ADVERTISEMENT

ಊರೂ ಮಲೀನ, ನದಿಯೂ ಮಲೀನ

ಬ್ಯಾಲಹುಣ್ಸಿಯಲ್ಲಿ ಮಡುಗಟ್ಟಿ ನಿಂತಿರುವ ತ್ಯಾಜ್ಯದ ಗುಂಡಿ

ಕೆ.ಸೋಮಶೇಖರ
Published 26 ಮೇ 2019, 19:50 IST
Last Updated 26 ಮೇ 2019, 19:50 IST
ಬ್ಯಾಲಹುಣ್ಸಿಯ ಹರಿಜನ ಕಾಲೊನಿಯಲ್ಲಿ ಜನ ಓಡಾಡುವ ರಸ್ತೆಯಲ್ಲಿ ಚರಂಡಿ ಹೊಲಸು ಹರಿಯುತ್ತಿರುವುದು
ಬ್ಯಾಲಹುಣ್ಸಿಯ ಹರಿಜನ ಕಾಲೊನಿಯಲ್ಲಿ ಜನ ಓಡಾಡುವ ರಸ್ತೆಯಲ್ಲಿ ಚರಂಡಿ ಹೊಲಸು ಹರಿಯುತ್ತಿರುವುದು   

ಹೂವಿನಹಡಗಲಿ: ತಾಲ್ಲೂಕಿನ ಬ್ಯಾಲಹುಣ್ಸಿ ಗ್ರಾಮದ ಹರಿಜನ ಕಾಲೊನಿಯ ಹತ್ತಿರ ಚರಂಡಿ ತ್ಯಾಜ್ಯ ಮಡುಗಟ್ಟಿ ನಿಂತಿದೆ. ಇದನ್ನು ಹೊರಗೆ ಸಾಗಿಸಿದರೆ ತುಂಗಭದ್ರಾ ನದಿ ಮಲೀನವಾಗುತ್ತದೆ, ಹಾಗೆಯೇ ಬಿಟ್ಟರೆ ಜನವಸತಿ ಕೊಳಚೆ ಪ್ರದೇಶವಾಗಿ ಮಾರ್ಪಡುತ್ತದೆ.

ಮಕರಬ್ಬಿ ಗ್ರಾಮ ಪಂಚಾಯಿತಿಯವರು ಬ್ಯಾಲಹುಣ್ಸಿ ಎಸ್ಸಿ ಕಾಲೊನಿಯ ತ್ಯಾಜ್ಯ ಗುಂಡಿಯ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವ ಬದಲು ತಾತ್ಕಾಲಿಕ ಕ್ರಮ ಕೈಗೊಳ್ಳುತ್ತಿರುವುದರಿಂದ ಅಲ್ಲಿ ನಾನಾ ರೀತಿಯ ಸಮಸ್ಯೆಗಳು ಉಂಟಾಗುತ್ತಿವೆ.

ಬ್ಯಾಲಹುಣ್ಸಿ ಗ್ರಾಮದ ಚರಂಡಿ ತ್ಯಾಜ್ಯ ಮತ್ತು ಸಾರ್ವಜನಿಕ ನಳಗಳಿಂದ ಪೋಲಾಗುವ ನೀರು ತಗ್ಗು ಪ್ರದೇಶವಾದ ಹರಿಜನ ಕಾಲೊನಿಯತ್ತ ಹರಿಯುತ್ತಿದೆ. ಇಲ್ಲಿ ತ್ಯಾಜ್ಯದ ಕಂದಕ ನಿರ್ಮಾಣವಾಗಿದ್ದು, ಕೊಳಚೆ ನೀರು ಬೇರೆಡೆ ಹರಿಯಲು ಮಾರ್ಗಗಳಿಲ್ಲದೇ ಗುಂಡಿಯಲ್ಲಿ ಸಂಗ್ರಹಗೊಂಡು ಗಬ್ಬು ನಾರುತ್ತಿದೆ. ಈ ಸಮಸ್ಯೆಯಿಂದ ಅಲ್ಲಿನ ಇಡೀ ಪರಿಸರ ಹದಗೆಟ್ಟಿದೆ.

ADVERTISEMENT

ಈ ಸಮಸ್ಯೆ ಬಗೆಹರಿಸುವಂತೆ ನಿವಾಸಿಗಳು ಗ್ರಾಮ ಪಂಚಾಯಿತಿಯವರಿಗೆ ತಿಳಿಸಿದರೆ, ಚರಂಡಿ ತ್ಯಾಜ್ಯವನ್ನು ಪಂಚಾಯಿತಿಯವರು ಮೋಟಾರ್‌ ಮೂಲಕ ಸನಿಹದ ತುಂಗಭದ್ರಾ ನದಿಗೆ ಹರಿಸುತ್ತಾರೆ. ಇದರಿಂದ ನದಿ ಮಲೀನವಾಗುವುದಲ್ಲದೇ ಜನವಸತಿ ಪ್ರದೇಶ ಮಲೀನವಾಗುವುದು ತಪ್ಪದಂತಾಗಿದೆ.

‘ಗ್ರಾಮ ಪಂಚಾಯಿತಿಯವರು ತ್ಯಾಜ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬದಲು ತಾತ್ಕಾಲಿಕ ಕ್ರಮ ಕೈಗೊಳ್ಳುತ್ತಿರುವುದರಿಂದ ಒಂದು ಸಮಸ್ಯೆಯ ಬದಲಿಗೆ ಮತ್ತೊಂದು ಸಮಸ್ಯೆ ಸೃಷ್ಟಿಸುತ್ತಿದ್ದಾರೆ’ ಎಂದು ನಿವಾಸಿಗಳು ದೂರುತ್ತಿದ್ದಾರೆ.

ನದಿಯಲ್ಲಿರುವ ಅಲ್ಪ ಪ್ರಮಾಣದ ನೀರು ನದಿ ತೀರದ ಅನೇಕ ಹಳ್ಳಿಗಳ ಕುಡಿಯುವ ನೀರಿಗೆ ಆಸರೆಯಾಗಿದೆ. ಬಹುಗ್ರಾಮ ಯೋಜನೆಗಳ ಮೂಲಕ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಈ ರೀತಿ ನದಿಗೆ ತ್ಯಾಜ್ಯ ಹರಿಸುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಪಾಚಿಗಟ್ಟಿದ ಕೊಳಚೆ ನೀರು ತಿಂಗಳುಗಟ್ಟಲೇ ಗುಂಡಿಯಲ್ಲಿ ನಿಲ್ಲುವುದರಿಂದ ಅಲ್ಲಿನ ಪರಿಸರ ದುರ್ವಾಸನೆ ಬೀರುತ್ತಿದೆ. ಸೊಳ್ಳೆ, ಕ್ರಿಮಿ ಕೀಟಗಳ ಹಾವಳಿಯಿಂದ ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಸಂಬಂಧಿಸಿದವರು ಸ್ವಚ್ಛತೆಗೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

‘ಈ ಹಿಂದೆ ಇಲ್ಲಿ ವೈಜ್ಞಾನಿಕ ರೀತಿಯಲ್ಲಿ ಚರಂಡಿ ನಿರ್ಮಿಸುವ ಬದಲು ತ್ಯಾಜ್ಯವನ್ನು ನದಿಯ ಕಡೆ ಸಾಗಿಸಲು ಪೈಪ್‌ಲೈನ್‌ ಅಳವಡಿಸಿರುವುದು ಸಮಸ್ಯೆಗೆ ಮೂಲವಾಗಿದೆ. ಮಳೆಗಾಲ ಆರಂಭವಾದರೆ ಈ ಸಮಸ್ಯೆ ಮತ್ತಷ್ಟೂ ಬಿಗಡಾಯಿಸಲಿದೆ. ಮಳೆ ನೀರು ಮತ್ತು ಚರಂಡಿ ತ್ಯಾಜ್ಯ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನುಗ್ಗುತ್ತದೆ. ಈ ಸಮಸ್ಯೆ ಬಗೆಹರಿಸುವಂತೆ ಪಂಚಾಯಿತಿಯವರಿಗೆ ಅನೇಕ ಬಾರಿ ತಿಳಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮದ ಯುವಕ ಲಕ್ಷ್ಮಣ, ಬಸವರಾಜ ತಳವಾರ ಅಸಮಾಧಾನ ವ್ಯಕ್ತಪಡಿಸಿದರು.

‘ಎಸ್ಸಿ, ಎಸ್ಟಿ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಕೋಟ್ಯಂತರ ಹಣ ಬಿಡುಗಡೆಯಾಗುತ್ತಿದ್ದರೂ ಮೂಲೆಕಟ್ಟಿನ ಹಳ್ಳಿಗಳಿಗೆ ತಲುಪುತ್ತಿಲ್ಲ. ಕೂಡಲೇ ಸಂಬಂಧಿಸಿದವರು ಇತ್ತ ಗಮನಹರಿಸಿ ತ್ಯಾಜದ ಗುಂಡಿಯನ್ನು ಮುಚ್ಚುವ ಜತೆಗೆ ವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿಕೊಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.