ಬಳ್ಳಾರಿ: ‘ಸಮಸ್ಯೆ ಎನ್ನುವುದು ಸಂಶೋಧನೆಯ ಬೀಜ. ಪ್ರತಿಯೊಂದು ಸಮಸ್ಯೆಯೂ ಹೊಸ ಆವಿಷ್ಕಾರಕ್ಕೆ ದಾರಿಯಾಗಬಲ್ಲದು’ ಎಂದು ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ (ಇಂಡಿಯಾ), ಮುನಿರಾಬಾದ್ ಕೇಂದ್ರದ ಅಧ್ಯಕ್ಷ ಡಾ.ಎಸ್.ಎಂ.ಶಶಿಧರ ಅಭಿಪ್ರಾಯಪಟ್ಟರು.
ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ (ಆರ್‌ವೈಎಂಇಸಿ) ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗ ಮತ್ತು ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ (ಇಂಡಿಯಾ), ಮುನಿರಾಬಾದ್ ಕೇಂದ್ರದ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ಮೂರು ದಿನಗಳ ‘ಸಂಶೋಧನಾ ವಿಧಾನಗಳು’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಪರಿಸರ ಮಾಲಿನ್ಯದಂತಹ ಸಮಸ್ಯೆಗಳು ಎಲೆಕ್ಟ್ರಿಕ್ ವಾಹನಗಳ ಸಂಶೋಧನೆಗೆ ದಾರಿಯಾದವು. ಅಂಗವಿಕಲರಿಗೆ ನಡೆದಾಡುವ ಕಷ್ಟವನ್ನು ಪರಿಹರಿಸಲು ವೀಲ್‌ಚೇರ್ ಸಂಶೋಧನೆಯಾಯಿತು. ಪ್ರತಿಯೊಂದು ಆವಿಷ್ಕಾರವೂ ಸಮಸ್ಯೆಯಿಂದ ಹುಟ್ಟುತ್ತದೆ. ಸಂಶೋಧನೆ ಎಂದರೆ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಹಿಡಿಯುವ ಕಲೆಯಾಗಿದೆ. ಸಂಶೋಧನಾ ಮನೋಭಾವವಿಲ್ಲದ ಎಂಜಿನಿಯರ್ ಎಂಜಿನ್ ಇಲ್ಲದ ವಾಹನದಂತೆ’ ಎಂದು ಡಾ.ಎಸ್.ಎಂ.ಶಶಿಧರ ಹೇಳಿದರು.
ಇನ್‌ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ ಕಾರ್ಯದರ್ಶಿ ಡಾ.ಪಿ.ಶರತ್ ಕುಮಾರ್ ಮಾತನಾಡಿ, ‘ಸಂಶೋಧನೆಗೆ ನೆರವು ನೀಡುವ ಅನೇಕ ಸಂಸ್ಥೆಗಳಿವೆ. ಅವುಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳ ಪ್ರಾಜೆಕ್ಟ್‌ಗಳು ಕೇವಲ ಅಂಕಗಳಿಗಾಗಿ ಇರಬಾರದು. ಅವು ಭವಿಷ್ಯದ ತಂತ್ರಜ್ಞಾನದ ತಳಹದಿಯಾಗಬೇಕು’ ಎಂದರು.
ಉಪ ಪ್ರಾಚಾರ್ಯೆ ಸವಿತಾ ಸೋನೋಳಿ ಮಾತನಾಡಿ, ‘ಇಂತಹ ಕಾರ್ಯಾಗಾರಗಳು ಯುವ ಸಂಶೋಧಕರಿಗೆ ದಾರಿದೀಪವಾಗುತ್ತವೆ. ಸಂಶೋಧನೆಯ ಅವಕಾಶಗಳು ಎಲ್ಲೆಡೆ ಇವೆ. ಆದರೆ ಅವುಗಳನ್ನು ಗುರುತಿಸಲು ಆವಿಷ್ಕಾರಕ ದೃಷ್ಟಿಯ ಅಗತ್ಯವಿದೆ’ ಎಂದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ, ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಡಾ. ಕಮ್ಮಾರ ಕಿಶೋರ್ ಕುಮಾರ್ ಹಾಗೂ ಮೆಕಾನಿಕಲ್ ವಿಭಾಗದ ಪ್ರಾಧ್ಯಾಪಕ ಡಾ.ವೀರಭದ್ರಪ್ಪ ಆಲಗೂರು ಮಾತನಾಡಿದರು. ಕೀರ್ತನಾ ಪ್ರಾರ್ಥನೆ ಸಲ್ಲಿಸಿದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಕೋರಿ ನಾಗರಾಜ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಚಂದ್ರಗೌಡ ಕಾರ್ಯಕ್ರಮ ನಿರೂಪಿಸಿದರು. ಕೆ.ಮಂಜುನಾಥ ಮತ್ತು ಎಂ.ಬಾಲಾಜಿ ಪರಿಚಯಿಸಿದರು. ಅಚ್ಯುತಾನಂದ ಕೆ.ಬಿ. ವಂದನಾರ್ಪಣೆ ಸಲ್ಲಿಸಿದರು. ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.