ಸಂಡೂರು ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಗುರುವಾರ ನಾಮಪತ್ರ ಸಲ್ಲಿಸಿದರು.
ಸಂಡೂರು (ಬಳ್ಳಾರಿ): ಸಂಡೂರು ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದ ಇ. ತುಕಾರಾಂ ಪತ್ನಿ ಅನ್ನಪೂರ್ಣ ಗುರುವಾರ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಸಂಡೂರಿನ ಕುಮಾರಸ್ವಾಮಿ ದೇಗುಲಕ್ಕೆ ಕುಟುಂಬ ಸಹಿತ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ನಂತರ ತಾಲ್ಲೂಕು ಕಚೇರಿಯವರೆಗೆ ಮೆರವಣಿಗೆ ನಡೆಯಿತು.
ಅನ್ನಪೂರ್ಣ ಅವರ ಕೈ ಹಿಡಿದುಕೊಂಡೇ ತಾಲ್ಲೂಕು ಕಚೇರಿಗೆ ಕರೆದೊಯ್ದ ಸಚಿವ ಸಂತೋಷ್ ಲಾಡ್, ಅವರಿಂದ ನಾಮಪತ್ರ ಸಲ್ಲಿಸಿ, ಶುಭ ಹಾರೈಸಿದರು. ಈ ವೇಳೆ ಸಚಿವ ಜಮೀರ್ ಅಹಮದ್ ಖಾನ್, ಶಾಸಕ ಬಿ. ನಾಗೇಂದ್ರ, ಅನ್ನಪೂರ್ಣ ಅವರ ಪುತ್ರಿ ಸೌಪರ್ಣಿಕಾ, ಟಿಕೆಟ್ ಆಕಾಂಕ್ಷಿಯಾಗಿದ್ದ ತುಮಟಿ ಲಕ್ಷ್ಮಣ, ಜನಪ್ರತಿನಿಧಿಗಳು ಮತ್ತು ಮುಖಂಡರು ಇದ್ದರು.
ಈ ಸಂದರ್ಭದಲ್ಲಿ ಅನ್ನಪೂರ್ಣ ಮಾತನಾಡಿ, ‘ಸಂತೋಷ್ ದಾದಾ, ತುಕಾರಾಂ ಎಂಬ ಜೋಡೆತ್ತುಗಳ ಸಹಕಾರದೊಂದಿಗೆ ಸಂಡೂರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ. ಸಂಡೂರು ಇತಿಹಾಸದಲ್ಲೇ ಮೊದಲ ಸಲ ಮಹಿಳೆಯೊಬ್ಬರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ. ಹೆಣ್ಣುಮಗಳಿಗೆ ಆದ್ಯತೆ ನೀಡಿದ್ದು ಮತ್ತು ನನಗಾಗಿ ಇಷ್ಟು ಜನ ಸೇರಿದ್ದು ಬಹಳ ಖುಷಿ ತರಿಸಿದೆ’ ಎಂದರು.
‘ಸಂಡೂರು ಕ್ಷೇತ್ರ ಕಾಂಗ್ರೆಸ್ ಕೋಟೆ. ಜನಾರ್ದನ ರೆಡ್ಡಿ ಅಲ್ಲದೇ ಯಾರೇ ಬಂದರೂ ಕ್ಷೇತ್ರ ಗೆಲ್ಲುತ್ತೇವೆ’ ಎಂದು ಜಮೀರ್ ಅಹಮದ್ ಖಾನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.