ADVERTISEMENT

ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ

ವಿವಿಧ ಸಂಘ ಸಂಸ್ಥೆಗಳಿಂದ ಸಮಾಜ ಸುಧಾರಕಿಯ ಜನ್ಮದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 14:35 IST
Last Updated 3 ಜನವರಿ 2020, 14:35 IST
ಹಿಂದುಳಿದ ವರ್ಗಗಳ ಒಕ್ಕೂಟದಿಂದ ಶುಕ್ರವಾರ ಹೊಸಪೇಟೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ಆಚರಿಸಲಾಯಿತು
ಹಿಂದುಳಿದ ವರ್ಗಗಳ ಒಕ್ಕೂಟದಿಂದ ಶುಕ್ರವಾರ ಹೊಸಪೇಟೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ಆಚರಿಸಲಾಯಿತು   

ಹೊಸಪೇಟೆ: ವಿವಿಧ ಸಂಘ ಸಂಸ್ಥೆಗಳು ಶುಕ್ರವಾರ ನಗರದಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ಆಚರಿಸಿದವು.

ಹಿಂದುಳಿದ ವರ್ಗಗಳ ಒಕ್ಕೂಟ

‘ಹೂಗಾರ ಜಾತಿಯಲ್ಲಿ ಜನಿಸಿದ ಸಾವಿತ್ರಿಬಾಯಿ 17ನೇ ವಯಸ್ಸಿಗೆ ಶಿಕ್ಷಕಿಯಾಗಿದ್ದರು. ಸಮಾಜ ಸುಧಾರಕ ಜ್ಯೋತಿಬಾ ಫುಲೆ ಅವರನ್ನು ವಿವಾಹವಾಗಿ, ಮಹಿಳೆಯರಿಗಾಗಿಯೇ ಪುಣೆಯಲ್ಲಿ ಶಾಲೆ ಆರಂಭಿಸಿದ್ದರು. ಶಿಕ್ಷಣದಿಂದ ವಂಚಿತರಾಗಿದ್ದರಿಂದ ತಳಸಮುದಾಯದವರಿಗೆ ಅದನ್ನು ಸಾಧ್ಯವಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ಒಕ್ಕೂಟದ ಅಧ್ಯಕ್ಷ ವೈ. ಯಮುನೇಶ್‌ ಹೇಳಿದರು.

ADVERTISEMENT

‘ಸವರ್ಣಿಯರಿಂದ ನಿತ್ಯ ನರಕ ಯಾತನೆ, ಹಿಂಸೆ ಅನುಭವಿಸಿದ್ದರೂ ಕೆಳ ಸಮುದಾಯಕ್ಕೆ ಅಕ್ಷರ ದೀಕ್ಷೆ ನೀಡುವ ವೃತ್ತಿಯನ್ನು ಅವರ ಬಿಡಲಿಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಸಮಾನತೆ, ಶಿಕ್ಷಣದಿಂದ ವಂಚಿತಳಾಗಿದ್ದ ಮಹಿಳೆಗೆ ಸಾಕ್ಷರತೆ ಹಾಗೂ ವಿಚಾರವಂತರನ್ನಾಗಿ ಮಾಡಿದ ಸಾವಿತ್ರಿಬಾಯಿ ಪುಲೆಯವರು ನಮ್ಮ ದೇಶದ ಇತಿಹಾಸಕಾರರ ಉದ್ದೇಶಪೂರ್ವಕ ಅವಜ್ಞೆಗೆ ಬಲಿಯಾದದ್ದು ದುರದೃಷ್ಟಕರ’ ಎಂದರು.

ದುರ್ಗಾದೇವಿ ಮಹಿಳಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಪಾರ್ವತಿ, ರವಿಶಂಕರ ದೇವರಮನೆ, ಶ್ಯಾಮಪ್ಪ ಅಗೋಲಿ, ಕುಮಾರಸ್ವಾಮಿ, ಸೋಮಣ್ಣ, ರಾಮಕೃಷ್ಣ, ವಿಶ್ವನಾಥ ಕೌತಾಳ್, ದೇವರೆಡ್ಡಿ, ಶೇಖರ್ ಮುದ್ಲಾಪುರ, ಗೌಡಣ್ಣ ನವರ್, ಯು.ಅಶ್ವತಪ್ಪ, ಬಿಸಾಟಿ ಮೂರ್ತಿ, ಚನ್ನಪ್ಪ, ಶ್ರೀನಿವಾಸ ಕಬ್ಬೇರ್, ಲಿಂಗಮ್ಮ, ಚಂದ್ರಮ್ಮ, ನರಸಮ್ಮ, ಪದ್ಮಾವತಿ, ಲತಾ, ಭಾಗ್ಯ ಇದ್ದರು.

ಸಾವಿತ್ರಿಬಾಯಿ ಫುಲೆ ಅಂಗನವಾಡಿ

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮರೇಶ್‌ ಮಾತನಾಡಿ, ‘ಸಾವಿತ್ರಿಬಾಯಿ ಅವರು ಮಹಿಳೆಯರಿಗೆ ಶಿಕ್ಷಣ ನೀಡಿದಲ್ಲದೇ ಲಿಂಗತಾರತಮ್ಯ, ಜಾತಿಭೇದ, ಸತಿ ಪದ್ಧತಿ, ವರದಕ್ಷಿಣೆ ಪದ್ಧತಿ, ದೇವದಾಸಿ ಪದ್ಧತಿ, ಬಾಲ್ಯವಿವಾಹದ ವಿರುದ್ಧ ಧ್ವನಿ ಎತ್ತಿದ್ದರು’ ಎಂದು ತಿಳಿಸಿದರು.

ಮಾಜಿ ನಗರಸಭೆ ಸದಸ್ಯ ಚಂದ್ರಕಾಂತ್ ಕಾಮತ್, ‘ಅಂಗನವಾಡಿ ಕೇಂದ್ರಕ್ಕೆ ಸಾವಿತ್ರಿಬಾಯಿ ಅವರ ಹೆಸರಿಟ್ಟಿರುವುದು ಉತ್ತಮ ಕೆಲಸ’ ಎಂದು ಶ್ಲಾಘಿಸಿದರು.

ಶಿಕ್ಷಕಿಯರಾದ ಸರೋಜಮ್ಮ, ಸಾವಿತ್ರಮ್ಮ ಅವರನ್ನು ಸನ್ಮಾನಿಸಲಾಯಿತು. ಮೇಲ್ವಿಚಾರಕಿ ಅನುಪಮಾ, ಚನ್ನಮ್ಮ, ರುದ್ರಮುನಿ, ವಿರೂಪಾಕ್ಷ ಸ್ವಾಮಿ ಇದ್ದರು. ಸಾವಿತ್ರಿಬಾಯಿ ಜನ್ಮದಿನದ ನಿಮಿತ್ತ ಕೇಕ್‌ ಕತ್ತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.