ADVERTISEMENT

ಶಾಲಾ ಲಸಿಕಾ ಅಭಿಯಾನಕ್ಕೆ ಚಾಲನೆ

ಡಿಸೆಂಬರ್‌ 31ರ ವರೆಗೆ ಶಾಲೆಗಳಲ್ಲಿ ನಡೆಯಲಿರುವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 11:11 IST
Last Updated 11 ಡಿಸೆಂಬರ್ 2019, 11:11 IST
ಹೊಸಪೇಟೆಯ ಮಹಿಳಾ ಸಮಾಜ ಶಾಲೆಯಲ್ಲಿ ಬುಧವಾರ ಮಗುವಿಗೆ ಟಿ.ಡಿ. ಲಸಿಕೆಯ ಚುಚ್ಚುಮದ್ದು ನೀಡಲಾಯಿತು. ತಹಶೀಲ್ದಾರ್‌ ಡಿ.ಜೆ. ಹೆಗಡೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದಾರೆ
ಹೊಸಪೇಟೆಯ ಮಹಿಳಾ ಸಮಾಜ ಶಾಲೆಯಲ್ಲಿ ಬುಧವಾರ ಮಗುವಿಗೆ ಟಿ.ಡಿ. ಲಸಿಕೆಯ ಚುಚ್ಚುಮದ್ದು ನೀಡಲಾಯಿತು. ತಹಶೀಲ್ದಾರ್‌ ಡಿ.ಜೆ. ಹೆಗಡೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದಾರೆ   

ಹೊಸಪೇಟೆ: ಡಿ.ಪಿ.ಟಿ. ಹಾಗೂ ಟಿ.ಡಿ. ‘ಶಾಲಾ ಲಸಿಕಾ ಅಭಿಯಾನ’ಕ್ಕೆ ತಹಶೀಲ್ದಾರ್‌ ಡಿ.ಜೆ. ಹೆಗಡೆ ಅವರು ಬುಧವಾರ ನಗರದ ಮಹಿಳಾ ಸಮಾಜ ಶಾಲೆಯಲ್ಲಿ ಚಾಲನೆ ನೀಡಿದರು.

ಡಿ. 31ರ ವರೆಗೆ ನಡೆಯಲಿರುವ ಅಭಿಯಾನದಲ್ಲಿ ಒಂದನೇ ತರಗತಿಯ ಮಕ್ಕಳಿಗೆ ಡಿ.ಪಿ.ಟಿ. ಹಾಗೂ ಎರಡರಿಂದ ಹತ್ತನೇ ತರಗತಿಯ ಮಕ್ಕಳಿಗೆ ಟಿ.ಡಿ. ಲಸಿಕೆಯ ಚುಚ್ಚುಮದ್ದು ನೀಡಲಾಗುವುದು.

ತಾಲ್ಲೂಕಿನ 386 ಸರ್ಕಾರಿ ಹಾಗೂ ಖಾಸಗಿ ಶಾಲೆಗಳು, 438 ಅಂಗನವಾಡಿಗಳ 93,000 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಅದಕ್ಕಾಗಿ ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರನ್ನು ಒಳಗೊಂಡ 63 ತಂಡಗಳನ್ನು ರಚಿಸಲಾಗಿದೆ.

ADVERTISEMENT

‘ಈ ಲಸಿಕೆಗಳನ್ನು ಹಾಕಿಸುವುದರಿಂದ ಮಕ್ಕಳಿಗೆ ನಾಯಿಕೆಮ್ಮು, ಧನುರ್ವಾಯು, ಗಂಟಲುಮಾರಿ ರೋಗಗಳು ಬರುವುದಿಲ್ಲ. ಹಾಗಾಗಿ ಪೋಷಕರು ಆಯಾ ಶಾಲೆ, ಅಂಗನವಾಡಿಗಳಲ್ಲಿ ನಿಗದಿಪಡಿಸಿದ ದಿನದಂದು ಮಕ್ಕಳಿಗೆ ಲಸಿಕೆ ಹಾಕಿಸಬೇಕು’ ಎಂದು ತಾಲ್ಲೂಕು ಪ್ರಭಾರ ಆರೋಗ್ಯ ಅಧಿಕಾರಿ ಡಾ. ಸಿ. ಬಸವರಾಜ ತಿಳಿಸಿದರು.

ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದ ಹೆಗಡೆ, ‘ಮಕ್ಕಳಲ್ಲಿ ಗಂಟಲುಮಾರಿ ಸೇರಿದಂತೆ ಇತರೆ ರೋಗಗಳು ಬರದಂತೆ ತಡೆಯಲು ಈ ಲಸಿಕೆ ಹಾಕಲಾಗುತ್ತಿದೆ. ಮಕ್ಕಳು ಆರೋಗ್ಯವಾಗಿರಬೇಕು. ಹಾಗಾಗಿ ಸರ್ಕಾರ ಕಾಲಕಾಲಕ್ಕೆ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಲಸಿಕೆ ಹಾಕಿಸಬೇಕು’ ಎಂದು ಹೇಳಿದರು.

‘ಈ ರೀತಿಯ ಕಾರ್ಯಕ್ರಮಗಳು ಸರ್ಕಾರಿ ಶಾಲೆಗಳಲ್ಲಿ ಯಶಸ್ವಿಯಾಗಿ ನಡೆಯುತ್ತವೆ. ಆದರೆ, ಖಾಸಗಿ ಶಾಲೆಗಳವರು ಹಿಂಜರಿಯುತ್ತಾರೆ. ಅದು ದೂರವಾಗಬೇಕು. ನಮ್ಮ ನೆರೆಯ ಕೆಲವು ರಾಷ್ಟ್ರಗಳಲ್ಲಿ ಈಗಲೂ ಪೋಲಿಯೋ ಇದೆ. ಆ ಸಮಸ್ಯೆ ನಮ್ಮ ದೇಶದ ಮಕ್ಕಳಿಗೆ ಬರದಿರಲೆಂದು ಸರ್ಕಾರ ಪ್ರತಿ ವರ್ಷ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ತಪ್ಪದೇ ಅದರಲ್ಲಿ ಭಾಗವಹಿಸಿ, ಮಕ್ಕಳಿಗೆ ಲಸಿಕೆ ಹಾಕಿಸಬೇಕು’ ಎಂದು ಮನವಿ ಮಾಡಿದರು.

ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮರೇಶ್‌, ಪ್ರಾಂಶುಪಾಲರಾದ ಪದ್ಮಿನಿ ರಾವ್‌, ವೈದ್ಯರಾದ ಸತೀಶಚಂದ್ರ, ಕಮಲಮ್ಮ, ಆರೋಗ್ಯ ಇಲಾಖೆಯ ಧರ್ಮನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.