ADVERTISEMENT

ಹುಲಿ ಬಾಯಿಗೆ ಕೈ ಹಾಕಿರುವ ರಾಮುಲು ಶೀಘ್ರ ಜೈಲಿಗೆ...!

ರಾಮುಲು ಅಧಿಕಾರದ ಆಸೆಗೆ ರಾಜೀನಾಮೆ ಖಯಾಲಿ: ಆಂಜನೇಯುಲು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 9:49 IST
Last Updated 14 ಅಕ್ಟೋಬರ್ 2018, 9:49 IST
ಜೆ.ಎಸ್.ಆಂಜನೇಯುಲು
ಜೆ.ಎಸ್.ಆಂಜನೇಯುಲು   

ಬಳ್ಳಾರಿ : ಜಿಲ್ಲೆಯ ಜನರು ಉಪಚುನಾವಣೆಗಳಿಂದ ಬೇಸತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜೆ.ಎಸ್.ಅಂಜನೇಯುಲು ಹೇಳಿದರು.

ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರನ್ನು ದಡ್ಡರೆಂದು ಭಾವಿಸಿರುವ ರಾಮುಲು ಮಂತ್ರಿಯಾಗುವ ಇರಾದೆಯಿಂದ ರಾಜೀನಾಮೆ ರಾಜಕಾರಣ ಮಾಡುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಮಂತ್ರಿಯಾಗಲು ಲೋಕಸಭೆಗೆ ಮತ್ತು ಕೇಂದ್ರದಲ್ಲಿ ಮಂತ್ರಿಯಾಗಲು ವಿಧಾನಸಭೆಗೆ ರಾಜೀನಾಮೆ ನೀಡಿದ್ದಾರೆ. ಅಭಿವೃದ್ಧಿ ಕಾರ್ಯದ ಬದಲು ಅಧಿಕಾರದ ಆಸೆಗೆ ಜನರನ್ನು ಬಲಿ ಮಾಡುತ್ತಿದ್ದಾರೆ ಎಂದು ದೂರಿದರು.

ADVERTISEMENT

ಲೋಕಸಭೆಯ ಉಪಚುನಾವಣೆಯಲ್ಲಿ ಸಹೋದರಿ ಜೆ.ಶಾಂತಾಗೆ ಜಿಲ್ಲೆಯ ಜನರು ಅಶೀರ್ವಾದ ಮಾಡುತ್ತಾರೆ ಎಂದಿದ್ದಾರೆ. ಅದು ಅವರ ಭ್ರಮೆ. ಪ್ರತಿ ಸಾರಿ ರಾಮುಲು ಹೇಳಿದಂತೆ ಕುಣಿಯಲು‌ ಜನರು ಅವರ ಕೈಗೊಂಬೆಯಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರಗೆ ಸವಾಲು ಹಾಕುವ ತಾಕತ್ತು ನಿಮಗಿಲ್ಲ. ನಾಗೇಂದ್ರ ವಿರುದ್ಧ ಸೋಲಿನ ಭಯದಿಂದ ಮೊಳಕಾಲ್ಮೂರು ಕ್ಷೇತ್ರಕ್ಕೆ ಹೋಗಿದ್ದಿರಿ ಎಂದು ತಿರುಗೇಟು ನೀಡಿದರು.

ರಾಜ್ಯಮಟ್ಟದ ನಾಯಕ ಎಂದುಕೊಳ್ಳುವ ರಾಮುಲು ರಾಜ್ಯದ ಯಾವುದೇ ಕ್ಷೇತ್ರದಲ್ಲಿ ತಮ್ಮ ಎದುರು ಚುನಾವಣೆ ಸ್ಪರ್ಧಿಸಿ ಗೆದ್ದರೆ ಬಳ್ಳಾರಿ ಬಿಟ್ಟು ಹೋಗುತ್ತೆನೆ. ಬಾಯಿಗೆ ಬಂದಂತೆ ಮಾತಾಡುವುದು ಬಿಟ್ಡು ಧೈರ್ಯ ಇದ್ದರೆ ಚುನಾವಣೆ ಎದುರಿಸಲಿ ಎಂದು ಸವಾಲೆಸೆದರು.

ರಾಮುಲು ಗಾಜಿನ ಮನೆಯಲ್ಲಿ ಇದ್ದಾರೆ. ಎಚ್ಚರಿಕೆಯಿಂದ ಮಾತಾಡಬೇಕು. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರುತ್ತದೆ ಎಂಬ ಭ್ರಮೆಯಿಂದ ಈ ರೀತಿ ಮಾತಾಡುತ್ತಿದ್ದಾರೆ. ಅದು ಅವರ ಕನಸು ಎಂದಿಗೂ ನನಸಾಗಲ್ಲ. ಜಿಲ್ಲೆಯಿಂದ ಮೊದಲ ಬಾರಿಗೆ ಆರೋಗ್ಯ ಮಂತ್ರಿಯಾಗದ್ದ ಅವರು ಜಿಲ್ಲೆಯ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ ಎಂದಾಗ ಜನರಿಗೆ ಉತ್ತರ ಕೊಟ್ಟಿಲ್ಲ. ವಿಧಾನಸಭೆಯಲ್ಲಿ ಆ ಬಗ್ಗೆ ಒಮ್ಮೆಯೂ ಮಾತನಾಡಿಲ್ಲ ಎಂದು ದೂಷಿಸಿದರು.

ಜಿಲ್ಲೆಗೆ ಉಪಚುನಾವಣೆ ಅವಶ್ಯಕತೆ ಇಲ್ಲ. ಒಮ್ಮೆ ಲೋಕಸಭೆ ಮತ್ತು ಎರಡು ಬಾರಿ ವಿಧಾನಸಭೆಗೆ ರಾಜಿನಾಮೆ ನೀಡಿ ಪದೆ ಪದೆ ಅಧಿಕಾರಕ್ಕಾಗಿ ಚುನಾಚಣಾ ಖಯಾಲಿ ಬೆಳೆಸಿಕೊಂಡಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲಿನ ಭೀತಿ ಇಲ್ಲಾ, ಭ್ರಮೆಯಲ್ಲಿರುವ ಬಿಜೆಪಿಗೆ ಸೋಲು ಖಚಿತ. ಅಭ್ಯರ್ಥಿ ಆಯ್ಕೆ ಕಗ್ಗಂಟು ವಿಚಾರ ಬಗೆಹರಿದು ಇಂದು ಮಧ್ಯಾಹ್ನದ ವೇಳೆಗೆ ಸೂಕ್ತ ಆಭ್ಯರ್ಥಿ ಆಯ್ಕೆ ಘೋಷಣೆಯಾಗಲಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಾಜ್ಯದ ನಾಯಕರಿಗೆ‌ ಮಾಹಿತಿ ನೀಡಿದ್ದೇವೆ. ಜಿಲ್ಲೆಯ ಕಾಂಗ್ರೆಸ್ ಶಾಸಕರು ಯಾರೂ ಮುನಿಸಿಕೊಂಡಿಲ್ಲ ಎಲ್ಲರೂ ಡಿಕೆಶಿ ಸಂಪರ್ಕದಲ್ಲಿದ್ದಾರೆ. ತಮ್ಮ ವೈಯಕ್ತಿಕ ಕಾರಣಗಳಿಂದ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಒಟ್ಟಾಗಿ ಚುನಾವಣೆ ಎದುರಿಸಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ರಾಮುಲು ಶೀಘ್ರ ಜೈಲಿಗೆ!
ಆಕುಲ ಲಕ್ಷಮ್ಮ ಅವರ 27 ಎಕರೆ ಭೂಮಿ ಕಬಳಿಸಿರುವ ಪ್ರಕರಣದಲ್ಲಿ ರಾಮುಲು ಜೈಲು ಸೇರಲಿದ್ದಾರೆ ಎಂದು ಜೆ.ಎಸ್.ಆಂಜನೇಯುಲು ಹೇಳಿದರು.

ಶ್ರೀರಾಮುಲು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಭೂಕಬಳಿಕೆ ಮಾಡಿದ್ದಾರೆ. ಲಕ್ಷಮ್ಮ ಅವರು ಲೋಕಾಯುಕ್ತ ನ್ಯಾಯಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದು ಅವರಿಗೆ ಮುಳುವಾಗಲಿದೆ. ಪದೆಬಪದೆ ಡಿಕೆಶಿಯನ್ನು ಜೈಲಿಗೆ ಕಳಿಸುತ್ತೇವೆ ಎಂದು ಬಾಯಿ ಬಡಿದುಕೊಳ್ಳುತ್ತಿರುವ ರಾಮುಲು ಅವರೆ ಜೈಲು ಪಾಲಾಗಲಿದ್ದಾರೆ ಎಂದು ಕುಟುಕಿದರು.

ಸುದ್ದಿಗೋಷ್ಟಿಯಲ್ಲಿ ಪಾಲಿಕೆ ಸದಸ್ಯ ಬಿ.ಕುಮಾರಸ್ವಾಮಿ, ಮುಖಂಡರಾದ ಪಿ.ಎಸ್.ಘನಮಲ್ಲನಗೌಡ, ಸರಗು ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.