
ಹಗರಿಬೊಮ್ಮನಹಳ್ಳಿ: ಸೂರ್ಯ ಮುಳುಗಿ ತಣ್ಣನೆಯ ಗಾಳಿ ಒಂದೆಡೆಯಾದರೆ, ಇನ್ನೊಂದೆಡೆ ಪಟ್ಟಣದ ಗಂಗಾವತಿ ಭೀಮಪ್ಪನವರ ತಾಲ್ಲೂಕು ಕ್ರೀಡಾಂಗಣದಲ್ಲಿ ಪೈಲ್ವಾನ್‌ಗಳು ಕುಸ್ತಿ ಕಣದಲ್ಲಿ ಒಬ್ಬರನೊಬ್ಬರು ಚಿತ್ ಮಾಡಿದರು. ಇಲ್ಲಿ ದೇಶಿಯ ಕುಸ್ತಿಪಟುಗಳು ಮಾತ್ರ ಇರಲಿಲ್ಲ. ಅಂತರರಾಷ್ಟ್ರೀಯ ಕುಸ್ತಿಪಟುಗಳು ಅಖಾಡದಲ್ಲಿ ಬೆವರು ಹರಿಸಿದರು.
ಶ್ರೀವೆಂಕಟೇಶ್ವರ ರಥೋತ್ಸವ ಹಿನ್ನಲೆಯಲ್ಲಿ ಶನಿವಾರ ಪಟ್ಟಣದ ನಾಣಿಕೇರಿ ದೈವಸ್ತರು ಈ ಬಾರಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕುಸ್ತಿಪಟುಗಳನ್ನು ಆಹ್ವಾನಿಸಿದ್ದರು. ಇದರಿಂದಾಗಿ ದೇಶಿ ಮತ್ತು ವಿದೇಶಿ ಪೈಲ್ವಾನರಿಂದ ಅಖಾಡ ರಂಗೇರಿತ್ತು.
ಪಂದ್ಯಾವಳಿ ಅಂತಿಮ ಎರಡು ಪಂದ್ಯಗಳಂತೂ ನೆರೆದಿದ್ದವರನ್ನು ತುದಿಗಾಲಲ್ಲಿ ನಿಲ್ಲಿಸುವಂತೆ ಮಾಡಿತ್ತು. ಮಹಾರಾಷ್ಟ್ರದ ಪುಣೆಯ ಚಾಂಪಿಯನ್ ಸತೀಶ್ ಮುದ್ದೆ ಅವರು ಕಜಕಿಸ್ತಾನದ ಕಜಕಿ ಚಾಂಪಿಯನ್ ದೌಲೆಟಿಯಾರ್ ಅವರನ್ನು ಕೇವಲ 10 ನಿಮಿಷದಲ್ಲಿ ಚಿತ್ ಮಾಡಿದರು. ದೇಶಿ ಪೈಲ್ವಾನ್‍ರ ಕಲ್ಲರ್‍ಜಿಂಗ್, ಏಕಲಾಂಗ್, ಸವಾರಿ ಪಟ್ಟುಗಳ ಮುಂದೆ ಕಜಕಿಸ್ತಾನದ ಎಲ್ಲ ಪಟ್ಟುಗಳನ್ನು ಬುಡಮೇಲು ಮಾಡುವ ಮೂಲಕ ಗೆಲುವಿನ ನಗೆಬೀರಿದರು.ಮೂರು ಗಂಟೆಗಳ ಕಾಲ ಸಾವಿರಾರು ಅಭಿಮಾನಿಗಳು ಕುಸ್ತಿಯ ರಸದೌತಣ ಸವಿದರು.
ಎರಡನೇ ಪಂದ್ಯದಲ್ಲಿ ಬ್ರೆಜಿಲ್ ದೇಶದ ಬ್ರೆಜಿಲಿಯನ್ ಚಾಂಪಿಯನ್ ಫ್ರೇಡೆಲಾ ಲೀಮಾ ಅವರು ಹರಿಯಾಣ ಕೇಸರಿ ವಿಜೇತ ಪೈಲ್ವಾನ್ ಹರ್ಷ್ ಕುಮಾರ ಚೌದ್ರಿ ಅವರನ್ನು ಮಣಿಸಿದ ರೀತಿಗೆ ನೆರೆದಿದ್ದ ಸಾವಿರಾರು ಜನ ಬೆಕ್ಕಸಬೆರಗಾದರು. ಕ್ಷಣಾರ್ಧದಲ್ಲಿ ಎರಡು ಬಾರಿ ನಿಕಾಲಿ ಮಾಡಿದರು. ಆಗ ನೆರೆದಿದ್ದ ಜನರ ಹಷೋದ್ಘಾರ ಮುಗಿಲುಮುಟ್ಟಿತ್ತು., ವಿದೇಶಿ ಕುಸ್ತಿ ಪೈಲ್ವಾನ್‍ಗೆ ಭಾರಿ ಬೆಂಬಲ ಸೂಚಿಸಿದರು.
ಈ ಎರಡೂ ಜೋಡಿಗಳು ಮದಗಜಗಳಂತೆ ಕಾದಾಡಿದರು. ಕುಸ್ತಿಯ ಎಲ್ಲ ಪಟ್ಟುಗಳನ್ನು ಪ್ರದರ್ಶಿಸಿ ಹೂಗಳಿಂದ ಅಲಂಕಾರಗೊಂಡಿದ್ದ ಅಖಾಡವನ್ನು ಮತ್ತಷ್ಟೂ ಕಂಗೊಳಿಸುವಂತೆ ಮಾಡಿದರು.
ಇದಕ್ಕೂ ಮುನ್ನ ಇಂದೋರ್‌ನ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಮುದಾಶೀರ್ ಮೂಸಾ ಅವರು ಪಂಜಾಬ್‍ನ ಅಮಿತ್ ಶರ್ಮಾ ಅವರನ್ನು ಕೆಲವೇ ನಿಮಿಷದಲ್ಲಿ ಸೋಲಿನ ರುಚಿ ತೋರಿಸಿದರು. ಇವರಿಬ್ಬರ ಕಾದಾಟ ಕುಸ್ತಿಪ್ರೇಮಿಗಳನ್ನು ನಿಂತಲ್ಲೇ ಕುಣಿದಾಡುವಂತೆ ಮಾಡಿತು.
ದಾವಣಗೆರೆಯ ಗೀರೀಶ್ ಅವರು ಕೊಲ್ಲಾಪುರದ ರಾಜ್‍ಪೂವಾರ್ ಅವರನ್ನು ಬರೋಬ್ಬರಿ 15ನಿಮಿಷಗಳ ಕಾದಾಟದಲ್ಲಿ ನಿಕಾಲಿ ಮಾಡಿದರು. ರಾಣೇಬೆನ್ನೂರಿನ ಕಿರಣ್ ಅವರು ಪಂಜಾಬ್‍ನ ರೂಪೇಶ್ ಪಾಟೀಲ್ ಅವರನ್ನು ಮಣ್ಣುಮುಕ್ಕಿಸಿದರು. ಮಹಾರಾಷ್ಟ್ರದ ಸೌರಾದ್ ಮತ್ತು ಹರಪನಹಳ್ಳಿಯ ಇರ್ಷಾದ್ ನಡುವೆ ನಡೆದ ಕದನ ಸಮಬಲದಲ್ಲಿ ಮುಕ್ತಾಯಗೊಂಡಿತು. ಹರಪನಹಳ್ಳಿಯ ಕೆಂಚಪ್ಪ ಪ್ರಯಾಸದಿಂದ ಗೆಲುವನ್ನು ತಮ್ಮದಾಗಿಸಿಕೊಂಡರು.
ನಾಣಿಕೇರಿಯ ಮುಖಂಡರಾದ ಬಾರಿಕರ ಬಾಪೂಜಿ, ಹುಳ್ಳಿ ಪ್ರಕಾಶ್,ತಿಗರಿ ಮಾರುತಿ, ಮಡಿವಾಳರ ಹುಲುಗಪ್ಪ, ಮಡಿವಾಳರ ಪ್ರಕಾಶ್, ಬೋವಿ ಸೋಮಣ್ಣ, ಗರಗದ ಪ್ರಕಾಶ್, ಹುಗ್ಗಿ ಹುಲುಗಪ್ಪ, ಹನುಮೇಶ್, ಕುರುಬರ ಬಸವರಾಜ, ದಾದಮ್ಮನವರ ಬಸವರಾಜ, ಬಡೆಲಡಕಿ ಕೃಷ್ಣಪ್ಪ, ಪೇಂಟರ್ ಬಾಬು ಮತ್ತು ಮುಗುಲಿ ಕನಕಪ್ಪ, ಅರಳಿಹಳ್ಳಿ ರಾಮಚಂದ್ರಪ್ಪ, ಕುರುಬರ ನಾಗಪ್ಪ, ಮರಡಿ ಯಮುನಪ್ಪ ನಿರ್ಣಾಯಕರಾಗಿದ್ದರು. ನೀಲಪ್ಪ ಹಲಗೆ ಸದ್ದು ಮತ್ತು ಮಹಾಂತೇಶ್ ಅವರ ಕಹಳೆ ವಾದನ ಪೈಲ್ವಾನ್‍ರನ್ನು ಹುರಿದುಂಬಿಸುತ್ತಿದ್ದವು.