ADVERTISEMENT

ಹಿರೇಮಲ್ಲನಕೆರೆ ಶಾಲೆಗೆ ಹಸಿರ ತೋರಣ

ಶಿಕ್ಷಕರು, ವಿದ್ಯಾರ್ಥಿಗಳ ಇಚ್ಛಾಶಕ್ತಿಯಿಂದ ರೂಪುಗೊಂಡ ಆಹ್ಲಾದಕರ ಪರಿಸರ

ಕೆ.ಸೋಮಶೇಖರ
Published 20 ಡಿಸೆಂಬರ್ 2019, 19:30 IST
Last Updated 20 ಡಿಸೆಂಬರ್ 2019, 19:30 IST
ಹಿರೇಮಲ್ಲನಕೆರೆ ಸರ್ಕಾರಿ ಪ್ರೌಢಶಾಲೆ ಅಂಗಳದಲ್ಲಿ ಹಸಿರು ಪರಿಸರ
ಹಿರೇಮಲ್ಲನಕೆರೆ ಸರ್ಕಾರಿ ಪ್ರೌಢಶಾಲೆ ಅಂಗಳದಲ್ಲಿ ಹಸಿರು ಪರಿಸರ   

ಹೂವಿನಹಡಗಲಿ: ಕೈ ಬೀಸಿ ಕರೆವ ಹಸಿರು ಪರಿಸರ, ಹಕ್ಕಿಪಕ್ಷಿಗಳ ಕಲರವ, ಮನಸ್ಸಿಗೆ ಮುದ ನೀಡುವ ಆಹ್ಲಾದಕರ ವಾತಾವರಣ. ಸದಾ ತಂಪು ಸೂಸುವಈ ಶಾಲೆಯ ಅಂಗಳ ಪ್ರವೇಶಿಸಿದವರಿಗೆ, ಬೇಗನೆ ಹೊರ ಬರಲು ಮನಸ್ಸು ಆಗುವುದೇ ಇಲ್ಲ.

ಇದು, ತಾಲ್ಲೂಕಿನ ಹಿರೇಮಲ್ಲನಕೆರೆ ಗ್ರಾಮದ ಚಂಪಾಲಾಲ್ ಮುನಿಲಾಲ್ ವಸ್ತುಪಾಲ್ ಜೈನ್ ಸರ್ಕಾರಿ ಪ್ರೌಢಶಾಲೆಯ ಚಿತ್ರಣ. ಶಿಕ್ಷಕರು, ವಿದ್ಯಾರ್ಥಿಗಳ ಇಚ್ಛಾಶಕ್ತಿಯಿಂದ ಶಾಲಾ ಮೈದಾನದಲ್ಲಿ ಹಸಿರು ಪರಿಸರ ಮೈದಳೆದಿದೆ. ಗ್ರಾಮೀಣ ಸಂಪರ್ಕ ರಸ್ತೆಯ ಪಕ್ಕದಲ್ಲೇ ಇರುವ ಈ ಶಾಲೆ ತನ್ನ ಹಸಿರು ಸೊಬಗಿನಿಂದಲೇ ಕಣ್ಮನ ಸೆಳೆಯುತ್ತದೆ.

ಶಾಲೆಗೆ ಸೇರಿದ 3.25 ಎಕರೆ ವಿಶಾಲ ಅಂಗಳದಲ್ಲಿ ನಾನಾ ಬಗೆಯ ಗಿಡಮರಗಳು ನಳನಳಿಸುತ್ತಿವೆ. ಮುಖ್ಯದ್ವಾರದಲ್ಲಿ ಸಾಲಾಗಿ ಬೆಳೆದ ಕಾಡು ಬಾದಾಮಿ, ಅಶೋಕ ಗಿಡಗಳು ಶಾಲೆಯ ಅಂದ ಹೆಚ್ಚಿಸಿವೆ.

ADVERTISEMENT

ಆವರಣದಲ್ಲಿ ಬೆಳೆಸಿದ ತೆಂಗು, ತೇಗ, ಸಿಲ್ವರ್, ಬಾದಾಮಿ, ಬಂಗಾಳಿ, ಹೊಂಗೆ, ಬೇವು, ಬಿದಿರು, ಗುಲ್ ಮೊಹರ್ ಹಾಗೂ ಹಣ್ಣಿನ ಗಿಡಗಳಾದ ಮಾವು, ದಾಳಿಂಬೆ, ಸೀತಾಫಲ, ಹಲಸು, ಬೆಟ್ಟದ ನೆಲ್ಲಿ ಗಿಡಗಳು ಶಾಲೆಗೆ ಹಸಿರ ತೋರಣ ಕಟ್ಟಿವೆ. ಅನೇಕ ಬಗೆಯ ಹಕ್ಕಿಗಳು ಇಲ್ಲಿನ ಗಿಡಮರಗಳನ್ನು ಆಶ್ರಯಿಸಿದ್ದು, ಮುಂಜಾನೆ ಮತ್ತು ಸಂಜೆ ಅವುಗಳ ಕಲರವ ಕಿವಿಗೆ ಇಂಪು ನೀಡುತ್ತದೆ.

ಕಳೆದ ವರ್ಷದವರೆಗೆ ಕೈತೋಟದಲ್ಲಿ ಬೆಳೆದ ಕರಿಬೇವು, ನಿಂಬೆ, ಪಾಲಕ, ಕೊತ್ತಂಬರಿ, ಮೆಂತ್ಯೆ ಸೊಪ್ಪುಗಳನ್ನು ಬಿಸಿಯೂಟಕ್ಕೆ ಬಳಸಲಾಗುತ್ತಿತ್ತು. ದುರಸ್ತಿಗಾಗಿ ಕಾಂಪೌಂಡ್ ಕಿತ್ತು ಹಾಕಿದ್ದರಿಂದ ಈ ವರ್ಷ ಸೊಪ್ಪು ಬೆಳೆಸಿಲ್ಲ.

ಶಾಲೆಯ ಕೊಳವೆ ಬಾವಿಯಲ್ಲಿ ಎರಡು ಇಂಚು ನೀರಿದೆ. ಮುಖ್ಯಶಿಕ್ಷಕರು, ಶಿಕ್ಷಕರು ಸ್ವಂತ ಹಣ ವ್ಯಯಿಸಿ ಪೈಪ್ ಲೈನ್ ಹಾಗೂ ವಾಲ್ವ್ ಅಳವಡಿಸಿ, ಎಲ್ಲಾ ಕಡೆ ಸುಲಭವಾಗಿ ನೀರು ಹರಿಯುವ ವ್ಯವಸ್ಥೆ ಮಾಡಿದ್ದಾರೆ. ಹಸಿರೆಲೆ, ಕಸ, ತ್ಯಾಜ್ಯದಿಂದಲೇ ಗೊಬ್ಬರ ತಯಾರಿಸಿ ಗಿಡಮರಗಳಿಗೆ ಸುರಿಯುತ್ತಾರೆ.

ದೈಹಿಕ ಶಿಕ್ಷಣ ಶಿಕ್ಷಕ ರಫಿ ಅಹಮ್ಮದ್‌ ಖವಾಸ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಶಾಲಾ ಕೈತೋಟದಲ್ಲಿ ಶ್ರಮದಾನ ಮಾಡುತ್ತಾರೆ. ಹೊಸ ಗಿಡಗಳ ನೆಡುವುದು, ಕಳೆ ಕೀಳುವುದು, ನೀರು ಗೊಬ್ಬರ ಹಾಕಿ ಸಂರಕ್ಷಣೆ ಮಾಡುತ್ತಾರೆ. ಬೇಸಿಗೆ ದಿನಗಳಲ್ಲಿ ಪಾಠ, ಪ್ರವಚನಗಳು ಮರಗಳ ನೆರಳಲ್ಲೇ ನಡೆಯುತ್ತವೆ. ವಿದ್ಯಾರ್ಥಿಗಳ ಗುಂಪು ಅಧ್ಯಯನಕ್ಕೂ ಇಲ್ಲಿನ ಪರಿಸರ ಪೂರಕವಾಗಿದೆ. ಶಾಲಾ ಪರಿಸರ ಹಸಿರಾಗಿರುವಂತೆ ಶಿಕ್ಷಣ ಗುಣಮಟ್ಟವೂ ಉತ್ತಮವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.