ಕುಡತಿನಿ ಪಟ್ಟಣದ ಹೊರ ವಲಯದಲ್ಲಿನ ಅಪೂರ್ಣಗೊಂಡ ರೈಲ್ವೆ ಸೇತುವೆ
ಕುಡುತಿನಿ (ಸಂಡೂರು): ಕುಡುತಿನಿಯಿಂದ ಕುರುಗೋಡು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲ್ವೆ ಮೇಲ್ಮಟ್ಟದ ಸೇತುವೆಯ ಕಾಮಗಾರಿ ಆರಂಭಗೊಂಡು ಎಂಟು ವರ್ಷಗಳೇ ಆದರೂ ಮಂದಗತಿಯಲ್ಲಿ ಸಾಗಿದೆ. ಸಾರ್ವಜನಿಕರು ನಿತ್ಯದ ಸಂಚಾರಕ್ಕಾಗಿ ಪರಿತಪಿಸುವಂತಾಗಿದೆ.
2017-18ನೇ ಸಾಲಿನಲ್ಲಿ ಭಾರತೀಯ ರೈಲ್ವೆ ಇಲಾಖೆಯು ಮೊದಲ ಅವಧಿಯ ಅನುದಾನದಲ್ಲಿ ಅಂದಾಜು ₹27 ಕೋಟಿ, 2024ನೇ ಸಾಲಿನಲ್ಲಿ ಎರಡನೇ ಅವಧಿಯಲ್ಲಿ ₹25 ಕೋಟಿ ಸೇರಿ ಒಟ್ಟು ₹52 ಕೋಟಿ ವೆಚ್ಚದಲ್ಲಿ ರೈಲ್ವೆ ಸೇತುವೆಯ ಕಾಮಗಾರಿ ಕೈಗೊಂಡಿದೆ. ಬಳ್ಳಾರಿ ಜಿಲ್ಲೆಯ ಜನಪ್ರತಿನಿಧಿಗಳ, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಕಾಮಗಾರಿ ಕುಂಟುತ್ತಾ ಸಾಗಿದೆ.
ಇದರ ಪರಿಣಾಮ ಕುಡುತಿನಿ ಪಟ್ಟಣದಿಂದ ಕುರುಗೋಡು, ಸಿದ್ದಮ್ಮನಹಳ್ಳಿ, ಬಾದನಹಟ್ಟಿ, ಯರಂಗಳಿಗಿ ಗ್ರಾಮಗಳೂ ಸೇರಿದಂತೆ ಇತರೆ ಗ್ರಾಮಗಳಿಗೆ ತೆರಳುವ ಪ್ರಯಾಣಿಕರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ರೈತಾಪಿ ಜನರಿಗೆ, ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಘಟಕ, ಜಿಂದಾಲ್ ಕಾರ್ಖಾನೆ ಸೇರಿದಂತೆ ಇತರೆ ಹತ್ತಾರು ಕಾರ್ಖಾನೆಗಳಿಗೆ ತೆರಳುವ ಕಾರ್ಮಿಕರಿಗೆ ನಿತ್ಯ ತೊಂದರೆಯಾಗುತ್ತಿದೆ.
ರೈಲ್ವೆ ಸೇತುವೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಜನರ ಸಂಚಾರಕ್ಕೆ ಮುಕ್ತಗೊಳಿಸುವಂತೆ ಒತ್ತಾಯಿಸಿ ಕುಡುತಿನಿ, ಸುತ್ತಲಿನ ಗ್ರಾಮಗಳ ರೈತಾಪಿ ಜನರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಹಲವು ಬಾರಿ ಪ್ರತಿಭಟನೆ ನಡೆಸಿ, ಜನಪ್ರತಿನಿಧಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೂ ಕಾಮಗಾರಿ ಶೀಘ್ರ ಪೂರ್ಣವಾಗುವ ಲಕ್ಷಣಗಳು ಕಾಣುತ್ತಿಲ್ಲ.
ಕಾಮಗಾರಿ ಹಿನ್ನೆಲೆ ಜನರ ನಿತ್ಯ ಸಂಚಾರಕ್ಕಾಗಿ ರೈಲ್ವೆ ಹಳಿಯ ಪಕ್ಕದಲ್ಲಿ ಮಣ್ಣಿನ ಪರ್ಯಾಯ ರಸ್ತೆ ಮಾಡಲಾಗಿದೆ. ಈ ರಸ್ತೆಯು ಭಾರಿ ವಾಹನಗಳ ಸಂಚಾರದಿಂದ ಸಂಪೂರ್ಣ ಹದಗೆಟ್ಟಿದೆ.
ಕಳೆದ ವರ್ಷ ಕೇಂದ್ರದ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಬಳ್ಳಾರಿ ನಗರಕ್ಕೆ ಬಂದಿದ್ದಾಗ ಸ್ಥಳೀಯ ಬಿಜೆಪಿ ಮುಖಂಡರು ಅವರನ್ನು ಭೇಟಿಯಾಗಿ, ಸಮಸ್ಯೆಯ ಬಗ್ಗೆ ಚರ್ಚಿಸಿ, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮನವಿ ಸಲ್ಲಿಸಿದ್ದರು. ಆದರೂ ಕಾಮಗಾರಿಯು ಚುರುಕುಗೊಳ್ಳದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಸಂಸದ ತುಕಾರಾಂ ಭರವಸೆ ಏನಾಯ್ತು?
ಸಂಸದ ಇ.ತುಕಾರಾಂ ಅವರು ಕಳೆದ ವರ್ಷ ಸೆ.22ರಂದು ರೈಲ್ವೆ ಸೇತುವೆಯ ಹೆಚ್ಚುವರಿ ಕಾಮಗಾರಿಗಾಗಿ ಭೂಮಿಪೂಜೆ ನೆರವೇರಿಸಿದ್ದರು. ಕುಡತಿನಿ ರೈಲ್ವೆ ನಿಲ್ದಾಣಕ್ಕೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಬಳ್ಳಾರಿ ಜಿಲ್ಲೆಯಲ್ಲೆ ಮಾದರಿ, ಅಮೃತ ರೈಲ್ವೆ ನಿಲ್ದಾಣವನ್ನಾಗಿ ನಿರ್ಮಾಣ ಮಾಡಲಾಗುವುದು. ವಿಳಂಬಗೊಂಡ ರೈಲ್ವೆ ಸೇತುವೆಯ ಕಾಮಗಾರಿಯನ್ನು ಕೆಲವೇ ತಿಂಗಳಲ್ಲಿ ಮುಗಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಅವರ ಭರವಸೆಯನ್ನು ಪ್ರಶ್ನೆ ಮಾಡುವಂತಿದೆ ಸದ್ಯದ ಸ್ಥಿತಿ.
ಯಾರು ಏನಂತಾರೆ?
ಕುಡುತಿನಿಯಿಂದ ಕುರುಗೋಡು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಸೇತುವೆ ವಿಳಂಬ ಕಾಮಗಾರಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದು ಸೂಕ್ತ ಕ್ರಮವಹಿಸಲಾಗುವುದುಟಿ.ರೇಖಾ, ತಹಶೀಲ್ದಾರ್, ಬಳ್ಳಾರಿ
ರೈಲ್ವೆ ಸೇತುವೆಯ ಕಾಮಗಾರಿಯು ಹಲವಾರು ವರ್ಷಗಳಿಂದ ಕುಂಟುಂತ್ತಾ ಸಾಗಿದ್ದು, ಜನರು ನಿತ್ಯದ ಸಂಚಾರಕ್ಕಾಗಿ ಪರಿತಪಿಸುತ್ತಿದ್ದಾರೆ. ರೈಲ್ವೆ ಇಲಾಖೆಯ ಅಧಿಕಾರಿಗಳು ಶೀಘ್ರವಾಗಿ ಕಾಮಗಾರಿಯನ್ನುಪೂರ್ಣಗೊಳಿಸಬೇಕುಆರ್.ರಾಮಲಿಂಗಪ್ಪ, ಕುಡತಿನಿ ಪಟ್ಟಣದ ನಿವಾಸಿ
ಈ ಸೇತುವೆ ನಿರ್ಮಾಣ ನಿಧಾನವಾಗಿರುವುದರಿಂದ ನಿತ್ಯದ ಸಂಚಾರಕ್ಕಾಗಿ ರೈತರು, ವಿದ್ಯಾರ್ಥಿಗಳು, ಕಾರ್ಮಿಕರು ಪರದಾಡುತ್ತಿದ್ದಾರೆ. ತ್ವರಿತವಾಗಿ ಪೂರ್ಣಗೊಳಿಸಲು ಜಿಲ್ಲಾಡಳಿತ, ಜನ ಪ್ರತಿನಿಧಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕುಉಪ್ಪಾರು ತಿಮ್ಮಪ್ಪ, ಕುಡತಿನಿಯ ನಿವಾಸಿ
ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಕುಡುತಿನಿಯ ರೈಲ್ವೆ ನಿಲ್ದಾಣಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸಿ, ಅಮೃತ ರೈಲ್ವೆ ನಿಲ್ದಾಣವನ್ನು ನಿರ್ಮಿಸಬೇಕು.ಕೆ.ಎಂ.ಹಾಲಪ್ಪ, ಕುಡತಿನಿಯ ನಿವಾಸಿ
ಕುರುಗೋಡು ಪಟ್ಟಣಕ್ಕೆ ತೆರಳಲು ರಸ್ತೆಯ ಸಮಸ್ಯೆ ಉಂಟಾಗಿದ್ದರಿಂದ ಸಾರಿಗೆ ಬಸ್‍ಗಳ ಸಂಚಾರ ವಿರಳವಾಗಿದೆ. ಜನರು, ವಿದ್ಯಾರ್ಥಿಗಳು ಸಂಚಾರಕ್ಕೆ ತೊಂದರೆಯಾಗಿದ್ದು, ರೈಲ್ವೆ ಇಲಾಖೆಯವರು ಸೇತುವೆಯ ಕಾಮಗಾರಿಯನ್ನು ಪೂರ್ಣಗೊಳಿಸಬೇಕುಸಿ.ಆನಂದ, ಕುಡತಿನಿಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.