ADVERTISEMENT

ಹೂವಿನಹಡಗಲಿ | ಅಸಮರ್ಪಕ ಗ್ರಾಮೀಣ ಸಾರಿಗೆ ಸೇವೆ: ವಿದ್ಯಾರ್ಥಿಗಳಿಗೆ ತಪ್ಪದ ಗೋಳು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 6:05 IST
Last Updated 5 ಸೆಪ್ಟೆಂಬರ್ 2025, 6:05 IST
ಹೂವಿನಹಡಗಲಿ ಬಸ್ ನಿಲ್ದಾಣದಲ್ಲಿ ಬಸ್ ಏರಲು ವಿದ್ಯಾರ್ಥಿಗಳು ಹರಸಾಹಸಪಡುತ್ತಿರುವುದು
ಹೂವಿನಹಡಗಲಿ ಬಸ್ ನಿಲ್ದಾಣದಲ್ಲಿ ಬಸ್ ಏರಲು ವಿದ್ಯಾರ್ಥಿಗಳು ಹರಸಾಹಸಪಡುತ್ತಿರುವುದು   

ಹೂವಿನಹಡಗಲಿ: ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ಸಮರ್ಪಕ ಸಾರಿಗೆ ಸೇವೆ ಇಲ್ಲದೇ ಶಾಲಾ ಕಾಲೇಜು ವಿದ್ಯಾರ್ಥಿಗಳು, ಗ್ರಾಮೀಣ ಜನರು ನಿತ್ಯವೂ ಪರದಾಡುವಂತಾಗಿದೆ.

ಇಲ್ಲಿನ ಸಾರಿಗೆ ಘಟಕದಿಂದ ಅಂತರ್ ಜಿಲ್ಲಾ, ತಾಲ್ಲೂಕು ಮಾರ್ಗಗಳನ್ನು ಹೊರತುಪಡಿಸಿ ಗ್ರಾಮೀಣ ಪ್ರದೇಶಗಳಿಗೆ ಅಗತ್ಯಕ್ಕೆ ತಕ್ಕಂತೆ ಬಸ್‌ಗಳನ್ನು ಓಡಿಸುತ್ತಿಲ್ಲ. ಗ್ರಾಮೀಣ ಮಾರ್ಗಗಳ ಅಸಮರ್ಪಕ ನಿರ್ವಹಣೆಯಿಂದ ಪ್ರಯಾಣಿಕರು, ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ.

ತುಂಬಿ ತುಳುಕುವ ಬಸ್‌ಗಳಲ್ಲಿ ಕಾಲಿಡಲೂ ಜಾಗ ಸಿಗದೇ ಪ್ರಯಾಸದಿಂದ ಪ್ರಯಾಣಿಸುವಂತಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ತರಗತಿ ಮುಗಿಸಿ, ಮನೆ ಸೇರಲು ಹರಸಾಹಸಪಡುತ್ತಾರೆ. ಉಪವಾಸದಿಂದ ಗಂಟೆಗಟ್ಟೆಲೇ ಬಸ್ ಕಾಯುವುದು ಸಾಮಾನ್ಯವಾಗಿದೆ.

ADVERTISEMENT

ಶಿವಲಿಂಗನಹಳ್ಳಿ, ಉಪನಾಯಕನಹಳ್ಳಿ, ಬಸರಕೋಡು ತಾಂಡಾದಿಂದ ನೂರಾರು ವಿದ್ಯಾರ್ಥಿಗಳು ಪಟ್ಟಣದ ಶಾಲಾ ಕಾಲೇಜಿಗೆ ಬರುತ್ತಾರೆ. ಈ ಮಾರ್ಗದಲ್ಲಿ ಬೆಳಿಗ್ಗೆ 9 ಗಂಟೆಗೆ ಓಡುವ ಒಂದು ಬಸ್ ವಿದ್ಯಾರ್ಥಿಗಳಿಂದಲೇ ಬಸ್ ತುಂಬಿ ತುಳುಕುತ್ತದೆ. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ವಿದ್ಯಾರ್ಥಿಗಳಿಗೆ ನಿಲ್ಲಲೂ ಜಾಗ ಸಿಗುವುದಿಲ್ಲ. ‘ಇದು ಒಂದು ದಿನದ ಸಮಸ್ಯೆಯಲ್ಲ, ನಿತ್ಯದ ಗೋಳು’ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.

ಶಿವಲಿಂಗನಹಳ್ಳಿಯ ವಿದ್ಯಾರ್ಥಿಗಳಿಗೆ ಗುರುವಾರ ಬಸ್‌ನಲ್ಲಿ ಜಾಗ ಸಿಗದ ಕಾರಣಕ್ಕೆ ಗ್ರಾಮಸ್ಥರು, ವಿದ್ಯಾರ್ಥಿಗಳು ಕೆಲಕಾಲ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಾರ್ಗದಲ್ಲಿ ಅಧಿಕ ವಿದ್ಯಾರ್ಥಿಗಳಿರುವುದರಿಂದ ಶಾಲಾ, ಕಾಲೇಜು ಸಮಯಕ್ಕೆ ಹೆಚ್ಚುವರಿ ಬಸ್ ಓಡಿಸುವಂತೆ ಒತ್ತಾಯಿಸಿದ್ದಾರೆ.

ಹಂಪಸಾಗರ ಮಾರ್ಗ, ತಳಕಲ್ಲು ಮಾರ್ಗ, ದಾಸನಹಳ್ಳಿ, ವೀರಾಪುರ ಮಾರ್ಗ, ನದಿ ತೀರದ ಹಿರೇಬನ್ನಿಮಟ್ಟಿ, ಬ್ಯಾಲಹುಣ್ಸಿ, ಅಂಗೂರು, ಕೋಟಿಹಾಳ, ಮಕರಬ್ಬಿ ಗ್ರಾಮಗಳ ವಿದ್ಯಾರ್ಥಿಗಳ ಸಮಸ್ಯೆಯೂ ಹೇಳತೀರದಾಗಿದೆ. ಬನ್ನಿಮಟ್ಟಿ, ನಂದಿಗಾವಿಯಲ್ಲಿ ರಾತ್ರಿ ವಾಸ್ತವ್ಯದ ಬಸ್ ಹೊರಟು ಹೋದರೆ ವಿದ್ಯಾರ್ಥಿಗಳಿಗೆ ಬೇರೆ ಬಸ್ ಗಳೇ ಇಲ್ಲ. ‘ಈ ಮಾರ್ಗದಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಾಚರಣೆ ಮಾಡುತ್ತಿದ್ದ ಬಸ್ 15 ದಿನಗಳಿಂದ ಓಡಾಟ ನಿಲ್ಲಿಸಿದ್ದು, ಪ್ರಯಾಣಿಕರಿಗೆ ಸಮಸ್ಯೆಯಾಗಿದೆ’ ಎಂದು ಜನರು ದೂರಿದ್ದಾರೆ.

‘ಬ್ಯಾಲಹುಣ್ಸಿ ಮಾರ್ಗ ಸ್ಥಗಿತವಾಗಿರುವ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿಗೆ ತಿಳಿಸಿದರೆ ‘ನನ್ನನ್ನು ಕೇಳಬೇಡಿ ಘಟಕ ವ್ಯವಸ್ಥಾಪಕರಿಗೆ ಕೇಳಿ’ ಎನ್ನುತ್ತಾರೆ. ಘಟಕ ವ್ಯವಸ್ಥಾಪಕರಿಗೆ ಕರೆ ಮಾಡಿದರೆ ‘ರಜೆಯಲ್ಲಿರುವೆ’ ಎನ್ನುತ್ತಾರೆ. ಹಾಗಾದರೆ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಬೇಕು ? ಎಂದು ಬಿ.ಲಕ್ಷ್ಮಣ ಪ್ರಶ್ನಿಸಿದರು.

ಹೆಚ್ಚುವರಿ ಬಸ್ ಓಡಿಸಲು ಆಗ್ರಹಿಸಿ ಶಿವಲಿಂಗನಹಳ್ಳಿಯಲ್ಲಿ ವಿದ್ಯಾರ್ಥಿಗಳು ಪ್ರಯಾಣಿಕರು ಬಸ್ ತಡೆದು ಪ್ರತಿಭಟಿಸಿದರು.
ಬಸ್‌ ಕೊರತೆಯಿಂದ ಸಮಸ್ಯೆಯಾಗಿದೆ. ಐದು ಬಸ್ ಗುಜರಿ ಆಗಿವೆ ಎಂಟು ಬಸ್‌ಗಳು ಪಾಸಿಂಗ್‌ಗೆ ಹೋಗಿವೆ. ವಾರದಲ್ಲಿ ಸಮಸ್ಯೆ ಬಗೆಹರಿಯಲಿದೆ
ವೆಂಕಟಾಚಲಪತಿ ಹಡಗಲಿ ಘಟಕ ವ್ಯವಸ್ಥಾಪಕ

‘ಗ್ಯಾರಂಟಿ’ ಅನುಷ್ಠಾನ ಸಮಿತಿ ಸಭೆಗೆ ಸೀಮಿತ ?:

‘ಶಕ್ತಿ’ ಯೋಜನೆ ಜಾರಿ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ತುಂಬಿ ತುಳುಕುವ ಗ್ರಾಮೀಣ ಬಸ್ ಗಳಲ್ಲಿ ವಿದ್ಯಾರ್ಥಿಗಳು ವೃದ್ದರು ಮಕ್ಕಳ ಪ್ರಯಾಣ ಕಷ್ಟಕರವಾಗಿದೆ. ‘ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿರುವ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಬರೀ ಸಭೆಗೆ ಸೀಮಿತವಾಗಿದೆ’ ಎಂಬ ಆರೋಪ ಕೇಳಿ ಬಂದಿದೆ. ಅವಧಿ ಮೀರಿದ ಗುಜರಿ ಬಸ್‌ಗಳನ್ನು ಹಿಂಪಡೆದು ಘಟಕಕ್ಕೆ ಹೊಸ ಬಸ್ ಗಳನ್ನು ನೀಡಬೇಕು. ಗ್ರಾಮಾಂತರ ಮಾರ್ಗಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಬಸ್ ಗಳನ್ನು ಓಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.