ADVERTISEMENT

‘ಮೌಢ್ಯತೆ ತೊಡೆದು ಹಾಕಿದ್ದ ಸೇವಾಲಾಲ್‌’

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 7:58 IST
Last Updated 15 ಫೆಬ್ರುವರಿ 2021, 7:58 IST
ಹೊಸಪೇಟೆಯ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರು ಸಂತ ಸೇವಾಲಾಲ್‌ ಅವರ ಭಾವಚಿತ್ರಕ್ಕೆ ಹೂಮಳೆಗರೆದು ಗೌರವ ಸಲ್ಲಿಸಿದರು
ಹೊಸಪೇಟೆಯ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರು ಸಂತ ಸೇವಾಲಾಲ್‌ ಅವರ ಭಾವಚಿತ್ರಕ್ಕೆ ಹೂಮಳೆಗರೆದು ಗೌರವ ಸಲ್ಲಿಸಿದರು   

ವಿಜಯನಗರ (ಹೊಸಪೇಟೆ): ತಾಲ್ಲೂಕು ಆಡಳಿತದಿಂದ ಸೋಮವಾರ ನಗರದಲ್ಲಿ ಸಂತ ಸೇವಾಲಾಲ್‌ ಅವರ 282ನೇ ಜಯಂತಿ ಆಚರಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಮಾರ್ಗಗಳಲ್ಲಿ ಬಂಜಾರ ಸಮುದಾಯದ ಹೆಣ್ಣು ಮಕ್ಕಳು ತಲೆ ಮೇಲೆ ಗೋಧಿ ಸಸಿಗಳನ್ನು ಇಟ್ಟುಕೊಂಡು ತಾಲ್ಲೂಕು ಕಚೇರಿ ವರೆಗೆ ಹೆಜ್ಜೆ ಹಾಕಿದರು. ಬಳಿಕ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್‌ ಎಚ್‌. ವಿಶ್ವನಾಥ್ ಅವರು ಸೇವಾಲಾಲ್‌ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಗೃಹರಕ್ಷಕ ದಳದ ಸಮಾದೇಷ್ಠ ಅಧಿಕಾರಿ ವಾಲ್ಯಾ ನಾಯ್ಕ, ‘ಸೇವಾಲಾಲ್‌ ಅವರು ಸಮಾಜದಲ್ಲಿದ್ದ ಮೌಢ್ಯತೆ ತೊಡೆದು ಹಾಕಿದ್ದರು. ಆಧ್ಯಾತ್ಮ ಮಾರ್ಗದಿಂದ ದೇವರನ್ನು ಒಲಿಸಿಕೊಂಡು ಸಮಾಜದವರಿಗೆ ಬದುಕುವುದನ್ನು ಉಪದೇಶ ಮಾಡಿ ಆತ್ಮಾಭಿಮಾನ ಮೂಡಿಸಿದರು’ ಎಂದರು.

ADVERTISEMENT

‘ಬಂಜಾರ ಸಮಾಜದ 60 ವೀರರಲ್ಲಿ ಸೇವಲಾಲ್‌ ಅವರೇ ಆದ್ಯಪುರುಷರು. ಇವರ ಕುರಿತು ಹಲವು ಜಾನಪದ ಕಥೆಗಳು ಪ್ರಸ್ತುತದಲ್ಲಿದೆ. ಪೋರ್ಚುಗೀಸರ ಸಮಸ್ಯೆಗೆ ಪರಿಹಾರ ಒದಗಿಸಿ ಅವರಿಂದ ಮುತ್ತಿನ ಹಾರ ಪಡೆದಿದ್ದರು. ನಂತರ ಸೇವಾಲಾಲ್‌ ಅವರಿಗೆ ಮೋತಿವಾಳ ಹೆಸರು ಬಂತು’ ಎಂದು ಹೇಳಿದರು.

‘ಎಲ್ಲ ವರ್ಗದವರಿಗೂ ಸತ್ಯ, ಅಹಿಂಸೆ ಬೋಧಿಸಿದರು. ಬಂಜಾರ ಸಮುದಾಯದ ಜನರು ಅನೈತಿಕ ಹಾಗೂ ದುಶ್ಚಟಗಳಿಂದ ದೂರವಿರಲು ಕರೆಕೊಟ್ಟರು. ಸನ್ಮಾರ್ಗದಲ್ಲಿ ಮುನ್ನಡೆದು ಬದುಕು ಕಟ್ಟಿಕೊಳ್ಳಲು ಹೇಳಿದರು’ ಎಂದು ನೆನಪಿಸಿದರು.

ಎಚ್‌. ವಿಶ್ವನಾಥ್‌ ಮಾತನಾಡಿ, ‘ಸೇವಾಲಾಲ್‌ ಅವರು ಬಾಲ್ಯದಿಂದಲೇ ಬ್ರಹ್ಮಚಾರಿಯಾಗಿ ಬದುಕಿ ಬಾಳಿದರು. ಎಲ್ಲ ವರ್ಗದವರಿಗೂ ಮಾರ್ಗದರ್ಶಕರಾಗಿ ಅವರ ಸಮುದಾಯದ ಏಳಿಗೆಗೆ ಶ್ರಮಿಸಿದರು. ಹಸುಗಳನ್ನು ಮೇಯಿಸುತ್ತಾ ಕಾಡಲ್ಲಿ ಜೀವನ ನಡೆಸುತ್ತಿದ್ದ ಅಲೆಮಾರಿ ಬಂಜಾರ ಸಮುದಾಯವು ಒಂದೆಡೆ ನೆಲೆಸಲು ಕಾರಣೀಭೂತರಾದರು’ ಎಂದು ಹೇಳಿದರು.

‘ಕೋವಿಡ್–19 ಕಾರಣಕ್ಕಾಗಿ ಈ ಬಾರಿ ಸರಳವಾಗಿ ಜಯಂತಿ ಆಚರಿಸಲಾಗುತ್ತಿದೆ. ಮುಂದಿನ ವರ್ಷ ಸಮುದಾಯದ ಸಹಭಾಗಿತ್ವದೊಂದಿಗೆ ಸಂಭ್ರಮದಿಂದ ಆಚರಿಸಲಾಗುವುದು’ ಎಂದು ತಿಳಿಸಿದರು.

ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಎ.ರವಿಕುಮಾರ್, ಶಿರಸ್ತೇದಾರ್ ರಮೇಶ್ ಕುಮಾರ್‌, ಮಂಜುನಾಥ್, ಹಿರಿಯ ಕಲಾವಿದ ಮಾ.ಬ.ಸೋಮಣ್ಣ, ತಾಲ್ಲೂಕು ಬಂಜಾರ ಸಂಘದ ಎಲ್.ರಮೇಶ ನಾಯ್ಕ, ಸೇವಾಲಾಲ್ ಟ್ರಸ್ಟ್ ಅಧ್ಯಕ್ಷ ರಾಮಾಂಜಿ ನಾಯ್ಕ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಶಿವರಾಮ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.