳಿಗೆ ಕಲುಷಿತ ನೀರು ಸಂಸ್ಕರಣಾ ಸಾಮಾನ್ಯ ಘಟಕ (ಸಿಇಟಿಪಿ) ನಿರ್ಮಿಸಲು ಕೆಕೆಆರ್‌ಡಿಬಿಯಿಂದ ₹11 ಕೋಟಿ ಹಾಗೂ ಕೆಐಎಡಿಬಿ(ಕೈಗಾರಿಕಾ ಇಲಾಖೆ)ಯಿಂದ ₹11 ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. 

ಜೀನ್ಸ್ ಪಾರ್ಕ್ ನಿರ್ಮಾಣಕ್ಕೆ ಹಣದ ಕೊರತೆ ಇಲ್ಲ. ಬಜೆಟ್‌ನಲ್ಲಿ ಪ್ರಕಟಿಸಬೇಕಾಗಿಲ್ಲ. ಕೆಎಂಇಆರ್‌ಸಿ, ಕೆಕೆಆರ್‌ಡಿಬಿ, ಡಿಎಂಎಫ್ ಅನುದಾನವಿದೆ. ಜೀನ್ಸ್ ಪಾರ್ಕ್ ಸ್ಥಾಪನೆಯನ್ನು ಮಾಡುವುದಾಗಿ ಸರ್ಕಾರ ಹೇಳಿದೆ. ಅದನ್ನು ನಿರ್ಮಿಸಿ ತೋರಿಸುತ್ತದೆ ಎಂದು ಭರತ್‌ರೆಡ್ಡಿ ತಿಳಿಸಿದರು. 

ಜ. 3ರಂದು ವಾಲ್ಮೀಕಿ ವೃತ್ತ ಉದ್ಘಾಟನೆ: ನಗರದ ವಾಲ್ಮೀಕಿ (ಎಸ್‌ಪಿ) ವೃತ್ತದ ಬಳಿ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದೆ. ಜನವರಿ 3 ಕ್ಕೆ ಉದ್ಘಾಟನೆ ಮಾಡಲಾಗುತ್ತದೆ. ಮಹರ್ಷಿ ಶ್ರೀ ವಾಲ್ಮೀಕಿಯವರ ಭವ್ಯವಾದ ಪ್ರತಿಮೆ ನಿರ್ಮಿಸಿ, ಅಲ್ಲಿ ಅನಾವರಣ ಮಾಡಲಾಗುತ್ತದೆ. ಜನವರಿ 3ನೇ ವಾರದಲ್ಲಿ ರಾಯಲ್ ಸರ್ಕಲ್‌ನಲ್ಲಿ( ಗಡಿಗಿ ಚೆನ್ನಪ್ಪ ವೃತ್ತದಲ್ಲಿ) ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡು ಪ್ರಾರಂಭಿಸಲಾಗುತ್ತದೆ ಎಂದು ಭರತ್‌ರೆಡ್ಡಿ ಹೇಳಿದರು.

ಪಾಲಿಕೆಯ ಮೇಯರ್ ಪಿ.ಗಾದೆಪ್ಪ, ಮಾಜಿ ಮೇಯರ್ ಎಂ.ರಾಜೇಶ್ವರಿ, ಜೀನ್ಸ್- ವಾಷಿಂಗ್ ಯೂನಿಟ್‌ಗಳ ಮಾಲೀಕರಾದ ಮಲ್ಲಿಕಾರ್ಜುನಗೌಡ, ಪೋಲಕ್ಸ್ ಮಲ್ಲಿಕಾರ್ಜುನ್, ದಾದಾ ಖಲಂದರ್, ವಿನಯ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.