ADVERTISEMENT

ಜಿಲ್ಲಾ ಕೇಂದ್ರವಾಗಿ ಹೊಸಪೇಟೆ: ಗಗನಕ್ಕೇರಿದ ನಿವೇಶನ, ಕೃಷಿ ಬೆಲೆ

ಹೊಸಪೇಟೆ ಜಿಲ್ಲಾ ಕೇಂದ್ರವಾದ ನಂತರ ಜಮೀನಿನ ಬೆಲೆ ಭಾರಿ ಜಿಗಿತ; ಗರಿಗೆದರಿದ ರಿಯಲ್‌ ಎಸ್ಟೇಟ್‌

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 10:29 IST
Last Updated 15 ಸೆಪ್ಟೆಂಬರ್ 2022, 10:29 IST
ಜೋಳದರಾಶಿ ಗುಡ್ಡದ ಮೇಲಿನಿಂದ ಹೊಸಪೇಟೆ ನಗರದ ಪಕ್ಷಿನೋಟ ಪ್ರಜಾವಾಣಿ ಚಿತ್ರ: ಶಶಿಕಾಂತ ಎಸ್‌. ಶೆಂಬೆಳ್ಳಿ
ಜೋಳದರಾಶಿ ಗುಡ್ಡದ ಮೇಲಿನಿಂದ ಹೊಸಪೇಟೆ ನಗರದ ಪಕ್ಷಿನೋಟ ಪ್ರಜಾವಾಣಿ ಚಿತ್ರ: ಶಶಿಕಾಂತ ಎಸ್‌. ಶೆಂಬೆಳ್ಳಿ   

ಹೊಸಪೇಟೆ: ಹೊಸಪೇಟೆ ನಗರವು ವಿಜಯನಗರ ಜಿಲ್ಲಾ ಕೇಂದ್ರ ಸ್ಥಾನವಾದ ನಂತರ ಜಮೀನಿಗೆ ಬಂಗಾರದ ಬೆಲೆ ಬಂದಿದ್ದು, ಸಹಜವಾಗಿಯೇ ನಿವೇಶನ, ಕೃಷಿ ಜಮೀನಿನ ಮೌಲ್ಯ ಭಾರಿ ಜಿಗಿತ ಕಂಡಿದೆ.

ಈ ಚಿನ್ನದ ಜಮೀನಿನ ಮೇಲೆ ಹಲವರ ಕೆಂಗಣ್ಣು ಬಿದ್ದಿದ್ದು, ಭೂಕಬಳಿಕೆ ಪ್ರಕರಣಗಳು ಒಂದಾದ ನಂತರ ಒಂದು ಬೆಳಕಿಗೆ ಬರುತ್ತಿವೆ. ಇದು ಹೊಸಪೇಟೆ ನಗರಕ್ಕಷ್ಟೇ ಸೀಮಿತವಾಗಿಲ್ಲ. ಉಳಿದ ತಾಲ್ಲೂಕು ಕೇಂದ್ರಗಳಲ್ಲೂ ಇದೇ ಪರಿಸ್ಥಿತಿ ಇದ್ದು, ಭೂ ಒತ್ತುವರಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಜೀವನವಿಡೀ ಗಳಿಸಿದ ಹಣದಿಂದ ಸಣ್ಣದೊಂದು ನಿವೇಶನ ಖರೀದಿಸಿ ಪುಟ್ಟ ‘ಗೂಡು’ ಕಟ್ಟಬೇಕೆನ್ನುವುದು ಬಹುತೇಕರ ಆಸೆಯಾಗಿರುತ್ತದೆ. ಆದರೆ, ಬೆಲೆ ಹೆಚ್ಚಳದಿಂದ ಕನಸು ಅದುಮಿಟ್ಟುಕೊಳ್ಳುವಂತಾಗಿದೆ. ಬಾಡಿಗೆ ಮನೆಯಲ್ಲೇ ಕಾಲ ಕಳೆಯಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿದೆ.

ADVERTISEMENT

2019ರ ನಿಯಮದ ಪ್ರಕಾರವೇ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನಿವೇಶನ, ಕೃಷಿ ಭೂಮಿಯ ದರ ನಿಗದಿಪಡಿಸಲಾಗಿದೆ. ಆದರೆ, ವಾಸ್ತವ ಬೆಲೆ ನೋಡಿದರೆ ಯಾವ ಹಂತದಲ್ಲೂ ಅದಕ್ಕೆ ತಾಳೆ ಆಗುವುದಿಲ್ಲ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಆದರೆ, ಹೊಸಪೇಟೆ ಒಂದು ಹೆಜ್ಜೆ ಮುಂದೆ ಎನ್ನಬಹುದು. ಒಂದೂವರೆ ವರ್ಷದ ಹಿಂದೆ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ಭೂಮಿ ಬೆಲೆ ಭಾರಿ ಏರಿಕೆ ಆಗಿದ್ದು, ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಚುರುಕಿನಿಂದ ಚಟುವಟಿಕೆಗಳು ನಡೆಯುತ್ತಿವೆ.

ಜಿಲ್ಲಾ ಕೇಂದ್ರ ಹೊಸಪೇಟೆ ನಾಲ್ಕೂ ದಿಕ್ಕುಗಳಲ್ಲಿ ಸರಿಸಮನಾಗಿ ಬೆಳೆಯುವುದಕ್ಕೆ ಅವಕಾಶಗಳಿಲ್ಲ. ಒಂದು ಕಡೆ ತುಂಗಭದ್ರಾ ನದಿ, ಇನ್ನೊಂದು ಕಡೆ ತುಂಗಭದ್ರಾ ಜಲಾಶಯ, ಮತ್ತೊಂದು ಕಡೆ ವಿಶ್ವ ಪ್ರಸಿದ್ಧ ಹಂಪಿಯಿದ್ದು, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೇಕಾಬಿಟ್ಟಿ ಕಟ್ಟಡ, ವಾಣಿಜ್ಯ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಬಳ್ಳಾರಿ ರಸ್ತೆಯ ಕಡೆಗಷ್ಟೇ ನಗರ ಬೆಳೆಯುವುದಕ್ಕೆ ಅವಕಾಶಗಳಿವೆ. ಸಹಜವಾಗಿಯೇ ನಗರದೊಳಗೆ ಹಾಗೂ ನಗರಕ್ಕೆ ಹೊಂದಿಕೊಂಡಿರುವ ಈಗಿನ ಜಮೀನಿಗೆ ಭಾರಿ ಬೆಲೆ ಬರುವುದಕ್ಕೆ ಮುಖ್ಯ ಕಾರಣ.

ಇನ್ನು, ಭವಿಷ್ಯದಲ್ಲಿ ಜಿಲ್ಲಾ ಕೇಂದ್ರ ಬೆಳವಣಿಗೆಗೆ ಹೆಚ್ಚಿನ ಅವಕಾಶಗಳು ಇರುವುದರಿಂದ ಸಿರಿವಂತರು ಜಮೀನಿನ ಮೇಲೆ ಹೆಚ್ಚಿನ ಹಣ ಹೂಡಿಕೆ ಮಾಡುತ್ತಿದ್ದಾರೆ. ಕೃತಕವಾಗಿ ಬೆಲೆ ಹೆಚ್ಚಿಸುತ್ತಿರುವುದರಿಂದ ಜನಸಾಮಾನ್ಯರು ಖರೀದಿ ಮಾಡಲಾರದಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪಗಳು ಸಾಮಾನ್ಯ ಸಂಗತಿ.

ಬಾಡಿಗೆಯೂ ಹೆಚ್ಚಳ

ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ನಿವೇಶನ, ಕೃಷಿ ಜಮೀನಿನ ಬೆಲೆಯಷ್ಟೇ ಅಲ್ಲ, ಖಾಲಿ ಜಾಗ, ಮಳಿಗೆ ಹಾಗೂ ಕಟ್ಟಡ, ಮನೆಗಳ ಬಾಡಿಗೆಯಲ್ಲಿ ಏಕಾಏಕಿ ಹೆಚ್ಚಳವಾಗಿದೆ.

ನಗರದ ಮಧ್ಯ ಭಾಗದಲ್ಲಿ ಒಂದು ಶಟರ್‌ ಹೊಂದಿರುವ 10X10 ಅಡಿ ಮಳಿಗೆಗೆ ಈ ಹಿಂದೆ ₹10 ಸಾವಿರ ಬಾಡಿಗೆ ಇತ್ತು. ಈಗ ಅದು ದುಪ್ಪಟ್ಟಾಗಿದೆ. ಮೂರರಿಂದ ನಾಲ್ಕು ಸಾವಿರಕ್ಕೆ ಸಿಗುತ್ತಿದ್ದ ಸಿಂಗಲ್ ಬೆಡ್‌ ರೂಂ ಮನೆ ಈಗ ₹5ರಿಂದ ₹6ಕ್ಕೆ ಸಾವಿರಕ್ಕೆ ಏರಿಕೆಯಾಗಿದೆ.

‘ಬಾಡಿಗೆ ಏಕಾಏಕಿ ಹೆಚ್ಚಿಸಿರುವುದರಿಂದ ಬಹಳ ಸಮಸ್ಯೆಯಾಗುತ್ತಿದೆ. ಕೋವಿಡ್‌ನಿಂದ ಎರಡು ವರ್ಷ ವ್ಯವಹಾರ ನಡೆದಿಲ್ಲ. ಈಗಷ್ಟೇ ಮಾರುಕಟ್ಟೆ ಸಹಜ ಸ್ಥಿತಿಗೆ ಬರುತ್ತಿದೆ. ಇಂಥದ್ದರಲ್ಲಿ ಬಾಡಿಗೆ ಹೆಚ್ಚಿಸಿದರೆ ಜನಸಾಮಾನ್ಯರಿಗೆಲ್ಲ ಭಾರಿ ಹೊರೆ. ಮೊದಲೇ ಪ್ರತಿಯೊಂದು ವಸ್ತುವಿನ ಬೆಲೆ ಗಗನಕ್ಕೇರಿರುವುದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲಾ ಕೇಂದ್ರವಾದ ನಂತರ ಮಳಿಗೆ, ಮನೆ ಬಾಡಿಗೆ ಹೆಚ್ಚಳವಾಗಿರುವುದರಿಂದ ಎಲ್ಲರೂ ಬಹಳ ಸಂಕಷ್ಟಕ್ಕೆ ಒಳಗಾಗಿದ್ದಾರೆ’ ಎಂದು ಟ್ರಾವೆಲ್ಸ್‌ ಏಜೆನ್ಸಿ ಮಾಲೀಕ ಶ್ರೀಧರ್‌ ತಿಳಿಸಿದರು.


ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ನಿವೇಶನ, ಕೃಷಿ ಜಮೀನಿನ ಉಪನೋಂದಣಾಧಿಕಾರಿ ಕಚೇರಿಯ ಸದ್ಯದ ಮೌಲ್ಯ (2019ರ ನಿಯಮದ ಪ್ರಕಾರ)

ನಿವೇಶನ; ಬೆಲೆ

ಪ್ರತಿ ಚದರ ಅಡಿಗೆ ₹500 ರಿಂದ ₹600

ಕೃಷಿ ಜಮೀನು; ಬೆಲೆ

ಪ್ರತಿ ಎಕರೆಗೆ ₹20 ರಿಂದ ₹22 ಲಕ್ಷ

ಹೊಸಪೇಟೆ ಜಿಲ್ಲಾ ಕೇಂದ್ರವಾದ ನಂತರ ನಿವೇಶನ, ಕೃಷಿ ಜಮೀನಿನ ಸದ್ಯದ ಮೌಲ್ಯದ

ನಿವೇಶನ; ಬೆಲೆ

ಪ್ರತಿ ಚದರ ಅಡಿಗೆ; ₹3,000 ದಿಂದ ₹4,000

ಕೃಷಿ ಜಮೀನು; ಬೆಲೆ

ಪ್ರತಿ ಎಕರೆಗೆ; ₹2.5ರಿಂದ ₹3 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.