
ರೋಹಿಣಿ ಸಿಂಧೂರಿ
ಬಳ್ಳಾರಿ: ವಾಣಿಜ್ಯ ಮತ್ತು ಕೈಗಾರಿಕಾ (ಗಣಿ) (ಸಿ ಆ್ಯಂಡ್ ಐ) ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ಬಳ್ಳಾರಿ ಜಿಲ್ಲೆಯಲ್ಲಿ ಕೈಗೊಂಡ ಪ್ರವಾಸದ ವೇಳೆ ಖಾಸಗಿ ಉದ್ದಿಮೆ ಜಿಂದಾಲ್ ಟೌನ್‌ಶಿಪ್‌ನಲ್ಲಿ ವಾಸ್ತವ್ಯ ಹೂಡಿದ್ದರ ಕುರಿತು ತನಿಖೆ ನಡೆಸುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದೆ.
ರೋಹಿಣಿ ಅವರು ಡಿ. 25ರಿಂದ 27ರ ವರೆಗೆ ಬಳ್ಳಾರಿ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ವ್ಯಾಪಕ ಗಣಿಗಾರಿಕೆಯಿಂದ ಕೃಷಿಗೆ ಆಗುತ್ತಿರುವ ತೊಂದರೆಗಳ ಕುರಿತು ರೋಹಿಣಿ ಅವರಿಗೆ ಮನವಿ ಸಲ್ಲಿಸಲು ರೈತರು ಎರಡು ದಿನ ಕಾದಿದ್ದರು. ಆದರೆ, ರೋಹಿಣಿ ಎರಡೂ ದಿನವೂ ಜಿಂದಾಲ್ ಟೌನ್‌ಶಿಪ್‌ನಲ್ಲೇ ಉಳಿದುಕೊಂಡಿದ್ದನ್ನು ರೈತ ಸಂಘ ಆಕ್ಷೇಪಿಸಿದೆ.
‘ಜಿಂದಾಲ್ ಕಂಪನಿಯು ಕೇವಲ ಉಕ್ಕು ಉತ್ಪಾದನೆ ಜತೆಗೆ, ಸಂಡೂರಿನಲ್ಲಿ ಗಣಿಗಾರಿಕೆಯಲ್ಲೂ ತೊಡಗಿದೆ. ಇತ್ತೀಚೆಗೆ 4 ಗಣಿಗಳನ್ನು ಹರಾಜಿನಲ್ಲಿ ಖರೀದಿ ಮಾಡಿದೆ. ಆದರೆ, ಈ ಗಣಿಗಳ ಹರಾಜಿನ ವೇಳೆ ಸರ್ಕಾರ ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಉಲ್ಲಂಘಿಸಿದೆ ಎಂದು ಕೇಂದ್ರದ ಉನ್ನತಾಧಿಕಾರಿ ಸಮಿತಿಯು ಸುಪ್ರಿಂ ಕೋರ್ಟ್‌ಗೆ ವರದಿ ನೀಡಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿರುವ ಜಿಂದಾಲ್ ಕಂಪನಿ, ಸರ್ಕಾರದ ವಿವಿಧ ಇಲಾಖೆಗಳನ್ನು ಪ್ರತಿವಾದಿಯಾಗಿಸಿದೆ. ಇದರಲ್ಲಿ ಸಿ ಆ್ಯಂಡ್ ಐನ ಈಗಿನ ಕಾರ್ಯದರ್ಶಿ ರೋಹಿಣಿ ಅವರೂ ಪ್ರತಿವಾದಿಯಾಗಿದ್ದಾರೆ. ಹೀಗಿದ್ದರೂ, ಅದೇ ಜಿಂದಾಲ್‌ನಲ್ಲಿ ಆತಿಥ್ಯ ಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ’ ಎಂದು ರೈತ ಸಂಘ ಆರೋಪಿಸಿದೆ.
ಸರ್ಕಾರಿ ಅಧಿಕಾರಿಯಾಗಿದ್ದರೂ, ಸರ್ಕಾರದ ವಸತಿಗೃಹ ಬಳಸದೇ, ಖಾಸಗಿ ಉದ್ದಿಮೆದಾರರ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿರುವುದು ಆಕ್ಷೇಪಾರ್ಹ. ತಮ್ಮ ಈ ಪ್ರವಾಸಕ್ಕೆ ರಜಾ ದಿನದಲ್ಲಿಯೂ ಸರ್ಕಾರಿ ಅಧಿಕಾರಿಗಳನ್ನು, ಸರ್ಕಾರದ ವಾಹನಗಳನ್ನು ರೋಹಿಣಿ ಬಳಸಿದ್ದಾರೆ. ಈ ಮೂಲಕ ಕರ್ನಾಟಕ ನಾಗರಿಕ ಸೇವೆಗಳು (ನಡವಳಿಕೆ) ನಿಯಮಗಳು– 1966 ಅನ್ನು ಅವರು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಈ ಕುರಿತು ದೂರು ಅರ್ಜಿಯನ್ನು ಡಿ. 28ರಂದು ಮುಖ್ಯಕಾರ್ಯದರ್ಶಿಗೆ ರವಾನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.