ADVERTISEMENT

ಪರಿಪೂರ್ಣ ವ್ಯಕ್ತಿತ್ವ; ಯುವಸಮೂಹಕ್ಕೆ ಸಪ್ತಸೂತ್ರ

ಹಂಪಿ ಕನ್ನಡ ವಿಶ್ವವಿದ್ಯಾಲಯದ 28ನೇ ನುಡಿಹಬ್ಬದಲ್ಲಿ ನ್ಯಾಕ್‌ ನಿರ್ದೇಶಕ ಪ್ರೊ. ಎಸ್.ಸಿ.ಶರ್ಮಾ ಘಟಿಕೋತ್ಸವ ಭಾಷಣ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 10 ನವೆಂಬರ್ 2020, 10:23 IST
Last Updated 10 ನವೆಂಬರ್ 2020, 10:23 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ 28ನೇ ನುಡಿಹಬ್ಬದಲ್ಲಿ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನ (ನ್ಯಾಕ್‌) ನಿರ್ದೇಶಕ ಪ್ರೊ. ಎಸ್.ಸಿ.ಶರ್ಮಾ ಘಟಿಕೋತ್ಸವ ಭಾಷಣ ಮಾಡಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದ 28ನೇ ನುಡಿಹಬ್ಬದಲ್ಲಿ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನ (ನ್ಯಾಕ್‌) ನಿರ್ದೇಶಕ ಪ್ರೊ. ಎಸ್.ಸಿ.ಶರ್ಮಾ ಘಟಿಕೋತ್ಸವ ಭಾಷಣ ಮಾಡಿದರು   

ಕಮಲಾಪುರ (ಹೊಸಪೇಟೆ ತಾಲ್ಲೂಕು): ‘ಸ್ವಧರ್ಮ ಶ್ರದ್ಧೆ, ಪರಮತ ಸಹನೆ, ವಿರೋಧ ಗುಣಗಳ ಹೊಂದಾಣಿಕೆ, ಸ್ವದೇಶಾಭಿಮಾನ, ಲೋಕಕಲ್ಯಾಣ ಸಾಧನೆ, ಜ್ಞಾನಾಸಕ್ತಿ ಹಾಗೂ ಕಾಯಕ ನಿಷ್ಠೆ ಇವುಗಳು ಮನುಷ್ಯನ ವ್ಯಕ್ತಿತ್ವವನ್ನು ಪೂರ್ಣಗೊಳಿಸುತ್ತವೆ’ ಎಂದು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನ (ನ್ಯಾಕ್‌) ನಿರ್ದೇಶಕ ಪ್ರೊ. ಎಸ್.ಸಿ.ಶರ್ಮಾ ತಿಳಿಸಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ 28ನೇ ನುಡಿಹಬ್ಬದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಯುವಕರಿಗೆ ಈ ಮೇಲಿನ ಸಪ್ತ ಸೂತ್ರಗಳ ಮಹತ್ವ ಪರಿಚಯಿಸಿದರು.

‘ಯುವಸಮೂಹ ಭಾರತೀಯತೆಯ ಚೇತನ ಮತ್ತು ಆದರ್ಶಗಳನ್ನು ಗೌರವಿಸುತ್ತ, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವಕರು ಬದಲಾವಣೆಯ ಹರಿಕಾರರು. ರಾಷ್ಟ್ರದ ಪ್ರಗತಿ ಅವರ ಕೈಯಲ್ಲಿದೆ’ ಎಂದರು.

ADVERTISEMENT

‘ನಮ್ಮ ಸಂಸ್ಕಾರ, ಭಾಷೆ, ಕಾಯಕ ಧರ್ಮ ಇವುಗಳನ್ನು ಬೋಧಿಸಿದ ನಮ್ಮ ಮಹಾನ್ ಸಂಸ್ಕೃತಿಗೆ ಸರ್ವದಾ ಋಣಿಯಾಗಿರಬೇಕು. ಭಾರತೀಯ ಜ್ಞಾನ ಶರಧಿಗೆ ‘ಪರಂಪರೆಯ ಅಪಾರತೆ' ಹಾಗೂ ‘ಭವಿಷ್ಯದ ಅನಂತತೆ' ಇದೆ. ವರ್ತಮಾನದಲ್ಲಿರುವ ನಾವು ಇವೆರಡನ್ನೂ ಸಂಲಗ್ನಗೊಳಿಸಿ ಸೃಜನಶೀಲಗೊಳಿಸಿದಾಗ ಅದು ಅವಿನಾಶತ್ವವನ್ನು ಪಡೆದು ಕೃತಿ ರೂಪಕ್ಕಿಳಿದ ‘ಮಾತಾಗುತ್ತದೆ', ‘ಮಾತು ಜ್ಯೋತಿರ್ಲಿಂಗವಾಗುತ್ತದೆ’ ಎಂದು ಹೇಳಿದರು.

‘ನಮ್ಮಲ್ಲಿರುವ ಜ್ಞಾನ ಪರಂಪರೆಯನ್ನು ಶೋಧಿಸುತ್ತ ಹೋದಂತೆ ಅದು ನಮ್ಮ ಸಂಸ್ಕೃತಿಯ ಬೇರುಗಳನ್ನು ಮುಟ್ಟುತ್ತದೆ. ಅನಾದಿ ಕಾಲದಿಂದಲೂ ಮಾತೆಯರು ತಮ್ಮ ಮಕ್ಕಳಿಗೆ ಹಾಲೆರೆಯುತ್ತಾ ಕಿವಿಗೆ ಸಂಸ್ಕೃತಿಯ ಮಾಧುರ್ಯವನ್ನು ತುಂಬುತ್ತಿದ್ದರು ಎಂಬುದಕ್ಕೆ ನಮ್ಮ ಪ್ರಾಚೀನರ, ಅದರಲ್ಲೂ ಈ ಮಣ್ಣಿನ ಸೊಗಡು ಹೇಗಿತ್ತೆಂಬುದನ್ನು ಬಿಂಬಿಸುವ ಸನ್ನಿವೇಶವನ್ನು ವಿಜಯನಗರದ ಪ್ರೌಢ ಪ್ರತಾಪದೇವರಾಯನ ಮಂತ್ರಿ ಲಕ್ಷ್ಮೀಧರನನ್ನು ಅವನ ತಾಯಿ ಹೇಗೆ ಬೆಳೆಸಿದಳು ಎನ್ನುವುದನ್ನು ನೋಡಬಹುದು’ ಎಂದು ನಿದರ್ಶನ ನೀಡಿದರು.

‘ಜಗತ್ತು ಸಂಕೀರ್ಣ ವಸ್ತು-ಭಾವಾಲೋಚನೆಗಳ ಸಂಗ್ರಹಾಲಯ. ಯಾವುದು ಯೋಗ್ಯ, ಯಾವುದು ತ್ಯಾಜ್ಯ ಎಂಬುದನ್ನು ಮೇರುಸದೃಶ ಮಹಾಕಾವ್ಯಗಳು ಸಾಕ್ಷೀಕರಿಸಿ ತೋರಿಸಿವೆ. ಅವುಗಳನ್ನು ಅನುಸರಿಸಿದ ಬದುಕು ಗತಿಶೀಲ ಗುಣವಾಗಿ ಮಾನವ ಅತಿರೇಕಗಳಿಗೆ ಅವಕಾಶವಿಲ್ಲದಂತಾಗುತ್ತದೆ. ಅದಕ್ಕೆ ಉತ್ತಮ ಸಾದೃಶರೂಪವೆಂದರೆ ಇಲ್ಲಿ ಉಗಮಿಸಿದ ಶರಣ ಸಂಸ್ಕಾರವೂ ಒಂದು’ ಎಂದರು.

‘ಕಾಯಕ-ದಾಸೋಹ' ಎಂಬ ಅವಳಿ ಸಿದ್ಧಾಂತಗಳು ಇಂದಿನ ಅರ್ಥಶಾಸ್ತ್ರಜ್ಞರಿಗೂ ಸವಾಲಾಗುವಂತಹ, ಜಿಜ್ಞಾಸೆ ತರುವಂತಹ ಆರ್ಥಿಕ ಸಿದ್ಧಾಂತ ಜಗತ್ತಿನ ಯಾವ ಮೂಲೆಯಲ್ಲಿಯೂ ಆವಿರ್ಭವಿಸದೆ ಇಲ್ಲಿನ ಸೊಗಡಿನಲ್ಲಿ ಅಡಗಿತ್ತು ಎಂದರೆ ಉತ್ಪ್ರೇಕ್ಷೆಯಲ್ಲ. ಕ್ರಿಯೆಯೇ ಸೃಷ್ಟಿಯ ಮೂಲ ನಿಯಮ. ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕಾದ್ದು ಜೀವಿಗಳ ಕರ್ತವ್ಯ. ‘ಕ್ರಿಯೆಯನರಿದವಂತೆ ಗುರುವಿಲ್ಲ' ಎಂದು ಅಂಬಿಗರ ಚೌಡಯ್ಯ ಹೇಳಿದರೆ, ‘ಕ್ರಿಯಾ ಮಥನವಿಲ್ಲದೆ ಕಾಣಬಂದುದೇ ಇಕ್ಷುವಿನೊಳಗಣ ಮಧುರ' ಎಂದು ಅಲ್ಲಮ ಪ್ರಶ್ನಿಸುತ್ತಾನೆ. ‘ಕಾರೆಯ ಸೊಪ್ಪಾದರೂ ಕಾಯಕದಿಂದ ಬಂದುದು ಲಿಂಗಕ್ಕರ್ಪಿತವಲ್ಲದೆ ದುರಾಸೆಯಿಂದ ಬಂದುದು ಅನರ್ಪಿತ' ಎಂದು ನುಲಿಯ ಚಂದಯ್ಯರು ಸಾರುತ್ತಾರೆ’ ಎಂದು ವಿವರಿಸಿದರು.

‘ಅನುಭವ ಮಂಟಪದಲ್ಲಿ ಜಿಜ್ಞಾಸೆಗೆ ಒಳಪಡುತ್ತಿದ್ದ ಪ್ರಶ್ನೆಗಳು ಅಷ್ಟು ಸರಳವಾಗಿರಲಿಲ್ಲ. ಈ ನೆಲದಲ್ಲಿ ಅಂದು ಶರಣರು ಬಾರಿಸಿದ ಡಿಂಡಿಮ ಇಂದಿಗೂ ಅನುರಣಗೊಳ್ಳುತ್ತಿದೆ. ಅದರ ಅರ್ಥವಂತಿಕೆ ಹಾಗೂ ವ್ಯಾಪ್ತಿ ಕೃಷ್ಣ ರಂಧ್ರದಂತೆ ಹಿಗ್ಗುತ್ತಾ ಜ್ಞಾನ, ಆಧ್ಯಾತ್ಮ ಹಾಗೂ ಸರಳ ಜೀವನದ ಕಂಪನ್ನು ಹರಡುತ್ತಿದೆ’ ಎಂದರು.

‘ಮನುಷ್ಯನ ಮನೋವಿಕಾಸವು ಹೃದಯವಂತಿಕೆ, ವಿಚಾರ ಶಕ್ತಿ ಮತ್ತು ಕಾರ್ಯತತ್ಪರತೆ ಇಂತಹ ಸಮಾಜಮುಖಿಯಾದ ಗುಣಗಳಲ್ಲಿ ವ್ಯಕ್ತಿತ್ವ ನಿರ್ಮಾಣಕ್ಕೆ ನಾಂದಿಯಾಗುತ್ತದೆ. ಮತ್ತೊಂದೆಡೆ ಇಂತಹ ಗುಣಗಳು ಮಾನವನ ಇಚ್ಛಾಶಕ್ತಿಯ ಕೇಂದ್ರಬಿಂದು. ಈ ಜಗತ್ತಿನಲ್ಲಿ ನಮ್ಮ ಕಣ್ಣಿಗೆ ಕಾಣುವ ಎಲ್ಲ ಕರ್ಮಗಳು, ಮಾನವ ಸಮಾಜದಲ್ಲಿ ನಡೆಯುವ ಸಮಸ್ತ ವ್ಯವಹಾರಗಳು, ಕಾರ್ಯಗಳು ಇವೆಲ್ಲ ನಮ್ಮ ‘ಇಚ್ಛಾಶಕ್ತಿಯ ಅಭಿವ್ಯಕ್ತಿ'. ಈ ಇಚ್ಛಾಶಕ್ತಿಗೆ ಮೂಲ ಸದ್ಗುಣ ಸಂಪನ್ನತೆ. ಇವು ಇಚ್ಛಾಶಕ್ತಿ ಎಂಬ ಕರ್ಮದ ಮೂಲಕ ನೆರವೇರುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.