ADVERTISEMENT

ರೈತರ ಸಮಸ್ಯೆಗೂ ಸ್ಪಂದಿಸಿ: ತಿಮ್ಮನಗೌಡ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 14:25 IST
Last Updated 1 ಜೂನ್ 2025, 14:25 IST
ಕುರುಗೋಡಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ತಿಮ್ಮನಗೌಡ ಮಾತನಾಡಿದರು
ಕುರುಗೋಡಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ತಿಮ್ಮನಗೌಡ ಮಾತನಾಡಿದರು   

ಕುರುಗೋಡು: ‘ಕೃಷಿ ಪರಿಕರಗಳ ಮಾರಾಟಗಾರರ ನ್ಯಾಯಯುತ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ದೊರಕಿಸಿಕೊಡಲು ಶ್ರಮಿಸುವೆ’ ಎಂದು ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ತಿಮ್ಮನಗೌಡ ಅವರು ಭರವಸೆ ನೀಡಿದರು.

ಪಟ್ಟಣದಲ್ಲಿ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ತಾಲ್ಲೂಕು ಘಟಕದ ವತಿಯಿಂದ ಎಚ್.ತಿಮ್ಮನಗೌಡ ಅವರಿಗೆ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೃಷಿ ಪರಿಕರಗಳ ಮಾರಾಟಗಾರರು ವಸ್ತುಗಳ ಉತ್ಪಾದಕರಲ್ಲ. ಅವರು ಕೇವಲ ಮಾರಾಟಗಾರರು. ಆದರೂ ಕೆಲವು ಸಂದರ್ಭಗಳಲ್ಲಿ ರೈತರು ಮಾರಾಟಗಾರರ ಮೇಲೆ ಮುಗಿಬೀಳುತ್ತಾರೆ. ಆ ಸಂದರ್ಭದಲ್ಲಿ ಧೃತಿಗೆಡದೆ ದೈರ್ಯದಿಂದ ಸಮಸ್ಯೆ ಎದುರಿಸಬೇಕು. ನಿಜವಾಗಿ ರೈತರಿಗೆ ಅನ್ಯಾಯವಾಗಿದ್ದರೆ ಅವರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಜಿಲ್ಲಾ ಘಟಕದ ನಿರ್ದೇಶಕರಾದ ಅರಿವಿ ಶರಣಪ್ಪ ಮತ್ತು ಹಾವಿನಹಾಳು ಶರಣಪ್ಪ ಮಾತನಾಡಿ, ‘ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ವಸ್ತುಗಳ ಉತ್ಪಾದನಾ ಕೇಂದ್ರಗಳಲ್ಲಿಯೇ ಕೆಲವು ದೋಷವಾಗಿರುತ್ತವೆ. ರೈತರು ಮಾರಾಟಗಾರರನ್ನು ಅಪರಾಧಿಗಳಾಗಿ ನೋಡುತ್ತಾರೆ. ಅಂಥ ಸಂದರ್ಭದಲ್ಲಿ ಜಿಲ್ಲಾ ಸಂಘ ವರ್ತಕರ ರಕ್ಷಣೆಗೆ ಬರಬೇಕು’ ಎಂದು ಮನವಿ ಮಾಡಿದರು.

ಸಿಂಧಿಗೇರಿ ಗಾದಿಲಿಂಗಪ್ಪ, ಅಗ್ರಿ ಎಂಪ್ಲಾಯಿಸ್ ಅಸೋಷಿಯೇಷನ್ ಜಿಲ್ಲಾ ಘಟಕ ಅಧ್ಯಕ್ಷ ಚವ್ಹಾಣ್ ಮಾತನಾಡಿದರು.

ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಕುರಿ ಹನುಮಣ್ಣ ಪ್ರಸ್ತಾವಿಕ ಮಾತನಾಡಿದರು.

ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾ ಘಟಕದ ನಿರ್ದೇಶಕರಾದ ದೊಡ್ಡನಗೌಡ, ಸೋಮಲಾಪುರ ವೀರೇಶ್, ಚಾನಾಳು ರಾಮಣ್ಣ, ಅರಿವಿ ಶರಣಪ್ಪ, ಹಾವಿನಹಾಳ್ ಶರಣಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎಚ್. ಶೇಖರ್, ಸುರೇಶ್, ನಿರಂಜನ, ಸಾಗಪ್ಪ, ಗಾದಿಲಿಂಗಪ್ಪ ಮತ್ತು ಕೆ.ಸುರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.