ಕುರುಗೋಡು: ತಾಲ್ಲೂಕು ಕೇಂದ್ರವಾಗಿ ಮೇಲ್ದರ್ಜೆಗೇರಿ ಹಲವು ವರ್ಷ ಕಳೆದರೂ ಸುಸಜ್ಜಿತ ಮಾರುಕಟ್ಟೆ ಇಲ್ಲದ ಪರಿಣಾಮ ಕುರುಗೋಡಿನಲ್ಲಿ ತರಕಾರಿ ವ್ಯಾಪಾರಿಗಳಿಗಳು ಪಾದಾಚಾರಿ ರಸ್ತೆ ಅವಲಂಬಿಸಬೇಕಾಗಿದೆ.
ಸೂಕ್ತ ಸ್ಥಳದ ಕೊರತೆಯಿಂದ ತರಕಾರಿ, ಹಣ್ಣು, ದವಸ ಧಾನ್ಯಗಳ ವರ್ತಕರಿಗೆ ಮುಖ್ಯವೃತ್ತ ದಿಂದ ಗೆಣಿಕೆಹಾಳು ರಸ್ತೆಯ ವರೆಗಿನ ಪಾದಾಚಾರಿ ರಸ್ತೆ ಅತಿಕ್ರಮಣ ಅನಿವಾರ್ಯವಾಗಿದೆ.
ನಿತ್ಯದ ಸಂತೆ ಮತ್ತು ಪ್ರತಿ ಗುರುವಾರ ಜರುಗುವ ವಾರದ ಸಂತೆಯಲ್ಲಿ ಪಾದಾಚಾರಿ ರಸ್ತೆಯಲ್ಲಿ ವಹಿವಾಟು ನಡೆಸುವುದರಿಂದ ತರಕಾರಿ, ಹಣ್ಣು ಮತ್ತು ಹೂಗೆ ದೂಳಿನ ಮಜ್ಜನವಾಗುತ್ತಿದೆ.
ಸೂಕ್ತ ರಕ್ಷಣೆಯಿಲ್ಲದ ಪರಿಣಾಮ ವರ್ತಕರು ಬಿಸಿಲು ಮತ್ತು ದೂಳಿನ ಮಧ್ಯೆ ವ್ಯಾಪಾರ ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ತರಕಾರಿ, ಹಣ್ಣು, ಹೂ, ದವಸ ಧಾನ್ಯ ಖರೀದಿಗೆ ಬರುವ ಗ್ರಾಹಕರು ಸಂಚಾರ ದಟ್ಟಣೆಯಿಂದ ಉಂಟಾಗುವ ಧೂಳಿನ ಸಮಸ್ಯೆ ಎದುರಿಸಬೇಕಾಗಿದೆ.
ವಹಿವಾಟು ನಡೆಯುವ ರಸ್ತೆಯ ಮೂಲಕ ಗೆಣಿಕೆಹಾಳು, ಬಸವಪುರ, ಕ್ಯಾದಿಗೆಹಾಳು, ಕೊಂಚಿಗೇರಿ, ಸಿರಿಗೇರಿ, ಸಿರುಗುಪ್ಪಕ್ಕೆ ಸಂಚರಿಸುವ ವಾಹನಗಳ ಸಂಚಾರ ದಟ್ಟಣೆಯಿಂದ ಗ್ರಾಹಕರು ತೊಂದರೆ ಎದುರಿಸುತ್ತಿದ್ದಾರೆ. ವಾಹನ ಸಂಚಾರದ ಮಧ್ಯೆ ಬಿಡಾಡಿ ದನಗಳ ಹಾವಳಿಯೂ ವರ್ತಕರು ಮತ್ತು ಗ್ರಾಹಕರನ್ನು ಕಾಡುತ್ತಿದೆ. ರೊಚ್ಚಿಗೆದ್ದ ಬಿಡಾಡಿ ದನಗಳು ಕಾದಾಟಕ್ಕಿಳಿದ ಸಂದರ್ಭದಲ್ಲಿ ಜನರ ಮೇಲೆ ಎರಗಿ ಕೈಕಾಲು ಮುರಿದುಕೊಂಡ ಘಟನೆಗಳು ಜರುಗಿವೆ.
ವಾರದ ಮತ್ತು ದಿನದ ಮಾರುಕಟ್ಟೆಯಿಂದ ವಾರ್ಷಿಕ ಲಕ್ಷಂತರ ರೂಪಾಯಿ ವಹಿವಾಟು ನಡೆದರೂ, ವರ್ತಕರಿಗೆ ಸೂಕ್ತಸ್ಥಳ ಮತ್ತು ಮೂಲಸೌಕರ್ಯ ಕಲ್ಪಿಸುವಲ್ಲಿ ಪುರಸಭೆಗೆ ಅಧಿಕಾರಿಗಳು ಪ್ರಯತ್ನ ಮಾಡಿಲ್ಲ. ಪರಿಣಾಮ ಅನಿವಾರ್ಯವಾಗಿ ಪಾದಾಚಾರಿ ರಸ್ತೆಯಲ್ಲಿ ವ್ಯಾಪಾರ ವಹಿವಾಟು ನಡೆಸಬೇಕಾಗಿದೆ ಎಂದು ತರಕಾರಿ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.
ಪಟ್ಟಣಕ್ಕೆ ಹತ್ತಿರ ಇರುವ ಸೂಕ್ತಸ್ಥಳ ಗುರುತಿಸಿ ಮೂಲಸೌಕರ್ಯ ಕಲ್ಪಿಸಿದರೆ ಎಲ್ಲ ವರ್ತಕರು ಅಲ್ಲಿ ವಹಿವಾಟು ನಡೆಸಲು ಸಿದ್ದರಿದ್ದೇವೆ ಎನ್ನಾತ್ತಾರೆ ವರ್ತಕರು.
ಬೀದಿಬದಿಯಲ್ಲಿ ವ್ಯಾಪಾರ ನಡೆಯುತ್ತಿರುವುದರಿಂದ ಪಟ್ಟಣದ ಗೆಣಿಕೆಹಾಳು ಮುಖ್ಯರಸ್ತೆಯ ಎರಡು ಬದಿಯಲ್ಲಿರುವ ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ತೊಂದರೆಯಾಗುತ್ತಿದೆ. ಮುಂದಿನ ಸ್ಥಳದಲ್ಲಿ ತರಕಾರಿ ವ್ಯಾಪಾರಿಗಳು ಅತಿಕ್ರಮಿಸುವುದರಿಂದ ಅಂಗಡಿಗಳಿಗೆ ಬರುವ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ವಾರ್ಷಿಕವಾಗಿ ಕಟ್ಟಡ ತೆರಿಗೆ ಮತ್ತು ಟ್ರೇಡಿಂಗ್ ಪರವಾನಗಿ ಪಡೆಯಲು ಹಣ ವೆಚ್ಚಮಾಡಿದರು ವ್ಯಾಪಾರ ನಡೆಸಲು ತೊಂದರೆಯಾಗುತ್ತಿದೆ ಎನ್ನುವ ಕೊರಗು ವಾಣಿಜ್ಯ ಮಳಿಗೆಗಳ ಮಾಲೀಕರನ್ನು ಕಾಡುತ್ತಿದೆ.
ಪಟ್ಟಣದ ಹೃದಯ ಭಾಗದಲ್ಲಿ ಪ್ರತಿ ಗುರುವಾರ ಸಂತೆ ಜರುಗುತ್ತಿತ್ತು. ಸುತ್ತಮುತ್ತಲಿನ 10 ಹಳ್ಳಿಯ ಜನರು ಸಂತೆಯಲ್ಲಿ ಖರೀದಿ ಮಾಡುತ್ತಿದ್ದರು. ಕೊರೊನಾ ಸಂದರ್ಭದಲ್ಲಿ ಮೂಲಸೌಕರ್ಯವಿಲ್ಲದ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ನಾಲ್ಕು ವರ್ಷಗಳಾದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಈ ಬಗ್ಗೆ ಅನೇಕ ಬಾರಿ ಪುರಸಭೆ ಅಧಿಕಾರಿಗಳಲ್ಲಿ ಮನವಿಮಾಡಿದರು ಯಾವುದೇ ಪ್ರಯೋಜನವಾಗಿಲ್ಲ
-ಎಚ್.ಎಂ.ವಿಶ್ವನಾಥ ಸ್ವಾಮಿ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ
ದಿನದ ಮತ್ತು ವಾರದ ಸಂತೆಯಲ್ಲಿ ವ್ಯಾಪಾರ ನಡೆಸುವ ವರ್ತಕರಿಂದ ಪುರಸಭೆ ಜಕಾತಿ ವಸೂಲಿ ಮಾಡುತ್ತಿದೆೆ. ಆದರೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ ಮೆಹಬೂಬಾಷಾ ತರಕಾರಿ ವ್ಯಾಪಾರಿ ಸೂಕ್ತ ಸ್ಥಳದ ಕೊರತೆಯಿಂದ ಅನಿವಾರ್ಯವಾಗಿ ಪಾದಾಚಾರಿ ರಸ್ತೆಯಲ್ಲಿ ತರಕಾರಿ ಮಾರಾಟಮಾಡಲಾಗುತ್ತಿದೆ. ವಾಹನಗಳ ಸಂಚಾರದಿಂದ ಉಂಟಾಗುವ ಧೂಳಿನಿಂದ ಅಲರ್ಜಿ ಉಸಿರಾಟ ಸಂಬಂಧಿ ಕಾಯಿಲೆಗಳು ಬರುತ್ತಿವೆ.
-ಮಲ್ಲಿಕಾರ್ಜುನ ತರಕಾರಿ ವ್ಯಾಪಾರಿ
ಪಾದಾಚಾರಿ ರಸ್ತೆಯಲ್ಲಿ ತರಕಾರಿ ವ್ಯಾಪಾರ ನಡೆಸುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ಮತ್ತು ಗ್ರಾಹಕರಿಗೂ ತೊಂದರೆಯಾಗುತ್ತಿದೆ. ಸೂಕ್ತ ಸ್ಥಳ ಕಲ್ಪಿಸಿದರೆ ಅಂಗಡಿಗಳನ್ನು ಸ್ಥಳಾಂತರಿಸಲು ಸಿದ್ದ ದುಗ್ಗಮ್ಮ ತರಕಾರಿ ವ್ಯಾಪಾರಿ ಪದಾಚಾರಿ ರಸ್ತೆಯಲ್ಲಿ ವಾರದ ಮತ್ತು ದಿನದ ಸಂತೆ ನಡೆಯುತ್ತಿದೆ. ಪಾದಾಚಾರಿ ರಸ್ತೆ ಒತ್ತುವರಿಗಾಗಿ ಕೆಲವು ವರ್ತಕರಿಗೆ ದಂಡ ವಿಧಿಸಿದೆ. ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತದೆ
-ವಿಶ್ವನಾಥ್ ಕೆ. ಹಿರೇಗೌಡರ್ ಸಿಪಿಐ ಕುರುಗೋಡು ಪೊಲೀಸ್ ವೃತ್ತ
ಗೆಣಿಕೆಹಾಳು ರಸ್ತೆಯಲ್ಲಿ ಪುರಸಭೆಗೆ ಸೇರಿದ ಹಳೆ ಕಟ್ಟಡ ತೆರುವುಗೊಳಿಸಿದೆ. ಅಲ್ಲಿ ತರಕಾರಿ ಮಾರುಕಟ್ಟೆ ನಿರ್ಮಿಸಲಾಗುವುದು. ಪುರಸಭೆಯಿಂದ ₹20ಲಕ್ಷ ಅನುದಾನ ಮೀಸಲಿಡಲಾಗಿದೆ
-ಟಿ.ಶೇಖಣ್ಣ ಪುರಸಭೆ ಅಧ್ಯಕ್ಷ
ಪಟ್ಟಣದ ಗೆಣಿಕೆಹಾಳು ರಸ್ತೆಯ ಕುಂಬಾರು ಗುಡ್ಡಕ್ಕೆ ಹೊಂದಿಕೊಂಡಿರುವ ಒಂದು ಎಕರೆ ಸ್ಥಳವನ್ನು ಮಾರುಕಟ್ಟೆಗೆ ಗುರುತಿಸಲಾಗಿದೆ. ಮಾದರಿ ಮಾರುಕಟ್ಟೆ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗುವುದು -ಜೆ.ಎನ್.ಗಣೇಶ್ ಶಾಸಕ
ಸಮಸ್ಯೆ ಮೂಲ ಏನು?
ಕೊರೊನಾ ಸಂದರ್ಭದಲ್ಲಿ ತರಕಾರಿ ಮಾರುಕಟ್ಟೆಯನ್ನು ಪಟ್ಟಣದಿಂದ ಒಂದು ಕಿ.ಮೀ. ದೂರದಲ್ಲಿರುವ ಎಪಿಎಂಸಿ ಉಪಮಾರುಕಟ್ಟೆಗೆ ಸ್ಥಳಾಂತರಿಸಲಾಗಿತ್ತು. ಮಳೆ ಬಂದರೆ ಜಲಾವೃತ್ತಗೊಳ್ಳುತ್ತಿದ್ದರಿಂದ ವರ್ತಕರಿಗೆ ತೊಂದರೆಯಾಗಿತ್ತು. ಅಲ್ಲಿ ಮೂಲಸೌಕರ್ಯ ಕಲ್ಪಿಸದ ಪರಿಣಾಮ ಕೆಲವು ವರ್ತಕರು ಪಟ್ಟಣದ ಮುಖ್ಯವೃತ್ತದ ಬಳಿ ಪಾದಾಚಾರಿ ರಸ್ತೆಯಲ್ಲಿ ವ್ಯಾಪಾರ ನಡೆಸಲು ಮುಂದಾದ ಪರಿಣಾಮ ಎಪಿಎಂಸಿಯಲ್ಲಿ ವಹಿವಾಟು ನಡೆಸುವ ವರ್ತರಿಗೆ ಗ್ರಾಹಕರ ಕೊರತೆ ಉಂಟಾಗಿತ್ತು. ಪರಿಣಾಮ ಪುರಸಭೆ ಅನುಮತಿ ಪಡೆಯದೆ ಎಲ್ಲರೂ ಮುಖ್ಯವೃತ್ತದ ಮತ್ತು ಗೆಣಿಕೆಹಾಳು ರಸ್ತೆಯಲ್ಲಿ ವ್ಯಾಪಾರ ನಡೆಸಲು ಮುಂದಾಗಿದ್ದು ಸಮಸ್ಯೆಗೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.