ADVERTISEMENT

ಬಳ್ಳಾರಿ: ಡಿಸಿಆರ್‌ಇಗೆ ಈವರೆಗೆ 5 ಕೇಸು

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 3:09 IST
Last Updated 23 ಜುಲೈ 2025, 3:09 IST
ಶೋಭಾರಾಣಿ ವಿ.ಜೆ 
ಶೋಭಾರಾಣಿ ವಿ.ಜೆ    

ಬಳ್ಳಾರಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲೆ ನಡೆಯುವ ದೌರ್ಜನ್ಯ ತಡೆಯಲು, ತಪ್ಪಿತಸ್ಥರಿಗೆ ವಿಳಂಬವಿಲ್ಲದೇ ಶಿಕ್ಷೆ ಆಗುವಂತೆ ಮಾಡಲು, ಅನ್ಯಾಯಕ್ಕೆ ಒಳಗಾದವರಿಗೆ ತ್ವರಿತವಾಗಿ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ರಚಿಸಲಾಗಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ (ಡಿಸಿಆರ್‌ಇ) ಪೊಲೀಸ್‌ ಠಾಣೆ ಮಾನ್ಯತೆ ಈಗಾಗಲೇ ಸಿಕ್ಕಿದ್ದು, ಬಳ್ಳಾರಿಯಲ್ಲಿ ಠಾಣೆ ಕಾರ್ಯಾರಂಭ ಮಾಡಿದೆ. 

ರಾಜಧಾನಿ ಬೆಂಗಳೂರಿಗೆ ಎರಡು ಮತ್ತು ಪ್ರತಿ ಜಿಲ್ಲೆಗೆ ಒಂದರಂತೆ ಒಟ್ಟು 33 ವಿಶೇಷ ಪೊಲೀಸ್‌ ಠಾಣೆ ಸ್ಥಾಪಿಸಲು ರಾಜ್ಯ ಸರ್ಕಾರ ಕಳೆದ ವರ್ಷ ಆದೇಶಿಸಿತ್ತು. ಅದರಂತೆ ಬಳ್ಳಾರಿಗೂ ಒಂದು ಡಿಸಿಆರ್‌ಇ ಠಾಣೆ ಮಂಜೂರಾಗಿದ್ದು, ನಗರದ ಅನಂತಪುರ ರಸ್ತೆಯಲ್ಲಿ ಠಾಣೆ ಕಾರ್ಯ ನಿರ್ವಹಣೆ ಆರಂಭಿಸಿದೆ.

ಅಸ್ಪೃಶ್ಯತಾ ನಿಷೇಧ ಕಾಯ್ದೆ–1955 ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ–1989ರ ಅಡಿಯಲ್ಲಿ ದಲಿತರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ತನಿಖೆ ನಡೆಸಲಿರುವ ವಿಶೇಷ ಪೊಲೀಸ್‌ ಠಾಣೆ ತ್ವರಿತವಾಗಿ ಕ್ರಮ ಜರುಗಿಸಲಿದೆ.   

ADVERTISEMENT

ಕಳೆದ ಏಪ್ರಿಲ್‌ನಲ್ಲಿಯೇ ಆರಂಭವಾಗಿರುವ ಈ ವಿಶೇಷ ಠಾಣೆಗೆ ಬಳ್ಳಾರಿಯ ಕೌಲ್‌ ಬಜಾರ್‌ ಠಾಣೆಯಿಂದ 2, ಬ್ರೂಸ್‌ಪೇಟೆ, ಬಳ್ಳಾರಿ ಗ್ರಾಮಾಂತರ ಮತ್ತು ಕುರುಗೋಡು ಠಾಣೆಗಳಿಂದ ತಲಾ ಒಂದೊಂದು ಪ್ರಕರಣಗಳೂ ಸೇರಿದಂತೆ ಒಟ್ಟು 5 ಪ್ರಕರಣಗಳು ಈಗಾಗಲೇ ವರ್ಗಾವಣೆಗೊಂಡಿದ್ದು, ತನಿಖೆಯೂ ನಡೆಯುತ್ತಿದೆ.  

1974ರಲ್ಲಿ ಡಿಸಿಆರ್‌ಇ ಸ್ಥಾ‍ಪನೆ ಆಗಿದ್ದು, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಕೆಲವು ವಿಷಯಗಳಲ್ಲಿ ವಿಚಾರಣೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸುವ ಅಧಿಕಾರ ಹೊಂದಿತ್ತು. ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರು ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲು ಮಾಡುತ್ತಿಲ್ಲವೆಂದು ಆರೋಪಿಸಿ ಡಿಸಿಆರ್‌ಇ ಘಟಕದ ಬಾಗಿಲು ತಟ್ಟುತ್ತಿದ್ದರು. ಆದರೆ, ಪೊಲೀಸ್‌ ಠಾಣೆ ಮಾನ್ಯತೆಯಿಲ್ಲದೇ ಕಾನೂನು ಪ್ರಕ್ರಿಯೆ ಕಾರ್ಯಗತ ಮಾಡುವುದು ಡಿಸಿಆರ್‌ಇ ಘಟಕಕ್ಕೆ ಅಸಾಧ್ಯವಾಗಿತ್ತು. ಅಧಿಕಾರಿಗಳು ಕೇವಲ ವಿಚಾರಣೆ ನಡೆಸಿ, ಕ್ರಮ ಜರುಗಿಸುವಂತೆ ಸ್ಥಳೀಯ ಠಾಣೆಗೆ ಶಿಫಾರಸು ಮಾಡಿ, ನೊಂದವರನ್ನು ಮತ್ತೆ ಸ್ಥಳೀಯ ಠಾಣೆಗಳಿಗೇ ಕಳುಹಿಸುತ್ತಿದ್ದರು.

ಸ್ಥಳೀಯ ಠಾಣೆಗಳಲ್ಲಿ ಇರುವ ಇತರ ಕೆಲಸಗಳ ಒತ್ತಡದಿಂದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾತಿ ಪ್ರಕ್ರಿಯೆ, ತನಿಖೆ, ದೋಷಾರೋಪ ಪಟ್ಟಿ ಸಲ್ಲಿಸುವುದು ವಿಳಂಬ ಆಗುತ್ತಿತ್ತು. ತನಿಖಾಧಿಕಾರಿಗಳು, ತನಿಖೆಯನ್ನು 60 ದಿನಗಳಲ್ಲಿ ಪೂರ್ಣಗೊಳಿಸಿ ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಬೇಕಿತ್ತು. ಅದೂ ಸಾಧ್ಯವಾಗುತ್ತಿರಲಿಲ್ಲ.

ಈಗ ಡಿಸಿಆರ್‌ಇ ಘಟಕಗಳಿಗೆ ವಿಶೇಷ ಠಾಣೆ ಮಾನ್ಯತೆ ಲಭಿಸಿರುವ ಕಾರಣ, ಎಫ್‌ಐಆರ್‌ ದಾಖಲಿಸುವ ಅಧಿಕಾರ ದತ್ತವಾಗಿದೆ. ತ್ವರಿತವಾಗಿ ತನಿಖೆ ನಡೆಸಿ, ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವುದಕ್ಕೂ ನೆರವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

‌ತನಿಖಾ ಅಧಿಕಾರ ವ್ಯಾಪ್ತಿ

* ಅಸ್ಪೃಶ್ಯತಾ ನಿಷೇಧ ಕಾಯ್ದೆ– 1955
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ–1989
* ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಮತ್ತು ಇನ್ನಿತರೆ ಹಿಂದುಳಿದ – ವರ್ಗಗಳ (ಮೀಸಲಾತಿ ಮತ್ತು ನೇಮಕಾತಿ) ಕಾಯ್ದೆ– 1990

ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಈಗಾಗಲೇ ಡಿಸಿಆರ್‌ಇ ಠಾಣೆ ಆರಂಭವಾಗಿದೆ. ಠಾಣೆಗೆ ಅಗತ್ಯ ಸಿಬ್ಬಂದಿಯನ್ನೂ ಒದಗಿಸಲಾಗಿದೆ. ವಿವಿಧ ಠಾಣೆಗಳಿಂದ ಪ್ರಕರಣಗಳೂ ವರ್ಗಾವಣೆಗೊಂಡಿದ್ದು, ತನಿಖೆಯೂ ನಡೆಯುತ್ತಿದೆ. 
– ಡಾ. ಶೋಭಾರಾಣಿ ವಿ.ಜೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಳ್ಳಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.