ADVERTISEMENT

ಸಂಡೂರು: ಸೀತಾರಾಮ, ಆಂಜನೇಯ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 7 ಮೇ 2025, 15:18 IST
Last Updated 7 ಮೇ 2025, 15:18 IST
ಕುಡತಿನಿಯಲ್ಲಿ ಸೀತಾರಾಮ, ದೊಡ್ಡ ಆಂಜನೇಯಸ್ವಾಮಿಯ ಮಹಾ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿಂದ ಜರುಗಿತು
ಕುಡತಿನಿಯಲ್ಲಿ ಸೀತಾರಾಮ, ದೊಡ್ಡ ಆಂಜನೇಯಸ್ವಾಮಿಯ ಮಹಾ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿಂದ ಜರುಗಿತು   

ಕುಡತಿನಿ (ಸಂಡೂರು): ಪಟ್ಟಣದ ಸೀತಾರಾಮ, ದೊಡ್ಡ ಆಂಜನೇಯಸ್ವಾಮಿಯ ಮಹಾ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿಂದ ಜರುಗಿತು.

ದೇವಸ್ಥಾನದಿಂದ ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗಿ ಬಂದ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಭಕ್ತರ ಹರ್ಷೋದ್ಘಾರದ ನಡುವೆ ರಥೋತ್ಸವ ಆರಂಭವಾಯಿತು.

ಕುಡತಿನಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಾದ ಸಿದ್ದಮನಹಳ್ಳಿ, ಏಳುಬೆಂಚಿ, ದರೋಜಿ, ತಿಮ್ಮಾಲಾಪುರ, ಹರಗಿನ ಡೋಣಿ, ವೇಣಿ ವೀರಾಪುರ, ತೋರಣಗಲ್ಲು, ಡಿ.ಅಂತಾಪುರ, ಸುಲ್ತಾನಾಪುರ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.

ADVERTISEMENT

ರಸ್ತೆಯ ಉದ್ದಕ್ಕೂ ನೆರದಿದ್ದ ವಿವಿಧ ಗ್ರಾಮಗಳ, ಪಟ್ಟಣದ ಭಕ್ತರು ಸ್ವಾಮಿಯ ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು ಎಸೆದು ಭಕ್ತಿ ಸರ್ಮಪಿಸಿದರು.

ದೇವಸ್ಥಾನದ ಆಡಳಿತ ಮಂಡಳಿ, ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಮಡಿ ರಥೋತ್ಸವ, ರಥಾಂಗ ಹೋಮ ನೆರವೇರಿತು. ರಥದ ತುಂಬಾ ವಿವಿಧ ರೀತಿಯ ಸೇವಂತಿ, ಚೆಂಡು ಹೂ, ಮಲ್ಲಿಗೆಯ ಹೂಗಳಿಂದ ತೇರನ್ನು ಸಿಂಗರಿಸಲಾಗಿತ್ತು. ಬಣ್ಣದ ಬಾವುಟಗಳು, ತೆಂಗು, ಬಾಳೆ ಗರಿಗಳಿಂದ ರಥವನ್ನು ಆಲಂಕಾರಮಾಡಲಾಗಿತ್ತು.

ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಕಂಕಣ ಮಹೋತ್ಸವ, ಪಂಚಾಮೃತ ಅಭಿಷೇಕ, ಬಲಿಹರಣ, ಪಾಯಾಸ ನೈವೇದ್ಯ, ಆಗಮ ಹೋಮ, ಎಲೆಪೂಜೆ ಸೇರಿದಂತೆ ಇತರೆ ಪೂಜೆಗಳು ಭಕ್ತಿ ಪೂರ್ವಕವಾಗಿ ಜರುಗಿದವು.

ರಥೋತ್ಸವದ ಅಂಗವಾಗಿ ಪಟ್ಟಣದ ಬೀದಿ ಬದಿ ವ್ಯಾಪಾರಿಗಳ ಸಂಘದ ವತಿಯಿಂದ ಅನ್ನ ಸಂತರ್ಪಣೆ, ಕನಕದಾಸ ಯುವಕ ಸಂಘದ ವತಿಯಿಂದ ಮಜ್ಜಿಗೆ ಸೇವೆ ನಡೆಯಿತು. ಭಜನೆ, ಕುಂಭಮೇಳ, ಕೋಲಾಟ, ಡೊಳ್ಳು, ಇತರೆ ಕಲಾ ತಂಡಗಳು ಪಾಲ್ಗೊಂಡಿದ್ದವು.

ಕುಡತಿನಿಯಲ್ಲಿ ಬುಧವಾರ ಸೀತಾರಾಮ ದೊಡ್ಡ ಆಂಜನೇಯಸ್ವಾಮಿಯ ಮಹಾ ರಥೋತ್ಸವದ ಅಂಗವಾಗಿ ಕನಕದಾಸ ಸಂಘದ ವತಿಯಿಂದ ಮಜ್ಜಿಗೆ ಸೇವೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.