ADVERTISEMENT

ಸಂಡೂರು | ಸ್ಕ್ಯಾನಿಂಗ್ ಸೌಲಭ್ಯ ಕೊರತೆ: ಪರದಾಟ

ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ ನಿರ್ವಹಣೆಗೆ ತಜ್ಞವೈದ್ಯರಿಲ್ಲ: ದೂರು

ಪ್ರಜಾವಾಣಿ ವಿಶೇಷ
Published 24 ಜೂನ್ 2023, 5:45 IST
Last Updated 24 ಜೂನ್ 2023, 5:45 IST
   

ರಾಮು ಅರಕೇರಿ

ಸಂಡೂರು: ತಾಲೂಕಿನ ಆಸ್ಪತ್ರೆಯಲ್ಲಿ ಈ ವರೆಗೆ ಒಂದೇ ಒಂದು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೌಲಭ್ಯ ಇಲ್ಲದ ಕಾರಣ ರೋಗಿಗಳು ದೂರದ ಜಿಲ್ಲಾ ಕೇಂದ್ರ ಬಳ್ಳಾರಿಗೋ, ಪಕ್ಕದ ಹೊಸಪೇಟೆಗೋ ತೆರಳುವ ಅನಿವಾರ್ಯತೆ ಉಂಟಾಗಿದೆ.

ಸಂಡೂರು ಪಟ್ಟಣದಲ್ಲಿ ತಾಲ್ಲೂಕು ಆಸ್ಪತ್ರೆ,‌ ತೋರಣಗಲ್ಲು ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಚೋರನೂರು, ಬಂಡ್ರಿ, ತಾರಾನಗರ ಸೇರಿದಂತೆ ಒಟ್ಟು 5 ಪ್ರಾಥಮಿಕ‌ ಆರೋಗ್ಯ ಕೇಂದ್ರಗಳಿವೆ. ಯಾವ ಆಸ್ಪತ್ರೆಯಲ್ಲೂ ಸ್ಕ್ಯಾನಿಂಗ್ ಮಶಿನ್ ಸೌಲಭ್ಯ ಇಲ್ಲ. ತೋರಣಗಲ್ಲು ಸಂಜೀವಿನಿ ಆಸ್ಪತ್ರೆ ಹೊರತು ಪಡಿಸಿ ಖಾಸಗಿ ಆಸ್ಪತ್ರೆಗಳಲ್ಲೂ ಸ್ಕ್ಯಾನಿಂಗ್ ಇಲ್ಲ. ಇದರಿಂದ ಗರ್ಬೀಣಿಯರಿಗೆ, ರೋಗಿಗಳಿಗೆ ತೊಂದರೆ ಉಂಟಾಗಿದೆ.

ADVERTISEMENT

ತಾಲ್ಲೂಕಿನ‌ ದೂರದ ಹಳ್ಳಿಗಳಿಂದ ಚಿಕಿತ್ಸೆಗೆಂದು ಬರುವ ಗರ್ಭಿಣಿಯರಿಗೆ ತಾಲ್ಲೂಕು ಕೇಂದ್ರದಲ್ಲೂ ಸ್ಕ್ಯಾನಿಂಗ್ ಸೌಲಭ್ಯವಿಲ್ಲ. ಅನಿವಾರ್ಯವಾಗಿ ಮಹಿಳೆಯರು ಪಕ್ಕದ ಹೊಸಪೇಟೆ, ಬಳ್ಳಾರಿಯ ಕೆಲ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುತ್ತಾರೆ. ಚಿಕಿತ್ಸೆಗೆಂದು‌ ಕೈಗೊಳ್ಳುವ ದೂರ ಪ್ರಯಾಣದ ಕಾರಣಕ್ಕೆ ಅಬಾಷನ್‌ ಆದ ಅನೇಕ ಘಟನೆಗಳು ಜರುಗಿವೆ. ಈ ನಿಟ್ಟಿನಲ್ಲಿ ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸುವ ಅನಿವಾರ್ಯತೆ ಇದೆ.

ಸಿಬ್ಬಂದಿ ಕೊರತೆ: ಈಚೆಗೆ ಸ್ಥಳೀಯ ಶಾಸಕ‌ ಈ.ತುಕಾರಾಂ ಅವರು, ಶಾಸಕರ ಅನುದಾನದಲ್ಲಿ ಒಂದು ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಶಿನ್ ಖರೀದಿಸಿ ತಾಲ್ಲೂಕು ಆಸ್ಪತ್ರೆಗೆ ಒದಗಿಸಿದ್ದಾರೆ. ಆದರೆ ಅದನ್ನು ಆಪರೇಟ್ ಮಾಡಲು ತಜ್ಞ ಸಿಬ್ಬಂದಿ ಕೊರತೆ ಎದುರಾಗಿದೆ. ಇಲ್ಲಿನ ಹೆರಿಗೆ ತಜ್ಞ ಡಾ. ರಾಮಶೆಟ್ಟಿ ಅವರಿಗೆ ಒಂದು ತಿಂಗಳುಗಳ ಕಾಲ ತರಬೇತಿ ನೀಡಿ ಸೇವೆ ಒದಗಿಸಲು ಸೂಚಿಸಲಾಗಿದೆಯಾದರೂ ಕೆಲಸದ ಹೊರೆ ಹಾಗೂ ಕನಿಷ್ಠ ತರಬೇತಿ ಕಾರಣಕ್ಕೆ ಅದು ಕೂಡಾ ಆರಂಭವಾಗಿಲ್ಲ. ಮಶಿನ್ ಆಪರೇಟ್ ಮಾಡಲು ಕೇವಲ ತಜ್ಞರಷ್ಟೆ ಆಗಿದ್ದರೆ ಸಾಲದು. ಭ್ರೂಣಲಿಂಗ ಪತ್ತೆ ಇತ್ಯಾದಿ ಕಾನೂನು ತೊಡಕುಗಳು ಉಂಟಾಗದಂತೆ ನೊಂದಾಯಿತ ರೇಡಿಯಾಲಜಿಸ್ಟ್ ಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರು ಮುತುವರ್ಜಿ ವಹಿಸಿ ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.